ಮೀಮ್ಸ್​ ಸ್ಟಾರ್ ಕ್ಸೇವಿಯರ್ ಅಂಕಲ್ ನಿಜವಾದ ಹೆಸರೇನು? ಈಗ ಎಲ್ಲಿದ್ದಾರೆ? ಏನ್​ ಮಾಡ್ತಿದ್ದಾರೆ?​

Xavier Uncle
Published on

ನವದೆಹಲಿ: ಕ್ಸೇವಿಯರ್... ಕ್ಸೇವಿಯರ್ ಅಂಕಲ್ ಎಂಬ ಹೆಸರುಗಳೊಂದಿಗೆ ಅನೇಕ ತಮಾಷೆಯ ಮೀಮ್‌ಗಳು ಹರಿದಾಡುವುದನ್ನು ನೀವು ಸಾಮಾಜಿಕ ಜಾಲತಾಣದಲ್ಲಿ ಗಮನಿಸಿರುತ್ತೀರಿ. ಆ ಮೀಮ್‌ಗಳಲ್ಲಿ ಈ ಮೇಲಿನ ಫೋಟೋದಲ್ಲಿರುವ ವ್ಯಕ್ತಿಯ ನಗುತ್ತಿರುವ ಮತ್ತು ಸ್ವಲ್ಪ ಗಂಭೀರವಾದ ಮುಖ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಫೇಸ್‌ಬುಕ್, ಟ್ವಿಟರ್‌ನಂತಹ ಸಾಮಾಜಿಕ ಜಾಲತಾಣ ಬಳಸುವವರಿಗೆ ಈ ಮೀಮ್‌ಗಳ ಬಗ್ಗೆ ಚೆನ್ನಾಗಿ ತಿಳಿದಿದೆ.

ವಿಶಿಷ್ಟ ಭಾರತೀಯ ಮೀಸೆ ಹೊಂದಿರುವ ಈ ವ್ಯಕ್ತಿ ಫೇಸ್‌ಬುಕ್, ಟ್ವಿಟರ್ ಮತ್ತು ರೆಡ್ಡಿಟ್‌ನಂತಹ ಜಾಲತಾಣದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಅದರಲ್ಲೂ ಮೀಮ್‌ಗಳಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ಮೀಮ್ಸ್ ವೆಬ್‌ಸೈಟ್ 9gag ನಲ್ಲಿ ಇವರ ಫೋಟೋ ಹೊಂದಿರುವ ಅನೇಕ ಮೀಮ್‌ಗಳಿವೆ. ಈ ವ್ಯಕ್ತಿ ಇಷ್ಟೊಂದು ಪ್ರಸಿದ್ಧರಾಗಲು ಕಾರಣ ಅವರ ಹಾಸ್ಯಪ್ರಜ್ಞೆ. ಆದರೆ, ಈ ಮೀಮ್ ಸ್ಟಾರ್ ಬಗ್ಗೆ ಹೆಚ್ಚಿನವರಿಗೆ ತಿಳಿದೇ ಇಲ್ಲ. ಇವರ ನಿಜವಾದ ಹೆಸರೇನು? ಇವರ ಹಿನ್ನೆಲೆ ಏನು ಎಂಬುದು ಗೊತ್ತಿಲ್ಲ. ಆದರೆ, ನಾವಿಂದು ಇವರ ಬಗ್ಗೆ ತಿಳಿಸಿಕೊಡುತ್ತೇವೆ.

