ಅಗ್ರಿ-ಟೆಕ್​ ಮಿಶ್ರಫಲ: ಸಮಗ್ರ ನೋಟ-2021; ಕೃಷಿ, ವೈದ್ಯಕೀಯ, ವಿಜ್ಞಾನ-ತಂತ್ರಜ್ಞಾನ..

Agri Tech
Published on
ಕೃಷಿ ಕ್ಷೇತ್ರ ಸುಧಾರಣೆ ಉದ್ದೇಶದಿಂದ ಒಂದೂವರೆ ವರ್ಷ ಹಿಂದೆ ಜಾರಿಗೊಳಿಸಿದ್ದ ಮಹತ್ವದ ಮೂರು ಕೃಷಿ ಕಾಯ್ದೆಗಳ ಹಿಂಪಡೆತ, ಪಿಎಂಕೆಎಸ್​ವೈ ವಿಸ್ತರಣೆ, ಎಂಎಸ್​ಪಿ ಪರಿಷ್ಕರಣೆ ಮುಂತಾದವು ಈ ವರ್ಷದ ಪ್ರಮುಖ ಬೆಳವಣಿಗೆ. ಕೋವಿಡ್ ಮತ್ತು ಸಂಬಂಧಿತ ವಿಚಾರಗಳು ಈ ವರ್ಷವೂ ಕಾಡಿದ್ದು, ದೇಶೀಯವಾಗಿ ಔಷಧೋಪಕರಣಗಳ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಯಾಗಿದ್ದು ವಿಶೇಷ. ರಕ್ಷಣೆ, ವಿಜ್ಞಾನ-ತಂತ್ರಜ್ಞಾನ ಮತ್ತು ಪೂರಕ ಕ್ಷೇತ್ರಗಳಲ್ಲೂ ಸಾಕಷ್ಟು ಬೆಳವಣಿಗೆಗಳು ದಾಖಲಾಗಿವೆ.

ಕೃಷಿ ಕಾಯ್ದೆ ವಾಪಸ್

ಹರಿಯಾಣ, ಪಂಜಾಬ್ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಪ್ರತಿಭಟನೆಗೆ ಕಾರಣವಾಗಿದ್ದ 3 ಕೃಷಿ ಕಾನೂನುಗಳನ್ನು ಹಿಂಪಡೆಯುವ ಮಸೂದೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಡಿ.1 ರಂದು ಅಂಕಿತ ಹಾಕಿದರು. ಇದರೊಂದಿಗೆ ಈ ಕೃಷಿ ಕಾನೂನುಗಳು ಅಲ್ಪಾವಧಿಯಲ್ಲೇ ಮೊಟಕುಗೊಂಡಿವೆ. ಈ ಕಾನೂನುಗಳ ವಿರುದ್ಧ ದೆಹಲಿಯ ಗಡಿಭಾಗದಲ್ಲಿ ರೈತರು ಒಂದೂವರೆ ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದರು. ಕಾನೂನು ಹಿಂಪಡೆಯುವ ಮಸೂದೆಯನ್ನು ನ.29ರಂದು ಸಂಸತ್ತಿನಲ್ಲಿ ಮಂಡಿಸಲಾಗಿತ್ತು. ಬಹುಬೇಗನೆ ಇದು ಉಭಯ ಸದನಗಳಲ್ಲಿ ಅಂಗೀಕಾರವಾಯಿತು. ಈ ಕಾನೂನುಗಳನ್ನು ರಾಷ್ಟ್ರಹಿತಕ್ಕಾಗಿ ಹಿಂಪಡೆಯುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ನ.19ರಂದು ಘೋಷಿಸಿದ್ದರು.

