ಯೇಸುಪ್ರಕಾಶ್ ಸಾಮಾಜಿಕ ಕಳಕಳಿಯ ನಟ

sgr drama
ಸಾಗರದಲ್ಲಿ ಆಯೋಜಿಸಿದ್ದ ರಂಗ ಸಂಭ್ರಮ ನಾಟಕೋತ್ಸವದಲ್ಲಿ ರಂಗ ಸಾಧಕರನ್ನು ಸನ್ಮಾನಿಸಲಾಯಿತು. ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಗಣಪತಿ ಶಿರಳಗಿ, ಡಾ. ಜಿ.ಎಸ್.ಭಟ್, ಟಿ.ವಿ.ಪಾಂಡುರಂಗ, ಮ.ಸ.ನಂಜುಂಡಸ್ವಾಮಿ ಇತರರಿದ್ದರು.
Published on

ಸಾಗರ: ಒಬ್ಬ ಕಲಾವಿದ, ಸಮಾಜ ಸೇವಕ ತನ್ನ ಬದುಕನ್ನೇ ಕಾಯಕಕ್ಕಾಗಿ ಅರ್ಪಿಸಿಕೊಂಡಿರುತ್ತಾನೆ. ಅಂತಹ ಅಪರೂಪದ ವ್ಯಕ್ತಿತ್ವ ಇಟ್ಟುಕೊಂಡು ಬದುಕು ನಡೆಸಿದವರು ಬಹುಮುಖಿ ಕಲಾವಿದ ಯೇಸುಪ್ರಕಾಶ್. ನಮ್ಮೆದುರು ಇಂದು ಅವರು ದೈಹಿಕವಾಗಿ ಇಲ್ಲದಿದ್ದರೂ ಎಲ್ಲರ ಮನಸ್ಸಿನಾಳದಲ್ಲಿ ನಿಂತಿದ್ದಾರೆ ಎಂದು ಸದಾನಂದ ಯೋಗಾಶ್ರಮ ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.

ಸಾಗರದ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಅಭಿನಯ ಸಾಗರ ರಂಗಮಂಚ, ಜೋಷಿ ಫೌಂಡೇಷನ್, ಉದಯ ಕಲಾವಿದರು ಸಂಸ್ಥೆಯಿಂದ ಎನ್.ಆರ್.ಮಾಸೂರು, ಕಾಗೋಡು ಅಣ್ಣಪ್ಪ ಮತ್ತು ಯೇಸುಪ್ರಕಾಶ್ ಸ್ಮರಣಾರ್ಥ ಏರ್ಪಡಿಸಿರುವ 7 ದಿನಗಳ ನೆನಪಿನ ರಂಗ ಸಂಭ್ರಮ ನಾಟಕೋತ್ಸವದ ಆರನೇ ದಿನದ ಕಾರ್ಯಕ್ರಮದಲ್ಲಿ ಯೇಸು ಪ್ರಕಾಶ್ ಕುರಿತ ‘ಏಸು ನೆನಹುಗಳ ಹೊತ್ತು’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಜಾತಿ, ಮತ, ಪಂಥ, ಧರ್ಮವನ್ನು ಮೀರಿದ ಆದರ್ಶದ ಬದುಕನ್ನು ಅವರು ನಡೆಸಿದ್ದರು. ಒಂದು ಆಲದ ಮರದಂತೆ ಇದ್ದು ಬಹಳಷ್ಟು ಜನರಿಗೆ ನೆರವಾಗಿದ್ದಾರೆ. ರಂಗಭೂಮಿ, ಯಕ್ಷಗಾನ, ಸಿನಿಮಾ ಹೀಗೆ ಹಲವು ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ಅವರು ಸರ್ಕಾರದ ಸಹಾಯವಿಲ್ಲದೆ ಗ್ರಾಮಸ್ಥರ ಸಹಕಾರದಿಂದ ಗ್ರಾಮಗಳ ಕೆರೆ ಹೂಳೆತ್ತಿ ಅದು ಉಪಯೋಗಕ್ಕೆ ಬರುವಂತೆ ಮಾಡಿದ್ದರು ಎಂದರು.