ಕ್ಸೇವಿಯರ್​ ಅಂಕಲ್​ ನಿಜವಾದ ಹೆಸರು ಓಂ ಪ್ರಕಾಶ್. ಇವರು 1968 ಅಕ್ಟೋಬರ್ 22ರಂದು ಜನಿಸಿದರು. ಭಾರತ ಮೂಲದವರು. ಉತ್ತರ ಪ್ರದೇಶದ ಕಾನ್ಪುರದ ಐಐಟಿ ಸಿಬ್ಬಂದಿ ಎಂದು ತಿಳಿದುಬಂದಿದೆ. ಇವರು ಭೌತಶಾಸ್ತ್ರ ವಿಭಾಗದಲ್ಲಿ ತಾಂತ್ರಿಕ ಸೂಪರಿಂಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕ್ಸೇವಿಯರ್ ಮೀಮ್‌ಗಳು ಹೆಚ್ಚು ಜನಪ್ರಿಯವಾಗಲು ಕಾರಣವೆಂದರೆ ಪಕಾಲು ಪಾಪಿಟೋ ಎಂಬ ಹೆಸರು. ಈ ಪಕಾಲು ಪಾಪಿಟೋ ಎಂಬ ಕಾಲ್ಪನಿಕ ಗುಮಾಸ್ತ ಪಾತ್ರವನ್ನು ಸೃಷ್ಟಿಸಿದ್ದೇ ಈ ಓಂ ಪ್ರಕಾಶ್ ಅವರು. ತಾವು ರಚಿಸಿದ ಕಾಮಿಕ್ ಮೀಮ್‌ಗಳಿಂದ ಆರಂಭದಲ್ಲಿ ಪಕಾಲು ಪಾಪಿಟೋ ಎಂದು ಬಹಳ ಪ್ರಸಿದ್ಧರಾದರು.

ಓಂ ಪ್ರಕಾಶ್​ ಅವರು ಇನ್​ಸ್ಟಾಗ್ರಾಂನಲ್ಲಿ 1.4 ಮಿಲಿಯನ್ ಫಾಲೋವರ್ಸ್​ ಮತ್ತು ಟ್ವಿಟರ್‌ನಲ್ಲಿ 3 ಲಕ್ಷ ಫಾಲೋವರ್ಸ್​ ಹೊಂದಿದ್ದಾರೆ. ಪಕಾಲು ಪ್ಯಾಪಿಟೋ ಎಂಬ ಕಾಲ್ಪನಿಗ ಗುಮಾಸ್ತ ಅಮೆರಿಕದ ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಉದ್ದೇಶ ಹೊಂದಿದ್ದಾನೆ. ಆದರೆ ಆತ ನಿಜವಾಗಿ ಭಾರತೀಯ. ನೋ ಯುವರ್ ಮೀಮ್ಸ್ ವೆಬ್‌ಸೈಟ್ ಪ್ರಕಾರ, ಪಕಾಲು ಪಾಪಿಟೋ ಹೆಸರಿನಲ್ಲಿ 2013ರ ಜುಲೈ 12 ರಂದು ಟ್ವಿಟರ್ ಖಾತೆಯನ್ನು ತೆರೆಯಲಾಯಿತು. ಬಳಿಕ 'ಹಲೋ ಟ್ವಿಟರ್ ನಾನು ಸಿಂಗಲ್' ಎಂದು ಮೊದಲ ಟ್ವೀಟ್ ಮಾಡಲಾಗಿತ್ತು. ಕೇವಲ ಎರಡು ವರ್ಷಗಳಲ್ಲಿ 17 ಸಾವಿರ ಮಂದಿ ಈ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದರು. 6 ಸಾವಿರ ಮಂದಿ ಲೈಕ್ ಮಾಡಿದ್ದರು. 7,39,000 ಫಾಲೋವರ್ಸ್​ ಸಹ ಬಂದಿದ್ದರು. ಆದಾಗ್ಯೂ, ಅವರ ಟ್ವೀಟ್‌ಗಳು ಟ್ವಿಟರ್ ನಿಯಮಗಳಿಗೆ ವಿರುದ್ಧವಾಗಿದ್ದ ಕಾರಣ 2018ರಲ್ಲಿ ಅವರ ಖಾತೆಯನ್ನು ಸ್ಥಗಿತಗೊಳಿಸಲಾಯಿತು.

