More

    ಅರೆಬರೆ ರಸ್ತೆಗೆ ಮತ್ತೆ ಟೋಲ್ ಶುಲ್ಕ ಹೆಚ್ಚಿಸಿದ ಐಆರ್‌ಬಿ -ಏಪ್ರೀಲ್ 1 ರಿಂದ ಹೊಸ ದರ ಜಾರಿ

    ವಿಜಯವಾಣಿ ಸುದ್ದಿಜಾಲ ಕಾರವಾರ

    ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಓಡಾಡುವ ವಾಹನ ಚಾಲಕರ ಕಿಸೆಗೆ ಮತ್ತೆ ಕತ್ತರಿ ಬೀಳಲಿದೆ. ಬೇಲೆಕೇರಿ, ಹೊಳೆಗದ್ದೆ ಹಾಗೂ ಶಿರೂರು ಟೋಲ್‌ಗಳಲ್ಲಿ ಶುಲ್ಕವನ್ನು ಏ.1 ರಿಂದ ಜಾರಿಯಾಗುವಂತೆ ಹೆಚ್ಚಿಸಲಾಗಿದೆ.
    ಇದುವರೆಗೆ 170.980 ಕಿಮೀ ರಸ್ತೆ ನಿರ್ಮಾಣವಾಗಿದ್ದು, ಅದಕ್ಕೆ ಶುಲ್ಕ ವಿಧಿಸಲಾಗುತ್ತಿದೆ ಎಂದು ಗುತ್ತಿಗೆ ಪಡೆದ ಐಆರ್ ಟೋಲ್‌ವೇಸ್ ಪ್ರೈ, ಲಿ.ಪ್ರಕಟಣೆಯಲ್ಲಿ ತಿಳಿಸಿದೆ. ಹೊಸ ದರಗಳು ಫಾಸ್‌ಟ್ಯಾಗ್ ಇದ್ದರೆ ಮಾತ್ರ ಅನ್ವಯವಾಗಲಿದ್ದು, ನಗದು ನೀಡುವುದಾದಲ್ಲಿ ದುಪ್ಪಟ್ಟು ದರ ತೆರಬೇಕಾಗುತ್ತದೆ.
    ಪೂರ್ಣವಾಗದ ರಸ್ತೆಗೆ ತೆರಿಗೆ
    ಇದುವರೆಗೂ ಕಾರವಾರದಲ್ಲಿ ಪ್ಲೈ ಓವರ್ ಕಾಮಗಾರಿ ಪೂರ್ಣವಾಗಿಲ್ಲ. ಒಂದೇ ಸುರಂಗದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಅರಗಾ, ಬಿಣಗಾ, ಮುದಗಾ, ಅಂಕೋಲಾದ ಶಿರೂರು, ಘಟ್ಟಗಳಲ್ಲಿ ರಸ್ತೆ ಪೂರ್ಣವಾಗಿಲ್ಲ. ಕುಮಟಾ, ಹೊನ್ನಾವರ, ಭಟ್ಕಳದ ಪಟ್ಟಣಗಳಲ್ಲಿ ರಸ್ತೆ ಕಾಮಗಾರಿ ಮುಕ್ತಾಯವಾಗಿಲ್ಲ. ಅನಿರೀಕ್ಷಿತ ತಿರುವುಗಳಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಹೀಗಿರುವಾಗ ಮತ್ತೆ ಟೋಲ್ ಶುಲ್ಕ ಹೆಚ್ಚಳಕ್ಕೆ ವಾಹನ ಚಾಲಕರಿಂದ ಭಾರಿ ವಿರೋಧ ವ್ಯಕ್ತವಾಗಿದೆ.
    ಎಷ್ಟು ಹೆಚ್ಚಳ:
