

ಯಳಂದೂರು: ಕಂದಾಯ ಇಲಾಖೆಯ ಎಲ್ಲ ದಾಖಲೆಗಳನ್ನು ಡಿಜಿಟಲ್‌ನಲ್ಲಿ ಪಡೆದುಕೊಳ್ಳುವ ಸೌಲಭ್ಯ ಯಳಂದೂರು ತಾಲೂಕಿನಲ್ಲಿ ಆಗಿದ್ದು, ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.
ಅವರು ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗ ಶನಿವಾರ ಕಾರ್ಮಿಕ ಇಲಾಖೆಯ ವತಿಯಿಂದ ನಡೆದ ಟೂಲ್‌ಕಿಟ್ ವಿತರಣೆ ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಯುವ ಮಂತ್ರಿಗಳಾಗಿರುವ ಕೃಷ್ಣಬೈರೇಗೌಡ ಕಂದಾಯ ಇಲಾಖೆಯಲ್ಲಿ ಅತಿ ಹೆಚ್ಚು ಬದಲಾವಣೆಗಳನ್ನು ತಂದಿದ್ದಾರೆ. ಇಡೀ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವುದು ಸವಾಲಿನ ಕೆಲಸವಾಗಿದ್ದು ಇದನ್ನು ಸಮರ್ಥವಾಗಿ ನಿಭಾಯಿಸಿ ರಾಜ್ಯದ ಕೆಲವು ತಾಲೂಕುಗಳನ್ನು ಪೈಲಟ್ ತಾಲೂಕುಗಳಾಗಿ ಮಾಡಿದ್ದರು. ಇದರಲ್ಲಿ ಯಳಂದೂರು ಕೂಡ ಒಂದಾಗಿದ್ದು ಇಂದು ಇಡೀ ದಾಖಲೆಗಳು ಇಲ್ಲಿ ಸುಲಭವಾಗಿ ಲಭಿಸುತ್ತಿದ್ದು ಇದು ಮಾದರಿಯಾಗಿದೆ ಎಂದರು.
ಅಲ್ಲದೆ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅಸಂಘಟಿತ ಕಾರ್ಮಿಕರಿಗೆ ವಿವಿಧ ಸೌಲಭ್ಯಗಳನ್ನು ವಿತರಣೆ ಮಾಡಲಾಗುತ್ತಿದೆ. ಅವರಿಗೆ ಟೂಲ್‌ಕಿಟ್‌ಗಳನ್ನು ನೀಡುವುದು. ಅದರಲ್ಲೂ ವಿಶೇಷವಾಗಿ ಕಟ್ಟಡ ಕಾರ್ಮಿಕರ ಶ್ರೇಯೋಭಿವೃದ್ಧಿ, ಅವರಿಗೆ ಅನುಕೂಲವಾಗುವ ಪರಿಕರಗಳ ವಿತರಣೆ, ಆರೋಗ್ಯ ಕಿಟ್‌ಗಳನ್ನು ನೀಡುವುದು, ಉಚಿತ ವಿಮೆ, ಇವರ ಮಕ್ಕಳಿಗೆ ಉಚಿತ ಶಿಕ್ಷಣ, ವಿಶೇಷ ವಿದ್ಯಾರ್ಥಿ ವೇತನ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದ್ದು ನಮ್ಮ ಸರ್ಕಾರ ಇಂತಹ ಕೋಟ್ಯಂತರ ಕಾರ್ಮಿಕರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಡಾ.ರಾಮಚಂದ್ರಯ್ಯ ಮಾತನಾಡಿ, ಚಾಮರಾಜನಗರ ಜಿಲ್ಲಾದ್ಯಂತ ಸಾವಿರಾರು ಕಾರ್ಮಿಕರು ನಮ್ಮ ಇಲಾಖೆಯಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಯಳಂದೂರು ತಾಲೂಕಿನಲ್ಲಿ 4 ಸಾವಿರ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್‌ಗಳನ್ನು ನೀಡಲಾಗಿದೆ. ಕಾರ್ಮಿಕರಲ್ಲದವರೂ ಕೂಡ ಕಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ. ಇಂತಹವರು ಕಂಡುಬಂದಲ್ಲಿ ನಮಗೆ ಮಾಹಿತಿ ನೀಡಿದ್ದಲ್ಲಿ ಅಂತಹವರ ವಿರುದ್ಧ ಕ್ರಮ ವಹಿಸುವುದಾಗಿ ತಿಳಿಸಿದರು.
ತಹಸೀಲ್ದಾರ್ ನಯನಾ ಮಾತನಾಡಿ, ತಾಲೂಕಿನ 7 ಕಂದಾಯ ವೃತ್ತಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ವಿತರಣೆ ಮಾಡಲಾಗಿದೆ. ಇದರಿಂದ ಇಲಾಖೆ ಸಂಬಂಧಿತ ಕೆಲಸಗಳು ಸುಲಭವಾಗಲಿದೆ. ಇದನ್ನು ಕೊಡಿಸಲು ಶಾಸಕರು ಹೆಚ್ಚು ಶ್ರಮ ವಹಿಸಿದ್ದು ಇವರಿಗೆ ನಮ್ಮ ಇಲಾಖೆಯ ವತಿಯಿಂದ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ಪಪಂ ಅಧ್ಯಕ್ಷೆ ಲಕ್ಷ್ಮಿಮಲ್ಲು, ತಾಪಂ ಇಒ ಉಮೇಶ್, ಸಿಪಿಐ ಶ್ರೀಕಾಂತ್ ಪಿಎಸ್‌ಐ ಆಕಾಶ್ ಹಿರಿಯ ಕಾರ್ಮಿಕ ನಿರೀಕ್ಷಕ ವಿ.ಎಲ್. ಪ್ರಸಾದ್, ಪ್ರದೀಪ್‌ಕುಮಾರ್, ನಾಗರತ್ನ ಅಸಂಘಟಿತ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಾಪುರ ದೇವರಾಜು ಸೇರಿದಂತೆ ಅನೇಕರು ಇದ್ದರು.