2013ರ ಸೆಪ್ಟೆಂಬರ್ 2ರಂದು ನಾನು ಫೇಸ್‌ಬುಕ್ ಪುಟವನ್ನು ಸಹ ತೆರೆದೆ. ಆದರೆ ಈ ಪುಟವನ್ನು ಸಹ ಡಿಲೀಟ್​ ಮಾಡಲಾಗಿದೆ ಎಂದು ಓಂ ಪ್ರಕಾಶ್​ ಹೇಳಿದ್ದಾರೆ. ಖಾತೆ ಡಿಲೀಟ್​ ಆದ ಬಳಿಕ @pakalupapitow ಹೆಸರಿನ ನಕಲಿ ಖಾತೆ ಬೆಳಕಿಗೆ ಬಂದಿದೆ. ಈ ಖಾತೆಯಲ್ಲಿ ಪಕಾಲು ಪಾಪಿಟೋ ತಂತ್ರವನ್ನು ಅನುಸರಿಸಿ ತಮಾಷೆಯ ಮೀಮ್‌ಗಳನ್ನು ಪೋಸ್ಟ್ ಮಾಡಲಾಗುತ್ತಿದೆ. ಆದರೆ, ಇದು ಪಕಾಲು ಪಾಪಿಟೋ ಅವರ ಖಾತೆಯೇ? ಇದು ಇನ್ನೂ ಕೂಡ ಅನುಮಾನವಾಗೇ ಉಳಿದಿದೆ. ಇದಾದ ನಂತರವೂ ಈ ಹೆಸರಿನಲ್ಲಿ ಅನೇಕ ನಕಲಿ ಖಾತೆಗಳು ಕಾಣಿಸಿಕೊಂಡವು. ಅಲ್ಲದೆ, ಕ್ಸೇವಿಯರ್ ಮತ್ತು ಕ್ಸೇವಿಯರ್ ಅಂಕಲ್​ನಂತಹ ಕೆಲವು ಖಾತೆಗಳು ಸಹ ಹುಟ್ಟಿಕೊಂಡಿವೆ.

ಸದ್ಯ ಪಕಾಲು ಪ್ಯಾಪಿಟೊ ಅವರ ತಂತ್ರವನ್ನು ಅನುಸರಿಸಿ, ಕ್ಸೇವಿಯರ್ ಮೀಮ್‌ಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಫೇಸ್​ಬುಕ್, ಇನ್​ಸ್ಟಾಗ್ರಾಂ, ಟ್ವಿಟರ್ ಹೀಗೆ ಎಲ್ಲೆಲ್ಲೂ ಕ್ಸೇವಿಯರ್ ಹೆಸರಿನ ಮೀಮ್​ಗಳು ಕಾಣಸಿಗುತ್ತವೆ. ಈ ಮೀಮ್​ಗಳು ಓದಲು ತುಂಬಾ ತಮಾಷೆಯಾಗಿರುತ್ತವೆ.

Memes

ಕ್ಸೇವಿಯರ್ ಮೀಮ್ಸ್​ ಜೋಕ್ ಬಗ್ಗೆ ಮಾತನಾಡುವುದಾದರೆ, 80 ರಷ್ಟು ಹುಡುಗರು ಸಿಗರೇಟ್ ಸೇದುವ ಹುಡುಗಿಯರನ್ನು ಇಷ್ಟಪಡುತ್ತಾರೆ ಎಂಬ ಪೋಸ್ಟ್​ಗೆ ಕ್ಸೇವಿಯರ್ ನೀಡಿದ ಉತ್ತರವು ಅವರಿಗೆ ಎಷ್ಟು ಹಾಸ್ಯಪ್ರಜ್ಞೆಯನ್ನು ಹೊಂದಿದೆ ಎಂಬುದನ್ನು ತೋರಿಸುತ್ತದೆ. ಸಿಗರೇಟ್ ಸೇದುವ ಹುಡುಗಿಯರು ಬೇಗ ಸಾಯುತ್ತಾರೆ. ಅವಳು ಸತ್ತ ನಂತರ ಇನ್ನೊಂದು ಹುಡುಗಿಯನ್ನು ನೋಡಿಕೊಳ್ಳಬಹುದು. ಅದಕ್ಕೆ ಹುಡುಗರು ಸಿಗರೇಟ್ ಸೇದುವ ಹುಡುಗಿಯರನ್ನು ಪ್ರೀತಿಸುತ್ತಾರೆ ಎಂದು ಉತ್ತರಿಸಿದ್ದರು. ಹೀಗೆ ಸಾಕಷ್ಟು ಹಾಸ್ಯಮಯ ಉತ್ತರಗಳಿಂದಲೇ ಕ್ಸೇವಿಯರ್​ ಫೇಮಸ್​ ಆಗಿದ್ದಾರೆ. ಇದಿಷ್ಟು ಕ್ಸೇವಿಯರ್ ಮೀಮ್ಸ್​ ಮತ್ತು ಜೋಕ್‌ಗಳ ಹಿಂದಿನ ಕತೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net