ಅಳಿವಿನಂಚಲ್ಲಿ ಕಾಡಿನ ರಾಜ; ಇಂದು ವಿಶ್ವ ಸಿಂಹ ದಿನ

Lion Day
Published on
ಭಾರತೀಯ ಪುರಾಣ ಕಥೆಗಳಲ್ಲಿ ಕಾಣಸಿಗುವ ಸಿಂಹಗಳ ಕುರಿತಾದ ಪುಂಖಾನುಪುಂಖ ವರ್ಣನೆ ಅದ್ಭುತ. ಸಿಂಹ ಗರ್ಜನೆ, ಸಿಂಹಸ್ವಪ್ನ, ಸಿಂಹಾವಲೋಕನ, ಸಿಂಹ ಕಟಿ-ಈ ಪದಪುಂಜಗಳು ಕನ್ನಡ ಲೇಖಕರಿಗೆ ಅಚ್ಚುಮೆಚ್ಚು. ಮಕ್ಕಳು ಕೂಡ ಮೃಗಾಲಯಗಳಲ್ಲಿ ಸಿಂಹಗಳನ್ನು ಕಂಡು ರೋಮಾಂಚನಗೊಳ್ಳುತ್ತಾರೆ. ಆದರೆ, ‘ಕಾಡಿನ ರಾಜ’ ಬಿರುದಾಂಕಿತ ಸಿಂಹವು ಅಳಿವಿನಂಚಿನ ಪ್ರಾಣಿ ಎಂಬುದು ಹೆಚ್ಚು ಮಂದಿಗೆ ಗೊತ್ತೇ ಇಲ್ಲ. ಜಗತ್ತಿನೆಲ್ಲೆಡೆ ಸಿಂಹಗಳ ಸಂತತಿ ಕ್ಷೀಣಿಸಿದ ಪರಿಣಾಮ 2013ರಲ್ಲಿ ಮೊದಲ ಬಾರಿಗೆ ವಿಶ್ವ ಸಿಂಹ ದಿನ ಆಚರಿಸುವ ಪರಿಪಾಠ ಆರಂಭವಾಯಿತು.

| ಆರ್.ತುಳಸಿಕುಮಾರ್ ಬೆಂಗಳೂರು 
ಭಾರತದ ರಾಷ್ಟ್ರೀಯ ಲಾಂಛನದಲ್ಲಿ ಸ್ಥಾನ ಪಡೆದಿರುವ ಸಿಂಹ, ದೇಶದೆಲ್ಲೆಡೆ ತನ್ನ ನೆಲೆ ವಿಸ್ತರಣೆಗೆ ಸವಾಲು ಎದುರಿಸುತ್ತಿದೆ. ಗುಜರಾತ್​ನ ಗೀರ್ ಅರಣ್ಯ ಹೊರತುಪಡಿಸಿ ಇನ್ನುಳಿದೆಡೆ ಸಿಂಹಗಳ ಸಾಮ್ರಾಜ್ಯ ವಿಸ್ತರಣೆ ಸಾಧ್ಯವಾಗಿಲ್ಲ. ಸ್ವತಃ ಸುಪ್ರೀಂ ಕೋರ್ಟ್ ಸಿಂಹಗಳ ಸ್ಥಳಾಂತರಕ್ಕೆ ಆದೇಶ ನೀಡಿ ದಶಕ ಕಳೆದರೂ, ಅದಿನ್ನೂ ಜಾರಿಯಾಗದಿರುವುದು ಗುಜರಾತ್​ಯುೕತರ ರಾಜ್ಯಗಳಲ್ಲಿ ‘ಕಾಡಿನ ರಾಜ’ನ ಸದ್ದು ಕೇಳಿಸುತ್ತಿಲ್ಲ.

