

ಷಿ ಜಿನ್ಪಿಂಗ್ ಅವರನ್ನು ಮೂರನೇ ಅವಧಿಗೆ ಅಧ್ಯಕ್ಷರಾಗಿ ಮುಂದುವರಿಸಲು ಚೀನಾ ಸಂಸತ್ತು ಶುಕ್ರವಾರ ಸರ್ವಾನುಮತದ ನಿರ್ಣಯ ಕೈಗೊಂಡಿದೆ. ಈ ಮೂಲಕ ಅವರು ಇನ್ನೂ ಐದು ವರ್ಷಗಳ ಕಾಲ ನಿರಂಕುಶ ಅಧಿಕಾರ ಪಡೆದಿರುವುದು ಭಾರತದ ಪಾಲಿಗಂತೂ ಶುಭಸೂಚನೆಯಲ್ಲ. ಏಕೆಂದರೆ, ಅವರು ಎರಡನೇ ಅವಧಿಗೆ ಅಧ್ಯಕ್ಷರಾಗಿದ್ದಾಗಲೇ ಭಾರತ- ಚೀನಾ ಗಡಿಯಲ್ಲಿ ಅನೇಕ ಸಂಘರ್ಷಗಳು ತಲೆದೋರಿದ್ದು, ಈಗಲೂ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ.
ಚೀನಾವನ್ನು ಜಾಗತಿಕ ಸೂಪರ್ ಪವರ್ ಮಾಡುವ ಮಹತ್ವಾಕಾಂಕ್ಷೆಯುಳ್ಳ ಜಿನ್ಪಿಂಗ್ ವಿಸ್ತರಣಾವಾದಿ ಧೋರಣೆ ಹೊಂದಿದವರು. ನೆರೆ ರಾಷ್ಟ್ರಗಳ ಕೆಲ ಪ್ರದೇಶಗಳನ್ನು ತೆಕ್ಕೆಗೆ ತೆಗೆದುಕೊಂಡು ಮಹಾಚೀನಾ ರೂಪಿಸುವ ಕಾರ್ಯಸೂಚಿ ಮೈಗೂಡಿಸಿಕೊಂಡವರು. ಹೀಗಾಗಿ, ಗಡಿಗಳಲ್ಲಿ ಉದ್ವಿಗ್ನತೆ ಮುಂದುವರಿಯುವ ಆತಂಕ ಸ್ಪಷ್ಟವಾಗಿ ಗೋಚರಿಸುತ್ತದೆ. ಕಳೆದ ಅಕ್ಟೋಬರ್ನಲ್ಲಿಯೇ ಚೀನಾ ಕಮ್ಯುನಿಸ್ಟ್ ಪಾರ್ಟಿಯು ತನ್ನ ನಾಯಕನನ್ನಾಗಿ ಜಿನ್ಪಿಂಗ್ ಅವರನ್ನು ಮರು ಆಯ್ಕೆ ಮಾಡಿತು. ನವಚೀನಾ ನಿರ್ವತೃ ಮಾವೋ ಝೆಡಾಂಗ್ ನಂತರ ಮೂರನೇ ಅವಧಿಗೆ ಅಧ್ಯಕ್ಷರಾದ ಮೊದಲ ಚೀನೀ ನಾಯಕ ಎಂಬ ಹೆಗ್ಗಳಿಕೆ ಜಿನ್ಪಿಂಗ್ ಅವರದ್ದಾಗಿದೆ. ಶೂನ್ಯ ಕೋವಿಡ್ ನೀತಿ ಮತ್ತು ಈ ಸಾಂಕ್ರಾಮಿಕದಿಂದ ಉಂಟಾದ ಅಪಾರ ಸಾವುನೋವಿನ ಹಿನ್ನೆಲೆಯಲ್ಲಿ ಕೆಲ ತಿಂಗಳುಗಳ ಹಿಂದೆ ಜಿನ್ಪಿಂಗ್ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆದಿತ್ತಾದರೂ ದಮನಕಾರಿ ನೀತಿಗಳ ಮೂಲಕ ಈ ವಿರೋಧದ ಸದ್ದಡಗಿಸಿದ್ದರು.