ಉಪನ್ಯಾಸಕ ಡಾ. ಸರ್ಫ್ರಾಜ್ ಚಂದ್ರಗುತ್ತಿ ಮಾತನಾಡಿ, ಯೇಸುಪ್ರಕಾಶ್ ಈಗ ಭೌತಿಕವಾಗಿ ಇಲ್ಲದಿದ್ದರೂ ಪುಸ್ತಕ ರೂಪದಲ್ಲಿ ಮತ್ತೆ ಹುಟ್ಟಿ ಬಂದಿದ್ದಾರೆ. ಪುಸ್ತಕಕ್ಕೆ ಸಾವಿಲ್ಲ. ಕಲಾವಿದ, ನಟರಾಗಿ, ಸಾಂಸ್ಕೃತಿಕ ಆಯಾಮದ ಜತೆಗೆ ನಮ್ಮೂರ ಕೆರೆ, ಜಲ ಉಳಿಸಬೇಕೆಂಬ ಸಾಮಾಜಿಕ ಕಳಕಳಿ ಇತ್ತು. ಇವನು ನಮ್ಮವ ಎನ್ನುವ ರೀತಿ ಬಾಳಿ ಬದುಕಿ ತೋರಿಸಿದರು ಎಂದರು.

ಜೋಷಿ ಫೌಂಡೇಷನ್‌ನ ದಿನೇಶಕುಮಾರ್ ಜೋಶಿ ಮಾತನಾಡಿ, ನಾಟಕ, ಸಂಗೀತ, ಚಿತ್ರಕಲೆ ಮುಂತಾದವು ಮನುಷ್ಯನು ಕತ್ತಲೆಯಿಂದ ಬೆಳಕಿನೆಡೆಗೆ ಸಾಗಲು ಇರುವ ಮಾರ್ಗಗಳು. ಜೀವನವೆಂಬುದೇ ಒಂದು ನಾಟಕ. ಅಲ್ಲಿನ ಪಾತ್ರದಲ್ಲಿ ನಾನು ಏನು ಎಂಬುದನ್ನು ಗುರುತಿಸಿಕೊಳ್ಳಬೇಕು ಎಂದರು.

ರಂಗ ಸಾಧಕರಾದ ಎಸ್.ಕಿರಣ್, ಗಣಪತಿ ಎಂ. ಹೆಗಡೆ ನಂದಿತಳೆ, ಸಾವಿತ್ರಿ ಮೂರ್ತಿ, ಸತ್ಯನಾರಾಯಣ ಸಿರಿವಂತೆ, ಮೈಲಪ್ಪ, ಗಣಪತಿ ಕಾಮತ್ ಅವರನ್ನು ಸನ್ಮಾನಿಸಲಾಯಿತು.

ಬೆಂಗಳೂರಿನ ಸೈಡ್‌ವಿಂಗ್ ರಂಗ ತಂಡ ‘ಸಡನ್ನಾಗ್ ಸತ್ಹೋದ್ರೆ ನಾಟಕ ಪ್ರದರ್ಶಿಸಿತು. ಪತ್ರಕರ್ತ ಗಣಪತಿ ಶಿರಳಗಿ, ನಿವೃತ್ತ ಪ್ರಾಚಾರ್ಯ ಡಾ. ಜಿ.ಎಸ್.ಭಟ್, ನಾಟಕೋತ್ಸವ ಸಮಿತಿ ಗೌರವಾಧ್ಯಕ್ಷ ಟಿ.ವಿ.ಪಾಂಡುರಂಗ, ಸಮಿತಿ ಪ್ರಧಾನ ಸಂಚಾಲಕ ಮ.ಸ.ನಂಜುಂಡಸ್ವಾಮಿ, ಮಧುಸೂದನ್ ಮುಂಬೈ, ಫಾದರ್ ಎಂ.ಎಸ್.ಬಲ್ಮಿ, ಪ್ರಕಾಶ್ ಭಟ್ ಶಿವಮೊಗ್ಗ, ಲಲಿತಮ್ಮ, ಶೈಲಜಾ ಪ್ರಕಾಶ್, ಮಧುನಿಷಾ, ಮೋನಿಷಾ, ಕೌಶಿಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net