ವಿವಾದಿತ ಕೃಷಿ ಕಾನೂನುಗಳು: (1) ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ನೆರವು)ಕಾಯ್ದೆ-2020 (2) ರೈತರ (ಸಬಲೀಕರಣಮತ್ತು ಸಂರಕ್ಷಣೆ)ಬೆಲೆ ಖಾತರಿ ಮತ್ತು ಕೃಷಿ ಜಮೀನು ಸೇವೆಗಳ ಒಪ್ಪಂದ ಕಾಯ್ದೆ-2020(3) ಅಗತ್ಯವಸ್ತುಗಳ ಕಾಯ್ದೆ(1955ಕ್ಕೆ ತಂದಿರುವ ತಿದ್ದುಪಡಿ)2020

ರಾಷ್ಟ್ರೀಯ ಕೃಷಿಕರ ದತ್ತಾಂಶ: ದೇಶದ ಕೃಷಿಕರಿಗೆ ಎಲ್ಲ ಸೌಲಭ್ಯಗಳೂ ಒಂದೇ ವೇದಿಕೆಯಲ್ಲಿ ದೊರಕುವಂತೆ ಮಾಡಲು ರಾಷ್ಟ್ರೀಯ ಕೃಷಿಕರ ದತ್ತಾಂಶ ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರ ಜು.27ರಂದು ಲೋಕಸಭೆಯಲ್ಲಿ ಘೋಷಿಸಿತು.

ತೆಂಗು ಅಭಿವೃದ್ಧಿ ಮಂಡಳಿ ಮಸೂದೆ ಅಂಗೀಕಾರ: ತೆಂಗು ಅಭಿವೃದ್ಧಿ ಮಂಡಳಿಯ ಸದಸ್ಯರ ಸಂಖ್ಯೆ 4ರಿಂದ 6ಕ್ಕೆ ಏರಿಸುವ ಮತ್ತು ಚೇರ್ಮನ್ ಅನ್ನು ನಾನ್-ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ಬದಲಾಯಿಸುವ ಉದ್ದೇಶದ ತೆಂಗು ಅಭಿವೃದ್ಧಿ ಮಂಡಳಿ (ತಿದ್ದುಪಡಿ) ಮಸೂದೆ 2021 ಅನ್ನು ಸಂಸತ್ ಅಂಗೀಕರಿಸಿದೆ. ಗುಜರಾತ್ ಮತ್ತು ಆಂಧ್ರಪ್ರದೇಶಕ್ಕೆ ಸದಸ್ಯತ್ವ ಲಭ್ಯವಾಗಲಿದೆ.

ಸರಯೂ ಯೋಜನೆ: ಸರಯೂ ಕಾಲುವೆ ರಾಷ್ಟ್ರೀಯ ಯೋಜನೆಗೆ ಉತ್ತರ ಪ್ರದೇಶದ ಬಲರಾಮಪುರ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಡಿ.11ರಂದು ಚಾಲನೆ ನೀಡಿದರು. 9,802 ಕೋಟಿ ರೂಪಾಯಿ ಯೋಜನೆ ಇದಾಗಿದ್ದು, 6,600 ಕಿ.ಮೀ. ಉದ್ದದ ಕಾಲುವೆಗಳು 25-30 ಲಕ್ಷ ರೈತರಿಗೆ ನೀರಾವರಿ ಅನುಕೂಲ ಒದಗಿಸಲಿದೆ.

ಕೆನ್-ಬೆಟ್ವಾ ನದಿಗಳ ಜೋಡಣೆ: ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ನಡುವಿನ ಪ್ರದೇಶದ ನೀರಾವರಿ ಕೊರತೆ ನೀಗಿಸಲು ಕೆನ್-ಬೆಟ್ವಾ ನದಿಗಳ ಜೋಡಣೆಯ 44,605 ಕೋಟಿ ರೂಪಾಯಿ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಡಿ.6ರಂದು ಒಪ್ಪಿಗೆ ನೀಡಿದೆ.

ಅಸ್ಸಾಂ ಟೀ ಪುಡಿ ಕಿಲೋಗೆ 1 ಲಕ್ಷ ರೂ.: ಅಸ್ಸಾಂನ ಮನೋಹರಿ ಗೋಲ್ಡ್ ಟೀ ಒಂದು ಕಿಲೋ 1 ಲಕ್ಷ ರೂಪಾಯಿಗೆ ಹರಾಜು ಆಗಿ ಹೊಸ ದಾಖಲೆ ಬರೆಯಿತು. ಸೌರವ್ ಟೀ ಟ್ರೇಡರ್ಸ್ ಇಷ್ಟು ದರ ನೀಡಿ ಮನೋಹರಿ ಗೋಲ್ಡ್ ಟೀ ಖರೀದಿಸಿತು.

ದೇಶದ ಮೊದಲ ಪಾಮೆಟಮ್: ಉತ್ತರಾಖಂಡ ಅರಣ್ಯ ಇಲಾಖೆ ದೇಶದ ಮೊದಲ ಪಾಮೆಟಮ್ (ತಾಳೆಮರಗಳ ಉದ್ಯಾನ) ಅನ್ನು ನೈನಿತಾಲ್ ಜಿಲ್ಲೆಯ ಹಲ್​ದ್ವಾನಿ ಪ್ರದೇಶದಲ್ಲಿ ಸೆ.26ರಂದು ಲೋಕಾರ್ಪಣೆಗೊಳಿಸಿತು. ಮೂರು ಎಕರೆ ಪ್ರದೇಶದಲ್ಲಿ 110 ಮಾದರಿಯ ತಾಳೆಮರಗಳಿವೆ.

ಡಿಆರ್​ಡಿಒ ಮೈಲಿಗಲ್ಲು

  • ಭಾರತದ ರಕ್ಷಣಾ ಸಾಮರ್ಥ್ಯ ಹೆಚ್ಚಿಸುವ ಹೊಸ ತಲೆಮಾರಿನ ಅಲ್ಪ ಶ್ರೇಣಿಯ ಖಂಡಾಂತರ ಕ್ಷಿಪಣಿ (ಎಸ್​ಆರ್​ಬಿಎಂ) ‘ಪ್ರಳಯ್’ನ ಚೊಚ್ಚಲ ಪ್ರಯೋಗ ಪರೀಕ್ಷೆ ಯಶಸ್ವಿಯಾಗಿದೆ. ಚೀನಾದ ಎಂ20 ಎಂದೇ ಪ್ರಸಿದ್ಧವಾಗಿರುವ ಡೊಂಗ್​ಫೆಂಗ್ 12 (ಸಿಎಸ್​ಎಸ್-ಎಕ್ಸ್-15) ಕ್ಷಿಪಣಿ ಮತ್ತು ರಷ್ಯಾದ 9ಕೆ720 ಇಸ್ಕಾಂಡರ್ ಕ್ಷಿಪಣಿಗೆ ಸರಿಸಮ ನಿಲ್ಲಬಲ್ಲ ಕ್ಷಿಪಣಿ ಈ ಪ್ರಳಯ್.
  • ಒಡಿಶಾ ಕರಾವಳಿಯ ಡಾ.ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿ ‘ಅಗ್ನಿ ಪಿ’ (ಅಗ್ನಿ ಪ್ರೖೆಮ್ ಪರೀಕ್ಷಾರ್ಥ ಉಡಾವಣೆ ಡಿ.18ರಂದು ಯಶಸ್ವಿ ಆಗಿದೆ. ರೇಂಜ್ 1,000 ಕಿ.ಮೀ.ಯಿಂದ 2,000 ಕಿ.ಮೀ. ಇದ್ದು, ಇಂಡೋ-ಪೆಸಿಫಿಕ್​ನ ವ್ಯಾಪ್ತಿಯಲ್ಲಿ ಶತ್ರುನಾಶಕ್ಕೆ ಬಳಸಬಹುದಾಗಿದೆ.
  • ಐದು ಸಾವಿರ ಕಿಲೋಮೀಟರ್​ವರೆಗಿನ ಗುರಿ ಮೇಲೆ ನಿಖರವಾಗಿ ದಾಳಿ ಮಾಡುವ ಸಾಮರ್ಥ್ಯದ ‘ಅಗ್ನಿ-5’ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಭಾರತ ಅ.27ರಂದು ಯಶಸ್ವಿಯಾಗಿ ಪ್ರಯೋಗಿಸಿದೆ. ಪದೇಪದೆ ಕ್ಯಾತೆ ತೆಗೆಯುವ ಚೀನಾಕ್ಕೆ ಇದು ಖಡಕ್ ಸಂದೇಶ ಎಂದೇ ಪರಿಗಣಿಸಲಾಗಿದೆ.
  • ಆಕಾಶ್ ಕ್ಷಿಪಣಿಯ ಹೊಸ ಅವತಾರ ‘ಆಕಾಶ್ ಪ್ರೖೆಂ’ ಸೆ.27ರಂದು ಒಡಿಶಾದ ಚಾಂದಿಪುರ ಸಮಗ್ರ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೊಳಪಡಿಸಲಾಗಿತ್ತು. ಕಲ್ಪಿತ ಶತ್ರು ಪಡೆಯ ವಿಮಾನದ ಮೇಲೆ ನಿಖರ ದಾಳಿ ಮಾಡಿ ತನ್ನ ಕ್ಷಮತೆಯನ್ನು ಸಾಬೀತು ಪಡಿಸಿತು.
  • ಭಾರತೀಯ ಸೇನೆಗೆ ಬಲತುಂಬುವ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಮ್ಯಾನ್-ಪೋರ್ಟೆಬಲ್ ಟ್ಯಾಂಕ್-ನಿರೋಧಕ ಕ್ಷಿಪಣಿಯ (ಎಂಪಿಎಟಿಜಿಎಂ) ಪರೀಕ್ಷೆಯನ್ನು ಡಿಆರ್​ಡಿಒ ಯಶಸ್ವಿಯಾಗಿ ನೆರವೇರಿಸಿತ್ತು.
  • ಭೂಮಿಯಿಂದ ಆಕಾಶಕ್ಕೆ ನೆಗೆಯುವ ಆಕಾಶ್-ಎನ್​ಜಿ (ನ್ಯೂ ಜನರೇಶನ್) ಕ್ಷಿಪಣಿಯನ್ನು ಡಿಆರ್​ಡಿಒ ಆಗಸ್ಟ್​ನಲ್ಲಿ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿತು.

