

ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನ ಇಂದು ಆಚರಿಸಲ್ಪಡುತ್ತಿದ್ದು, ಕೋವಿಡ್ 19 ಸಂಕಷ್ಟದ ಕಾರಣ, ಯೋಗ ದಿನದ ಪ್ರಮುಖ ಕಾರ್ಯಕ್ರಮ ಟಿವಿ ಮೂಲಕವೇ ಪ್ರಸಾರವಾಗಲಿದೆ. ಇದು ಬೆಳಗ್ಗೆ 6.30ಕ್ಕೆ ದೂರದರ್ಶನದ ಎಲ್ಲ ಚಾನೆಲ್ಗಳಲ್ಲೂ ಪ್ರಸಾರವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಬೆಳಗ್ಗೆ 7 ಗಂಟೆಗೆ ಜಗತ್ತನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಬಳಿಕ, ಶ್ರೀ ರವಿಶಂಕರ್, ಸದ್ಗುರು, ಡಾ. ಎಚ್ಆರ್ ನಾಗೇಂದ್ರ, ಕಮಲೇಶ್ ಪಟೇಲ್, ಡಾ. ವೀರೇಂದ್ರ ಹೆಗ್ಗಡೆ, ಡಾ.ಹಂಸಾಜಿ ಜಯದೇವ, ಒ.ಪಿ.ತಿವಾರಿ, ಸ್ವಾಮಿ ಚಿದಾನಂದ ಸರಸ್ವತಿ, ಡಾ.ಚಿನ್ಮಯ ಪಾಂಡೆ, ಮುನಿ ಶ್ರೀ ಸಾಗರ ಮಹಾರಾಜ್ ಮೊದಲಾದ ಗಣ್ಯರು ಸಂದೇಶ ನೀಡಲಿದ್ದಾರೆ. ನಂತರ, ಆಹ್ವಾನಿತ ಯೋಗಪಟುಗಳಿಂದ ಯೋಗಾಸನಗಳ ನೇರ ಪ್ರದರ್ಶನ ನಡೆಯಲಿದೆ. ಕೋಟ್ಯಂತರ ಯೋಗಾಸಕ್ತರು, ಯೋಗಪ್ರೇಮಿಗಳು ತಮ್ಮ ಮನೆಗಳಿಂದಲೇ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
1,000ಕ್ಕೂ ಹೆಚ್ಚು ವರ್ಚುವಲ್ ಕಾರ್ಯಕ್ರಮ: ಅಂತಾರಾಷ್ಟ್ರೀಯ ಯೋಗ ದಿನದ ಉಸ್ತುವಾರಿ ಹೊತ್ತಿರುವ ಆಯುಷ್ ಸಚಿವಾಲಯದ ಸಹಯೋಗದಲ್ಲಿ ದೇಶಾದ್ಯಂತ 1,000ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ವರ್ಚುವಲ್ ಆಗಿ ಕಾರ್ಯಕ್ರಮ ಹಮ್ಮಿಕೊಂಡಿವೆ. ಜಾಗತಿಕವಾಗಿ 190ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕಾರ್ಯಕ್ರಮಗಳು ಆಯೋಜನೆಯಾಗಿವೆ.
ಮಧ್ಯಪ್ರದೇಶದಲ್ಲಿ ಲಸಿಕೆ ಮಹಾಭಿಯಾನ: ಅಂತಾರಾಷ್ಟ್ರೀಯ ಯೋಗ ದಿನ ನಿಮಿತ್ತ ಮಧ್ಯಪ್ರದೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡುವ ‘ಕೋವಿಡ್ 19 ಲಸಿಕೆ ಮಹಾಭಿಯಾನ’ ಕಾರ್ಯಕ್ರಮಕ್ಕೆ ಅಲ್ಲಿನ ಸರ್ಕಾರ ಸಿದ್ಧತೆ ನಡೆಸಿದೆ. ಇದಕ್ಕಾಗಿ 7,000 ಲಸಿಕೆ ಕೇಂದ್ರಗಳನ್ನು ಸ್ಥಾಪಿಸಿದೆ.
ಅಂಚೆ ಚೀಟಿ ಬಿಡುಗಡೆ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪ್ರತಿ ನಿಧಿಸುವ ವಿಶೇಷ ಅಂಚೆ ಚೀಟಿಯನ್ನು ಅಂಚೆ ಇಲಾಖೆ ಇಂದು ಬಿಡುಗಡೆ ಮಾಡಲಿದೆ.
ಚೀನಾದಲ್ಲಿ ಕಾರ್ಯಕ್ರಮ: ಬೀಜಿಂಗ್ನಲ್ಲಿರುವ ಭಾರತದ ರಾಯ ಭಾರ ಕಚೇರಿ ಆವರಣದಲ್ಲಿ ಯೋಗ ದಿನ ಕಾರ್ಯಕ್ರಮ ನಡೆಯಲಿದೆ. ಯೋಗಿ ಯೋಗ ಸ್ಕೂಲ್ ಸಂಸ್ಥಾಪಕ ಮೋಹನ್ ಭಂಡಾರಿ ಅವರ ಜತೆಗೆ 100ಕ್ಕೂ ಹೆಚ್ಚು ಚೀನಿ ಯೋಗಪಟುಗಳು ಭಾಗವಹಿಸಲಿದ್ದಾರೆ.
ಪ್ರಸ್ತುತ ವಿದ್ಯಮಾನಗಳನ್ನು ಗಮನದಲ್ಲಿರಿಸಿಕೊಂಡು, ಏಳನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ‘ಯೋಗಕ್ಷೇಮಕ್ಕಾಗಿ ಯೋಗ’ ಎಂಬ ಥೀಮ್ ಘೋಷಿಸಲಾಗಿದೆ.