ಜಗತ್ತಿನ ಅತಿಕಿರಿಯ ಮಹಿಳೆ ಜ್ಯೋತಿ ಅಮಗೆ ಪೊಲೀಸ್​ ಜೀಪ್ ಮೇಲೇರಿ ನಿಂತು ಮಾಡಿದ್ದೇನು?

Jyothi amage 14 APR 20
Published on

ನಾಗಪುರ: ಕರೊನಾ ಸೋಂಕು ಹರಡದಂತೆ ಲಾಕ್​ ಡೌನ್ ಜಾರಿಯಲ್ಲಿದೆ. ಯಾರೂ ಮನೆಯಿಂದ ಹೊರಬರಬೇಡಿ- ಮನೆಯಲ್ಲೇ ಇರಿ ಸುರಕ್ಷಿತವಾಗಿ ಇರಿ ಎಂಬ ಸಂದೇಶವನ್ನು ಸರ್ಕಾರ ನಾನಾ ರೀತಿಯಲ್ಲಿ ರವಾನಿಸುತ್ತಲೇ ಇದೆ. ಈ ನಡುವೆ, ಜಗತ್ತಿನ ಅತಿಕಿರಿಯ ಮಹಿಳೆ ಜ್ಯೋತಿ ಅಮಗೆ ನಾಗಪುರದಲ್ಲಿದ್ದರೂ ದೇಶದ ಗಮನಸೆಳೆದಿದ್ದಾರೆ.

62.8 ಸೆಂಟಿ ಮೀಟರ್ ಎತ್ತರದ ಈ ಮಹಿಳೆ ಮಹಾರಾಷ್ಟ್ರದ ನಾಗಪುರದ ನಗರದಲ್ಲಿ ಸೋಮವಾರ ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಕಾಣಿಸಿಕೊಂಡಿದ್ದರು. ಅದೂ ಪೊಲೀಸ್ ಜೀಪ್ ಮೇಲೆ! ಒಂದು ಮೈಕ್ ಹಿಡಿದ ಅವರು, ಎಲ್ಲರೂ ಮನೆಯಿಂದ ಹೊರಗೆ ಬರಬೇಕಾದರೆ ಮುಖಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯ, ಕೈಗೆ ಗ್ಲೌಸ್ ಹಾಕಿಕೊಳ್ಳಬೇಕು ಎಂಬ ಬಗ್ಗೆ ಅರಿವು ಮೂಡಿಸಿದರು. ಅಷ್ಟೇ ಅಲ್ಲ, ಕೈಗಳನ್ನು ಪದೇಪದೆ ತೊಳೆಯುವ ಬಗ್ಗೆ ಕೂಡ ತಿಳಿವಳಿಕೆ ನೀಡಿದ್ರು.

ಈ ಕುರಿತು ಸುದ್ದಿ ಸಂಸ್ಥೆ ಜತೆಗೆ ಮಾತನಾಡಿದ ಅವರು, ನಮ್ಮ ಪೊಲೀಸ್ ಅಧಿಕಾರಿಗಳು, ಆರೋಗ್ಯ ಸೇವಾ ಸಿಬ್ಬಂದಿ, ಸೇನಾ ಅಧಿಕಾರಿಗಳು ಕರೊನಾ ವೈರಸ್ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿದ್ದಾರೆ. ನನ್ನದೇ ಆದ ರೀತಿಯಲ್ಲಿ ನಾನೂ ಸೇವೆ ಸಲ್ಲಿಸಬೇಕು ಎಂದೆನಿಸಿತು. ಈ ಅಳಿಲು ಸೇವೆ ನನ್ನದು ಎಂದಿದ್ದಾರೆ.

ಜಗತ್ತಿನ ಅತಿಚಿಕ್ಕ ಮಹಿಳೆ ಎಂಬ ಕೀರ್ತಿಗೆ ಭಾಜನರಾದ ಬಳಿಕ ಅವರು ಭಾರತ ಮತ್ತು ಅಮೆರಿಕಗಳಲ್ಲಿ ಟೆಲಿವಿಷನ್​ಗಾಗಿ ಕೆಲಸ ಮಾಡಿದ್ದಾರೆ. ನಮ್ಮ ದೇಶದಲ್ಲಿ ಸದ್ಯ ಮಾರ್ಚ್ ಕೊನೆಯ ವಾರದಿಂದ ಲಾಕ್​ಡೌನ್ ಜಾರಿಯಲ್ಲಿದೆ. ಅಗತ್ಯ ವಸ್ತುಗಳು ಮತ್ತು ಔಷಧ ಖರೀದಿಗಾಗಿ ಮಾತ್ರವೇ ಬೀದಿಗಿಳಿಯುವುದಕ್ಕೆ ಜನರಿಗೆ ಅವಕಾಶವಿದೆ. 130 ಕೋಟಿಗೂ ಅಧಿಕ ಜನ ಇರುವ ಭಾರತದಲ್ಲಿ ಸದ್ಯ 10,000ದ ಆಸುಪಾಸಿನಲ್ಲಿದೆ ಕರೊನಾ ಪ್ರಕರಣ. ಸಾವಿನ ಸಂಖ್ಯೆ 300ರ ಗಡಿ ದಾಟಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net