ಇಸ್ರೋ ಮೇರುಸಾಧನೆ

  • ಬಾಹ್ಯಾಕಾಶದಲ್ಲಿ ಅಮೆರಿಕದ ಲೂನಾರ್ ರಿಕನ್ನೈಸ್ಸನ್ಸ್ ಆರ್ಬಿಟರ್ (ಎಲ್​ಆರ್​ಒ) ಭಾರತದ ಚಂದ್ರಯಾನ 2 ಡಿಕ್ಕಿ ಹೊಡೆಯುವುದನ್ನು ತಪ್ಪಿಸಲಾಗಿದೆ. ಇದಕ್ಕಾಗಿ ಚಂದ್ರಯಾನದ ಕಕ್ಷೆಯಲ್ಲಿ ಸ್ವಲ್ಪ ವ್ಯತ್ಯಾಸ ಮಾಡಲಾಗಿತ್ತು. ಅಕ್ಟೋಬರ್ 20ರಂದು ಈ ಎರಡೂ ಉಪಗ್ರಹಗಳು ಚಂದ್ರನ ಉತ್ತರ ಧ್ರುವದ ಸಮೀಪ ಡಿಕ್ಕಿ ಹೊಡೆಯಬಹುದು ಎಂದು ಒಂದು ವಾರ ಮುಂಚಿತವಾಗಿ ಅಂದಾಜಿಸಿದ ಕಾರಣ ಸಂಭಾವ್ಯ ಅಪಘಾತವನ್ನು ತಪ್ಪಿಸುವುದು ಸಾಧ್ಯವಾಗಿದೆ ಎಂದು ಇಸ್ರೋ ಹೇಳಿತು.
  • ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯಾನ ಗಗನಯಾನದಲ್ಲಿ ಬಳಕೆಯಾಗುವ ಲಿಕ್ವಿಡ್ ಪ್ರೊಪಲೆಂಟ್ ವಿಕಾಸ್ ಎಂಜಿನ್​ನ ದೀರ್ಘಕಾಲೀನ ಪರೀಕ್ಷೆಯನ್ನು ಇಸ್ರೋ ಜುಲೈ 14ರಂದು ಯಶಸ್ವಿಯಾಗಿ ನೆರವೇರಿಸಿದೆ. ಗಗನಯಾನಕ್ಕೆ ಇಂಜಿನ್ ಅರ್ಹತೆ ಪಡೆಯಲು ಈ ಪರೀಕ್ಷೆ ಮುಖ್ಯವಾಗಿದೆ.
  • ಬ್ರೆಜಿಲ್​ನ ಮಹತ್ವಾಕಾಂಕ್ಷೆಯ ಅಮೆಜೋನಿಯಾ-1 ಸೇರಿ 19 ಉಪಗ್ರಹಗಳನ್ನು ಒಳಗೊಂಡ ಇಸ್ರೋದ ಪೋಲಾರ್ ರಾಕೆಟ್ ಫೆ.28ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ‘ಪಿಎಸ್​ಎಲ್​ವಿ-ಸಿ 51’ ಉಡಾವಣೆ ಮಾಡಲಾಗಿತ್ತು. ಇಸ್ರೋ ಪಾಲಿನ ಈ ವರ್ಷದ ಮೊದಲ ಉಡಾವಣೆ ಇದಾಗಿತ್ತು.

90 ನಿಮಿಷದಲ್ಲಿ ಒಮಿಕ್ರಾನ್ ಪತ್ತೆ: ಐಐಟಿ ದೆಹಲಿಯ ಕುಸುಮಾ ಸ್ಕೂಲ್ ಆಫ್ ಬಯಲಾಜಿಕಲ್ ಸೈನ್ಸಸ್​ನ ಸಂಶೋಧಕರ ತಂಡ ಆರ್​ಟಿ-ಪಿಸಿಆರ್ ಆಧಾರಿತ ಪರೀಕ್ಷೆಯನ್ನು ಅಭಿವೃದ್ಧಿಪಡಿಸಿದ್ದು, ಇದರಲ್ಲಿ ಒಮಿಕ್ರಾನ್ ಸೋಂಕನ್ನು 90 ನಿಮಿಷದಲ್ಲಿ ಪತ್ತೆ ಹಚ್ಚಬಹುದು.

ಕಾರ್ನಿಯಲ್ ಕಸಿಗೆ ಹೈಡ್ರೋಜೆಲ್: ಹೈದರಾಬಾದ್​ನ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾರ್ನಿಯಲ್ ಕಸಿ ಪ್ರಕ್ರಿಯೆಗೆ ಬದಲಾಗಿ ಬಳಸುವ ಹೈಡ್ರೋಜೆಲ್ ಅನ್ನು ಅಭಿವೃದ್ಧಿಪಡಿಸಿ ವೈದ್ಯಕೀಯ ಜಗತ್ತಿನ ಗಮನಸೆಳೆಯಿತು.