ಸಿಕ್ಕಿಂ ರಾಜ್ಯದ ಡೋಕ್ಲಾಮ್ ಗಡಿ ಪ್ರದೇಶದಲ್ಲಿ 2017ರ ಜೂನ್ನಲ್ಲಿ ಚೀನಾ ಸೈನಿಕರು ರಸ್ತೆ ನಿರ್ವಿುಸಲು ಮುಂದಾದಾಗ ಭಾರತೀಯ ಸೈನಿಕರು ತಡೆದಿದ್ದರು. 2020ರ ಜೂನ್ 15ರಂದು ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರ ಮೇಲೆ ಕಟ್ಟಿಗೆ ಮತ್ತು ಕಬ್ಬಿಣದ ಸರಳುಗಳನ್ನು ಬಳಸಿ ಚೀನಾ ಸೈನಿಕರು ಹಲ್ಲೆ ನಡೆಸಿದ್ದರು. ಇದರಿಂದಾಗಿ ಭಾರತದ 20 ಸೈನಿಕರು ಸಾವನ್ನಪ್ಪಿದರು. ಅರುಣಾಚಲ ಪ್ರದೇಶದ ತವಾಂಗ್ ಬಳಿ ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ) ದಾಟಿ ಭಾರತದ ಪ್ರದೇಶದೊಳಗೆ ನುಗ್ಗಲು ಚೀನಾ ಸೈನಿಕರು ಮತ್ತೆ ಪ್ರಯತ್ನಿಸಿದ ಘಟನೆ ಕಳೆದ ಡಿಸೆಂಬರ್ 9ರಂದು ನಡೆಯಿತು. ಈ ಘರ್ಷಣೆಯಲ್ಲಿ ಎರಡೂ ಕಡೆಯ ಸೈನಿಕರಿಗೆ ಅಲ್ಪಪ್ರಮಾಣದಲ್ಲಿ ಗಾಯಗಳಾದವು. ಈ ಎಲ್ಲ ಸಂಘರ್ಷಗಳು ನಡೆದಿರುವುದು ಜಿನ್ಪಿಂಗ್ ಅಧ್ಯಕ್ಷರಾಗಿರುವ ಅವಧಿಯಲ್ಲಿಯೇ ಎಂಬುದ ಗಮನಾರ್ಹ.
ಮೆಕ್ ಮೆಹೋನ್ ರೇಖೆಯನ್ನೇ ಎಲ್ಎಸಿ ಎಂದು ಈಗಲೂ ಚೀನಾ ಒಪ್ಪಿಕೊಳ್ಳುವುದಿಲ್ಲ. ಅರುಣಾಚಲ ಪ್ರದೇಶದ ತವಾಂಗ್ ಭಾಗವು ದಕ್ಷಿಣ ಟಿಬೆಟ್ ಆಗಿದ್ದು, ಅದು ತನಗೆ ಸೇರಬೇಕು ಎಂದೇ ಪ್ರತಿಪಾದಿಸುತ್ತಿದೆ. ಹೀಗಾಗಿ, ಗಡಿಯಲ್ಲಿ ಭಾರತ ಇನ್ನಷ್ಟು ಕಟ್ಟೆಚ್ಚರ ವಹಿಸಬೇಕಾಗುತ್ತದೆ. ಭಾರತ ಮಾತ್ರವಲ್ಲದೆ ತನ್ನ ಗಡಿ ಹಂಚಿಕೊಂಡಿರುವ ಬಹುತೇಕ ಎಲ್ಲ ರಾಷ್ಟ್ರಗಳೊಂದಿಗೂ ಇಂತಹ ತಂಟೆಯನ್ನು ಚೀನಾ ಹೊಂದಿದೆ. ಹಾಂಕಾಂಗ್ ರೀತಿಯಲ್ಲಿ ತೈವಾನ್ ದೇಶವನ್ನು ಕೂಡ ತನ್ನೊಂದಿಗೆ ವಿಲೀನಗೊಳಿಸಲು ಸಂಚು ನಡೆಸುತ್ತಿದೆ. ಡ್ರಾ್ಯಗನ್ ಕುತಂತ್ರಗಳನ್ನು ಅರಿತಿರುವ ಎಲ್ಲ ದೇಶಗಳೊಂದಿಗೆ ಜತೆಗೂಡಿ ರಾಜತಾಂತ್ರಿಕ ಜಾಣ್ಮೆಯ ಮೂಲಕ ಚೀನಾವನ್ನು ನಿಯಂತ್ರಿಸುವ ಅಗತ್ಯ ಭಾರತಕ್ಕಿದೆ.