

ಲಖನೌ: ಇಲ್ಲಿನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ಕೆ.ಎಲ್. ರಾಹುಲ್-ಕ್ವಿಂಟನ್ ಡಿ ಕಾಕ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಫಲವಾಗಿ ಲಖನೌ ಸೂಪರ್ಜೈಂಟ್ಸ್ ತಂಡವು ಚೆನ್ನೈ ಸೂಪರ್ಕಿಂಗ್ಸ್ ವಿರುದ್ಧ ಜಯ ಸಾಧಿಸಿದೆ.
ಇನ್ನು ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ನಾಯಕ ರಾಹುಲ್ (82 ರನ್, 53 ಎಸೆತ, 9 ಬೌಂಡರಿ, 3 ಸಿಕ್ಸರ್) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನು ಚೇಸಿಂಗ್ ವೇಳೆ ಅರ್ಧಶತಕ ಸಿಡಿಸುವ ಮೂಲಕ ಲಖನೌ ತಂಡದ ನಾಯಕ ರಾಹುಲ್ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದ್ದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಚೆನ್ನೈ ಸೂಫರ್ಕಿಂಗ್ಸ್ ತಂಡವು ರವೀಂದ್ರ ಜಡೇಜಾ (57 ರನ್, 40 ಎಸೆತ, 5 ಬೌಂಡರಿ, 1 ಸಿಕ್ಸರ್) ಅರ್ಧತಶಕ, ಮೊಯಿನ್ ಅಲಿ (30 ರನ್, 20 ಎಸೆತ, 3 ಸಿಕ್ಸರ್), ಮಾಜಿ ನಾಯಕ ಎಂ.ಎಸ್. ಧೋನಿ (28 ರನ್, 9 ಎಸೆತ, 3 ಬೌಂಡರಿ, 2 ಸಿಕ್ಸರ್) ಉಪಯುಕ್ತ ಬ್ಯಾಟಿಂಗ್ ಫಲವಾಗಿ ಚೆನ್ನೈ ಸೂಪರ್ಕಿಂಗ್ಸ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ಗಳಿಸಿತ್ತು.
ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ್ದ ಲಖನೌಗೆ ಕೆ.ಎಲ್, ರಾಹುಲ್ ಹಾಗೂ ಕ್ವಿಂಟನ್ ಡಿಕಾಕ್ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್ಗೆ 134 ರನ್ ಪೇರಿಸಿ ಈ ಜೋಡಿ ಬೇರ್ಪಟ್ಟಿತ್ತು. ಆಕರ್ಷಕ ಹೊಡೆತಗಳೊಂದಿಗೆ ಗಮನ ಸೆಳೆದ ಕೆಎಲ್ ರಾಹುಲ್ 53 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 82 ರನ್ ಬಾರಿಸಿದರು. ಈ ಅರ್ಧಶತಕದೊಂದಿಗೆ ಐಪಿಎಲ್ನಲ್ಲಿ ಅತೀ ಹೆಚ್ಚು ಹಾಫ್ ಸೆಂಚುರಿ ಸಿಡಿಸಿದ ವಿಕೆಟ್ ಕೀಪರ್ ಎನಿಸಿಕೊಂಡರು.
ಇದಕ್ಕೂ ಮುನ್ನ ಈ ದಾಖಲೆ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿತ್ತು. 223 ಇನ್ನಿಂಗ್ಸ್ನಲ್ಲಿ ಧೋನಿ ಒಟ್ಟಾರೆಯಾಗಿ 24 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇದೀಗ ಈ ದಾಖಲೆಯನ್ನು ಮುರಿಯುವಲ್ಲಿ ಕೆ.ಎಲ್. ರಾಹುಲ್ ಯಶಸ್ವಿಯಾಗಿದ್ದು, 116 ಐಪಿಎಲ್ ಇನಿಂಗ್ಸ್ಗಳಲ್ಲಿ ಕೆಎಲ್ ರಾಹುಲ್ ಇದುವರೆಗೆ 35 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಈ ವೇಳೆ ವಿಕೆಟ್ ಕೀಪರ್ ಆಗಿ ಕಣಕ್ಕಿಳಿದಾಗ 25 ಹಾಫ್ ಸೆಂಚುರಿ ಸಿಡಿಸಿದ್ದಾರೆ. ಈ ಮೂಲಕ ಧೋನಿ ಹೆಸರಿನಲ್ಲಿದ್ದ 24 ಅರ್ಧಶತಕಗಳ ದಾಖಲೆಯನ್ನು ಕೆ.ಎಲ್. ರಾಹುಲ್ ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ.