ಹಿಂದೂಗಳ ರಕ್ಷಣೆಗಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು: ಬಸನ್​ಗೌಡ ಪಾಟೀಲ್​ ಯತ್ನಾಳ್

Basangouda Patil Yatnal
Published on

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಕಾಂಗ್ರೆಸ್​ ಸದಸ್ಯ ನಿರಂಜನ್ ಹಿರೇಮಠ್ ಪುತ್ರಿ ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಲ್​ ಪ್ರತಿಕ್ರಿಯಿಸಿದ್ದು, ಭಾರತದಲ್ಲಿ ಲವ್ ಜಿಹಾದ್​ನ ದೊಡ್ಡ ಜಾಲ ಇದೆ ಎಂದು ಆರೋಪಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಈ ಕುರಿತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಯತ್ನಾಳ್, ರಾಜ್ಯದಲ್ಲಿ ಅರಾಜಕತೆ ಹೆಚ್ಚುತ್ತಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.
ರಾಜ್ಯದಲ್ಲಿ ಇದೇ ರೀತಿಯ ಪರಿಸ್ಥಿತಿ ಮುಂದುವರೆದರೆ ಕರ್ನಾಟಕವೂ ಪಾಕಿಸ್ತಾನ ಆಗುತ್ತದೆ. ಈಗಾಗಲೇ ರಾಜ್ಯದಲ್ಲಿ ಪಾಕಿಸ್ತಾನದಂತಹ ವಾತಾವರಣ ಸೃಷ್ಟಿ ಆಗಿದೆ ಎಂದು ಕಿಡಿಕಾರಿದ್ದಾರೆ.

ಭಾರತದಲ್ಲಿ ಲವ್ ಜಿಹಾದ್​ನ ದೊಡ್ಡ ಜಾಲ ಇದೆ. ಹಿಂದೂ ಯುವತಿ ಟಾರ್ಗೆಟ್​ ಮಾಡಿ ಲವ್​ ಮಾಡುವುದು ಹಾಗೂ ಮತಾಂತರ ಮಾಡಲಿಕ್ಕೆ 10-20 ಲಕ್ಷ ರೂ. ಹಣ ಕೊಡುವ ಕೆಲಸ ಆಗುತ್ತಿದೆ. ಇಂತಹ ದೊಡ್ಡದೊಂದು ಜಾಲ ಇರುವುದನ್ನು ನಾನು ಅಲ್ಲಗಳೆಯಲ್ಲ. ಆದರೆ ನೇಹಾ ಹಿರೇಮಠ ಯಾವುದೇ ಆಮಿಷಕ್ಕೂ ಒಳಗಾಗಿರಲಿಲ್ಲ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ತಮ್ಮದೇ ಪಕ್ಷದ ಕಾರ್ಪೋರೇಟರ್ ಮಗಳ ಹತ್ಯೆಯಾದರೂ ಫೋನ್ ಮಾಡಿ ಸಾಂತ್ವನ ಹೇಳಲು ಮುಂದಾಗುತ್ತಿಲ್ಲ. ಫೋನ್ ಮಾಡಿದರೆ ಮುಸ್ಲಿಮರು ಬೇಸರಗೊಳ್ಳುತ್ತಾರೆ ಎಂಬ ಭಾವನೆ ಸಿಎಂ ಸಿದ್ದರಾಮಯ್ಯ ಅವರದ್ದು. ಸರ್ಕಾರಕ್ಕೆ ಧೈರ್ಯ ಇದ್ದರೆ ನೇಹಾ ಹಿರೇಮಠ ಳ ಹತ್ಯೆಯ ಆರೋಪಿಯನ್ನು ಎನ್ ಕೌಂಟರ್ ಮಾಡಿಸಲಿ, ಆತನ ಮನೆಗೆ ಬುಲ್ಡೋಜರ್ ಏರಿಸಲಿ. ನೇಹಾ ಕುಟುಂಬಸ್ಥರ ಜೊತೆ ನಾವೂ ಕೂಡ ಕಾನೂನು ಹೋರಾಟ ಮಾಡುತ್ತೇವೆ. ಆರೋಪಿಗೆ ಮೂರು ತಿಂಗಳಲ್ಲಿ‌ ಶಿಕ್ಷೆ ನೀಡಬೇಕು ಅನ್ನೋದು‌ ಸುಪ್ರೀಂ‌ಕೋರ್ಟ್ ನಿಯಮ‌ ಇದೆ. ಮೂರು ತಿಂಗಳಲ್ಲಿ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.

ರಾಜ್ಯಪಾಲರು ಈ ಎಲ್ಲ ಘಟನೆಗಳ ವಿವರಗಳನ್ನು ಕೇಂದ್ರಕ್ಕೆ ಸಲ್ಲಿಸಬೇಕು. ಬಿಜೆಪಿ ನಿಯೋಗದಿಂದಲೂ ರಾಜ್ಯಪಾಲರನ್ನು ಭೇಟಿ ಮಾಡುವ ಬಗ್ಗೆ ಯೋಚಿಸಲಾಗುತ್ತಿದೆ. ಹಿಂದೂಗಳ ರಕ್ಷಣೆಗಾಗಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net