    ಬೇಲೆಕೇರಿ ಹಾಗೂ ಹೊಳೆಗದ್ದೆ ಟೋಲ್‌ಗಳಲ್ಲಿ ಇದುವರೆಗೆ ನಾಲ್ಕು ಚಕ್ರ ವಾಹನಗಳಿಗೆ ಏಕಮುಖ ಸಂಚಾರಕ್ಕೆ 90, ಒಂದೇ ದಿನದಲ್ಲಿ ಹೋಗಿ ಬರುವುದಕ್ಕೆ 135 ರೂ. ಜಿಲ್ಲೆಯ ನೋಂದಣಿಯಾದ ವಾಣಿಜ್ಯ ವಾಹನಗಳಿಗೆ 45 ರೂ. ಹಾಗೂ ಮಾಸಿಕ ಪಾಸ್‌ಗೆ 3025 ರೂ. ಇತ್ತು. ಅದನ್ನು ಈಗ ಏಕಮುಖ ಸಂಚಾರಕ್ಕೆ 110, ಒಂದೇ ದಿನದಲ್ಲಿ ಹೋಗಿ ಬರಲು 165, ಹಾಗೂ ಜಿಲ್ಲೆಯ ನೋಂದಣಿ ವಾಹನಗಳಿಗೆ 55 ರೂ. ಮಾಸಿಕ ಪಾಸ್ ದರ ಬೇಲೆಕೇರಿಯಲ್ಲಿ 3690, ಹೊಳೆಗದ್ದೆಯಲ್ಲಿ 3615 ರೂ. ಗೆ ಏರಿಸಲಾಗಿದೆ.
    ಲಘು ವಾಣಿಜ್ಯ ವಾಹನಗಳಿಗೆ ಬೇಲೆಕೇರಿಯಲ್ಲಿ ಏಕ ಮುಖ ಸಂಚಾರಕ್ಕೆ 140 ರೂ. ಇರುವುದನ್ನು 175 ರೂ., ದ್ವಿಮುಖ ಸಂಚಾರಕ್ಕೆ 215 ಇರುವುದು 260 ರೂ., ಸ್ಥಳೀಯ ವಾಹನಗಳಿಗೆ 70 ಇರುವುದನ್ನು 85 ರೂ.ಗೆ ಪಾಸ್‌ಗೆ 4740 ರೂ. ಇರುವುದನ್ನು 5795 ರೂ. ಗೆ ಹೆಚ್ಚಿಸಲಾಗಿದೆ. ಹೊಳೆಗದ್ದೆಯಲ್ಲಿ ಇದುವರೆಗೆ ಬೇಲೆಕೇರಿಯ ದರವೇ ಇದ್ದು, ಇನ್ನು ಮುಂದೆ ಏಕಮುಖ ಸಂಚಾರಕ್ಕೆ 170, ದ್ವಿಮುಖಕ್ಕೆ 255, ಸ್ಥಳೀಯ ವಾಹನಗಳಿಗೆ 85, ಪಾಸ್‌ಗೆ 5715 ರೂ. ನಿಗದಿ ಮಾಡಲಾಗಿದೆ.
    ಬೇಲೆಕೇರಿಯಲ್ಲಿ ಬಸ್ ಮತ್ತು ಟ್ರಕ್‌ಗಳಿಗೆ ಏಕಮುಖ ಸಂಚಾರಕ್ಕೆ 290 ರೂ. ಇರುವುದನ್ನು 360 ರೂ, ದ್ವಿಮುಖ ಸಂಚಾರಕ್ಕೆ 440 ರೂ.ನಿಂದ 535 ರೂ., ಸ್ಥಳೀಯ ವಾಹನಗಳಿಗೆ 145 ರಿಂದ 180 ರೂ. ಗೆ ಹೆಚ್ಚಿಸಲಾಗಿದೆ. ಮಾಸಿಕ ಪಾಸ್ ದರ 11930 ಕ್ಕೆ ಏರಿಕೆಯಾಗಿದೆ. ಹೊಳೆಗದ್ದೆಯಲ್ಲಿ ಇದುವರೆಗೆ ಬೇಲೆಕೇರಿಯಷ್ಟೇ ದರ ಜಾರಿಯಲ್ಲಿತ್ತು.ಇನ್ನು ಮುಂದೆ ಏಕ ಮುಖ ಸಂಚಾರಕ್ಕೆ 355 ರೂ. ಇಡೀ ದಿನಕ್ಕೆ 530, ಜಿಲ್ಲೆಯ ವಾಹನಗಳಿಗೆ 175 ಹಾಗೂ ಪಾಸ್‌ಗೆ 11930 ರೂ. ದರ ನಿಗದಿ ಮಾಡಲಾಗಿದೆ. ಮಲ್ಟಿ ಎಕ್ಸೆಲ್ ವಾಹನಗಳಿಗೆ ದರ ಭಾರೀ ಹೆಚ್ಚಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts