ಗ್ರಾಮದೇವತೆಯ ಆರಾಧನೆ

anp habba (1)
ಆನಂದಪುರ ಸಮೀಪದ ಗಿಳಾಲಗುಂಡಿ ಗ್ರಾಮದಲ್ಲಿ ವರ್ಷತೊಡಕಿನ ಹಬ್ಬವನ್ನು ಆಚರಿಸಿದರು.
Published on

ಆನಂದಪುರ: ಇಲ್ಲಿಗೆ ಸುತ್ತಮುತ್ತಲ ಪ್ರದೇಶದಲ್ಲಿ ಶುಕ್ರವಾರ ವರ್ಷತೊಡಕಿನ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ದೀಪಾವಳಿಯ ಪಾಡ್ಯದ ನಂತರ ಒಂದು ದಿನ ಕಳೆದು ತದಿಗೆಯಂದು ಹಬ್ಬ ಆಚರಿಸಲಾಗುತ್ತದೆ. ದೀಪಾವಳಿ ಹಬ್ಬದ ಸಂಭ್ರಮ ಮೂರೇ ದಿನಕ್ಕೆ ಮುಕ್ತಾಯವಾಗದೆ ವರ್ಷವಿಡೀ ಮುಂದುವರಿಯಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಗುತ್ತದೆ.

ಈ ದಿನ ಮನೆ ದೇವರಿಗೆ ವಿಶೇಷ ಪೂಜೆ ನಡೆಸಲಾಗುತ್ತದೆ. ವಿವಿಧ ಬಗೆಯ ಅಡುಗೆ ತಯಾರಿಸಿ ದೇವರಿಗೆ ನೈವೇದ್ಯ ಮಾಡಲಾಗುತ್ತದೆ. ಮಹಾ ಮಂಗಳಾರತಿ ಮಾಡಿ ನಮಸ್ಕರಿಸಿದರು. ಮೂರು ದಿನದ ದೀಪಾವಳಿ ಹಬ್ಬದಲ್ಲಿ ನೈವೇದ್ಯ ಮಾಡದೆ ಬಿಟ್ಟುಹೋದ ಹೊಸ ಸಿಹಿ ಖಾದ್ಯ, ಅಕ್ಕಿ ಪಾಯಸ ಮಾಡಿ ಎಲ್ಲವನ್ನೂ ಸ್ವೀಕರಿಸು ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ.

ಸಂಜೆ ವೇಳೆಗೆ ಕುಲದೇವರು, ಮನೆ ದೇವರ ಗುಡಿಗೆ ತೆರಳಿ ಹಣ್ಣು ಕಾಯಿ ಅರ್ಪಿಸಿದರು. ಕೊಟ್ಟಿಗೆಯಲ್ಲಿ ಜಾನುವಾರುಗಳಿಗೆ ಸಹ ಪ್ರಸಾದ ನೀಡಿ ಒಳಿತಿಗೆ ಪ್ರಾರ್ಥಿಸಲಾಯಿತು. ಸುತ್ತಮುತ್ತಲ ಗ್ರಾಮಗಳಾದ ಕೆರೆಹಿತ್ತಲು, ಲಕ್ಕವಳ್ಳಿ, ಗಿಳಾಲಗುಂಡಿ, ತಂಗಳವಾಡಿ, ಅಂದಾಸುರ, ಇರುವಕ್ಕಿ, ಗೇರುಬೀಸು, ಬಳ್ಳೀಬೈಲು, ಐಗಿನಬೈಲು, ಚೆನ್ನಶೆಟ್ಟಿಕೊಪ್ಪ, ಗೌತಮಪುರ ಮುಂತಾದೆಡೆ ಹಬ್ಬ ಆಚರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net