ಕೊವೊವಾಕ್ಸ್​ಗೆ ಅನುಮತಿ: ಭಾರತದ ಸೆರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿದ ಕೊವೊವಾಕ್ಸ್ ಲಸಿಕೆಯನ್ನು ಮಕ್ಕಳಿಗೆ ತುರ್ತು ಸಂದರ್ಭದಲ್ಲಿ ಬಳಸಲು ವಿಶ್ವ ಆರೋಗ್ಯ ಸಂಸ್ಥೆ ಡಿ.17ರಂದು ಅನುಮತಿ ನೀಡಿತು.

ಮೆಟಾವರ್ಸ್ ಎಂಬ ಹೊಸ ಲೋಕ: ಫೇಸ್​ಬುಕ್ ಕಂಪನಿ ತನ್ನ ಹೆಸರನ್ನು ಮೆಟಾ ಎಂದು ಬದಲಾಯಿಸಿಕೊಂಡು ಮೆಟಾವರ್ಸ್​ನ ಅದ್ಭುತ ಲೋಕವನ್ನು ಬಳಕೆದಾರರಿಗೆ ಪರಿಚಯಿಸಿದೆ. ಇದರ ಬೆನ್ನಿಗೆ, ಮೈಕ್ರೋಸಾಫ್ಟ್ ಕೂಡ ಮೆಷ್ ಎಂಬ ತನ್ನ ವರ್ಚುವಲ್ ಲೋಕವನ್ನು ಟೀಮ್್ಸ ಬಳಕೆದಾರರಿಗೆ ಪರಿಚಯಿಸಿದೆ. ವಿವಿಧ ಕಂಪನಿಗಳು ಈ ವರ್ಚುವಲ್ ಲೋಕಕ್ಕೆ ಪೂರಕವಾಗಿ ಕೆಲಸ ಮಾಡುತ್ತಿವೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ...

  • ಪರಮಾಣು ಸಮ್ಮಿಳನ ಪ್ರಯೋಗದ ಮೂಲಕ ‘ಕೃತಕ ಸೂರ್ಯ’ನನ್ನು ನಿರ್ವಿುಸುವ ಪ್ರಯತ್ನ ಮುಂದುವರಿಸಿ ಎಕ್ಸ್​ಪೆರಿಮೆಂಟಲ್ ಅಡ್ವಾನ್ಸ್ ್ಡ ಸೂಪರ್​ಕಂಡಕ್ಟಿಂಗ್ ಟೊಕಮಾಕ್ (ಇಎಎಸ್​ಟಿ)ಗೆ ಡಿಸೆಂಬರ್​ನಲ್ಲಿ ಚಾಲನೆ ನೀಡಿದ ಚೀನಾ.
  • ಅಮೆರಿಕದ ನಾಸಾ ಸೂರ್ಯನ ಅಧ್ಯಯನಕ್ಕೆ ಕಳುಹಿಸಿದ ಪಾರ್ಕರ್ ಸೋಲಾರ್ ಪ್ರೋಬ್ ಸೂರ್ಯನ ಕಾಂತೀಯ ವಲಯ ಕರೊನಾವನ್ನು ಏಪ್ರಿಲ್ 28ರಂದು ಪ್ರವೇಶಿಸಿ, ಡಿಸೆಂಬರ್​ನಲ್ಲಿ ಸೂರ್ಯನಿಗೆ ಇನ್ನೂ ಸನಿಹಕ್ಕೆ ಹೋಗಿದೆ.
  • ಹೈಪರ್ ಸಾನಿಕ್ ಮಿಸೈಲನ್ನು ಆಗಸ್ಟ್ ತಿಂಗಳಲ್ಲಿ ಚೀನಾ ಪರೀಕ್ಷಿಸಿತ್ತು ಎಂಬ ವಿಚಾರ ಜಗತ್ತಿನಾದ್ಯಂತ ಚರ್ಚೆಗೆ ಒಳಗಾಯಿತು. ತಾನು ಪರೀಕ್ಷಿಸಿದ್ದು ಕ್ಷಿಪಣಿಯನ್ನಲ್ಲ; ಬಾಹ್ಯಾಕಾಶ ನೌಕೆಯನ್ನು ಎಂದು ಚೀನಾ ಸ್ಪಷ್ಟೀಕರಣ ನೀಡಿತು.

