ಭೀಕರ ಕಾರು ಅಪಘಾತದಲ್ಲಿ ಸ್ನೇಹಿತೆ ಸಾವು ಪ್ರಕರಣ: ನಟಿ ಯಶಿಕಾ ಆನಂದ್​ಗೆ ಬಂಧನ ಭೀತಿ

Yashika Anand
ನಟಿ ಯಶಿಕಾ ಆನಂದ್​
Published on

ಚೆನ್ನೈ: ಕಾಲಿವುಡ್​ನ “ಇರುಟ್ಟು ಅರಯಿಲ್ ಮುರಟ್ಟು ಕುತ್ತು” ಹೆಸರಿನ ವಯಸ್ಕರ ಕಾಮಿಡಿ ಚಿತ್ರ ಹಾಗೂ ಬಿಗ್​ಬಾಸ್​ ಶೋ ಮೂಲಕ ಖ್ಯಾತಿ ಪಡೆದಿರುವ ನಟಿ ಯಶಿಕಾ ಆನಂದ್, 2021ರ ಜುಲೈ ತಿಂಗಳಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸುಮಾರು ಅರ್ಧ ವರ್ಷಗಳ ಕಾಲ ಆಸ್ಪತ್ರೆಯಲ್ಲಿದ್ದು ಚೇತರಿಸಿಕೊಂಡು ಸಂಪೂರ್ಣ ಸಹಜ ಜೀವನಕ್ಕೆ ಮರಳಿದರು. ಸಾವಿನ ಹೊಸ್ತಿಲಿಗೆ ಹೋಗಿ ಅದೃಷ್ಟವಶಾತ್​ ಬದುಕಿ ಬಂದಿರುವ ಯಶಿಕಾ, ಹಿಂದಿನ ನೋವೆಲ್ಲ ಮರೆತು ಮತ್ತೆ ಗ್ಲಾಮರ್​ ಲೋಕದ ಕ್ಷಣಗಳನ್ನು ಸವಿಯುತ್ತಿದ್ದಾರೆ.

ಇದೀಗ ಗ್ಲಾಮರ್​ ಗೊಂಬೆಗೆ ಬಂಧನದ ಭೀತಿ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. 2021ರಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆಂಗಲಪಟ್ಟು ನ್ಯಾಯಾಲಯ ಮಾರ್ಚ್​ 23ರ ಗುರುವಾರ ಬಂಧನದ ವಾರೆಂಟ್​ ಜಾರಿ ಮಾಡಿತ್ತು. ಮಾರ್ಚ್​ 21ರಂದು ವಿಚಾರಣೆ ಆಗುವಂತೆ ಕೋರ್ಟ್​ ನೀಡಿದ್ದ ಆದೇಶವನ್ನು ಉಲ್ಲಂಘಿಸಿದ್ದಕ್ಕೆ ಬಂಧನ ವಾರೆಂಟ್​ ಜಾರಿಯಾಗಿತ್ತು. ಏಪ್ರಿಲ್​ 25ರ ಒಳಗೆ ಆಕೆ ಕೋರ್ಟ್​ಗೆ ಹಾಜರಾಗದಿದ್ದರೆ ಆಕೆಯನ್ನು ಬಂಧಿಸಿ ಎಂದು ಪೊಲೀಸರಿಗೆ ನ್ಯಾಯಾಲಯ ಆದೇಶಿಸಿತ್ತು.

ಯಶಿಕಾ ಆನಂದ್ ಅಂತಿಮವಾಗಿ ಮಾರ್ಚ್ 27ರಂದು ನ್ಯಾಯಾಲಯಕ್ಕೆ ಹಾಜರಾದರು. ಅಪಘಾತದ ಪ್ರಕರಣದ ಕುರಿತು ತನ್ನ ಹೇಳಿಕೆಯನ್ನು ದಾಖಲಿಸಿ, ತಮ್ಮ ವಿರುದ್ಧದ ಬಂಧನ ವಾರೆಂಟ್​ ಅನ್ನು ವಜಾಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಈ ವೇಳೆ ನಟಿಯ ವರ್ತನೆಯನ್ನು ನ್ಯಾಯಾಲಯ ಖಂಡಿಸಿತು.

ಘಟನೆ ಹಿನ್ನೆಲೆ ಏನು?

2021, ಜುಲೈ 25ರಂದು ಭಾನುವಾರ ಮುಂಜಾನೆ ಯಶಿಕಾ ಆನಂದ್​ ತಮ್ಮ ಸ್ನೇಹಿತರೊಂದಿಗೆ ತೆರಳುತ್ತಿದ್ದ ಕಾರು ಚೆನ್ನೈನ ಈಸ್ಟ್ ಕೋಸ್ಟ್ ಬಳಿ ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ ಯಶಿಕಾ ಗಂಭೀರವಾಗಿ ಗಾಯಗೊಂಡಿದ್ದರು. ಯಶಿಕಾ ಅವರ ಸ್ನೇಹಿತೆ ವಲ್ಲಿಚಟ್ಟಿ ಭವಾನಿ (28) ಮೃತಪಟ್ಟಿದ್ದರು. ಇನ್ನಿಬ್ಬರು ಹುಡುಗರು ಸಹ ಕಾರಿನಲ್ಲಿದ್ದರು. ಕಾರು ಮಾಮುಲ್ಲಾಪುರಂನಿಂದ ಚೆನ್ನೈ ಕಡೆಗೆ ಸಾಗುತ್ತಿತ್ತು. ಯಶಿಕಾ ಅವರ ಸ್ನೇಹಿತ ಕಾರನ್ನು ಓಡಿಸುತ್ತಿದ್ದ. ರಾತ್ರಿ 11.45ರ ಸಮಯಕ್ಕೆ ಚಾಲಕನು ವಾಹನದ ನಿಯಂತ್ರಣವನ್ನು ಕಳೆದುಕೊಂಡು ಹೆದ್ದಾರಿಯ ಮಧ್ಯದ ತಡೆಗೋಡೆಗೆ ಹೊಡೆದಿದ್ದ. ಅದಾದ ನಂತರ ಕಾರು ಅಡ್ಡಾದಿಡ್ಡಿ ಚಲಿಸಿ ತಿರುಗಿ ಬಿದ್ದಿತ್ತು. ದಾರಿಹೋಕರು ಮತ್ತು ಇತರ ವಾಹನ ಚಾಲಕರು ಕಾರಿನಲ್ಲಿದ್ದವರನ್ನು ರಕ್ಷಿಸಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ವಲ್ಲಿಚಟ್ಟಿ ಭವಾನಿ ಸ್ಥಳದಲ್ಲೇ ಮೃತಪಟ್ಟರು. ಇತರರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಭವಾನಿ ಒಬ್ಬ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದು, ಅಮೆರಿಕದಲ್ಲಿ ಕೆಲಸ ಮಾಡಿಕೊಂಡಿದ್ದರು.

ಅಪಘಾತದ ನಂತರ ಯಶಿಕಾ ಅನೇಕ ಮುರಿತಗಳಿಂದ ಬಳಲುತ್ತಿದ್ದರು ಮತ್ತು ಕೆಲವು ಶಸ್ತ್ರಚಿಕಿತ್ಸೆಗಳ ನಂತರ ಚೇತರಿಸಿಕೊಂಡಿದ್ದಾರೆ. ಅಪಘಾತದ ಸಮಯದಲ್ಲಿ ಯಾಶಿಕಾ ಕಾರಿನಲ್ಲಿದ್ದ ಕಾರಣ ಐಪಿಸಿ ಸೆಕ್ಷನ್ 304ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಸೇರಿದಂತೆ 3 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net