ಡಿಆರ್​ಡಿಒ 2-ಡಿಜಿ ಔಷಧ: ಕರೊನಾ ಸೋಂಕಿತರಲ್ಲಿ ಹೆಚ್ಚಿನ ಮಂದಿ ಆಮ್ಲಜನಕ ಸ್ವೀಕೃತಿ ಕೊರತೆ ಅನುಭವಿಸುತ್ತ ಕೃತಕ ಆಮ್ಲಜನಕಕ್ಕೆ ಪರದಾಡುವ ವೇಳೆ ಬೆಂಗಳೂರಿನ ಡಿಆರ್​ಡಿಒ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ಕರೊನಾ ಸೋಂಕಿತರಿಗೆ ವೈದ್ಯಕೀಯ ಆಮ್ಲಜನಕದ ಮೇಲಿನ ಅವಲಂಬನೆ ಕಡಿಮೆ ಮಾಡುವ 2-ಡಿಜಿ ಔಷಧ ಅಭಿವೃದ್ಧಿಪಡಿಸಿ ನೆರವಾಯಿತು.

ಡಿಆರ್​ಡಿಒ ಡಿಪ್​ಕೋವ್ಯಾನ್ ಟೆಸ್ಟ್ ಕಿಟ್: ಆಂಟಿಬಾಡಿ ಟೆಸ್ಟ್ ಕಿಟ್ ಡಿಪ್​ಕೋವ್ಯಾನ್ ಅನ್ನು ಡಿಆರ್​ಡಿಒ ಮಾರುಕಟ್ಟೆಗೆ ಪರಿಚಯಿಸಿತು. ಈ ಕಿಟ್ ಬಳಸಿಕೊಂಡು 75 ನಿಮಿಷದಲ್ಲಿ ರಿಸಲ್ಟ್ ಕಂಡುಕೊಳ್ಳಬಹುದು. ಡಿಫೆನ್ಸ್ ಇನ್​ಸ್ಟಿಟ್ಯೂಟ್ ಆಫ್ ಫಿಸಿಯಾಲಜಿ ಆಂಡ್ ಅಲೈಡ್ ಸೈನ್ಸಸ್ ಪಾಲುದಾರಿಕೆ ಮತ್ತು ದೆಹಲಿಯ ವ್ಯಾನ್​ಗಾರ್ಡ್ ಡಯಾಗ್ನಾಸ್ಟಿಕ್ಸ್ ಪ್ರೖೆವೇಟ್ ಲಿಮೆಟೆಡ್ ಸಹಕಾರದೊಂದಿಗೆ ಇದನ್ನು ಡಿಆರ್​ಡಿಒ ಅಭಿವೃದ್ಧಿಪಡಿಸಿತು.

ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್: ದೇಶದ ಎಲ್ಲ ಪೌರರಿಗೆ ವಿಶಿಷ್ಟ ಆರೋಗ್ಯ ಗುರುತಿನ ಚೀಟಿ, ಹೆಲ್ತ್​ಕೇರ್ ಫೆಸಿಲಿಟೀಸ್ ಆಂಡ್ ಪ್ರೊಫೆಷನಲ್ಸ್ ರಿಜಿಸ್ಟ್ರಿ, ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಸ್ಯಾಂಡ್​ಬಾಕ್ಸ್ ಸೇವೆಗಳನ್ನು ಒಳಗೊಂಡ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಸೆ.27ರಂದು ಚಾಲನೆ ನೀಡಿದರು.

ಬರಹ: ಉಮೇಶ್ ಕುಮಾರ್ ಶಿಮ್ಲಡ್ಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net