ಶತಮಾನದ ಹಿಂದೆ ವಿಶ್ವದೆಲ್ಲೆಡೆ ಒಂದು ಲಕ್ಷ ಸಂಖ್ಯೆಯಷ್ಟಿದ್ದ ಸಿಂಹಗಳ ಸಂಖ್ಯೆ ಈಗ 25 ಸಾವಿರಕ್ಕಿಂತ ಕೆಳಗಿಳಿದಿದೆ. ಹಿಂದೊಮ್ಮೆ ಯೂರೋಪ್, ಇರಾಕ್-ಇರಾನ್, ಟಿರ್ಕಿ ಸಹಿತ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಿಂದ ಮೊದಲ್ಗೊಂಡು ಬಿಹಾರ್​ವರೆಗೂ ಸಿಂಹ ಕಾರಿಡಾರ್ ಅಸ್ತಿತ್ವದಲ್ಲಿತ್ತು. ಆಫ್ರಿಕಾದ ಕೆಲವು ದೇಶಗಳಲ್ಲಿ ಹೆಚ್ಚು ಸಿಂಹಗಳು ಇದ್ದರೂ, ಇತ್ತೀಚಿಗೆ ಅವುಗಳ ಸಂಖ್ಯೆ ಕುಸಿಯಲಾರಂಭಿಸಿದೆ. ಬ್ರಿಟೀಷ್​ರಿಂದ ಬಂದೂಕು ಬಳಕೆ ಮುನ್ನಲೆಗೆ ಬರುತ್ತಿದ್ದಂತೆ ಸಿಂಹ ಗರ್ಜನೆಯ ದನಿ ಅಡಗಲು ಶುರುವಾಯಿತು. ಪ್ರಸ್ತುತ ಬೇಟೆ, ಕಳ್ಳಸಾಗಣೆ, ಅರಣ್ಯ ನಾಶ ಹಾಗೂ ಆವಾಸ ಸ್ಥಾನಗಳ ಕಣ್ಮರೆಯಿಂದಾಗಿ ಸಿಂಹ ಅಳಿವಿನಂಚಿನ ಪಟ್ಟಿಗೆ ಸೇರುವಂತಾಗಿದೆ.

ಮೊದಲ ವಿಶ್ವ ಯುದ್ಧದ ವೇಳೆ ಭಾರತದಲ್ಲಿ ಡಜನ್ ಸಂಖ್ಯೆಗೆ ಕುಸಿದಾಗಲೇ ಸಿಂಹ ಸಂರಕ್ಷಣೆ ಕೂಗು ಕೇಳಿಬಂತು. 1936ರಲ್ಲಿ ಜುನಾಗಡ್ ನವಾಬ್​ನ ಮುತುವರ್ಜಿಯಿಂದಾಗಿ ದೇಶದಲ್ಲಿ ಮೊದಲ ಬಾರಿಗೆ ಸಿಂಹಗಳ ಸರ್ವೆ ನಡೆಯಿತು. 1965ರಿಂದ ಪ್ರತಿ ಐದು ವರ್ಷಕ್ಕೊಮ್ಮೆ ಅರಣ್ಯ ಸಚಿವಾಲಯ ಸರ್ವೆ ನಡೆಸುತ್ತಿದೆ. 2001ರ ಬಳಿಕವಷ್ಟೇ ಸಿಂಹಗಳ ಸಂಖ್ಯೆ 300ರ ಗಡಿ ದಾಟಿದ್ದು, ಈಗ 674ಕ್ಕೆ ಹೆಚ್ಚಿದೆ.

ಸಿಂಹ ಗರ್ಜನೆಗೆ ಕಿವಿಗೊಡದ ಮಾನವ: ಭೂಮಿ ಮೇಲಿರುವ ಜೀವಿಗಳಲ್ಲಿ ಅತ್ಯಂತ ಬಲಿಷ್ಠ ಹಾಗೂ ಧೈರ್ಯಶಾಲಿ ಎಂಬ ಹಿರಿಮೆ ಸಿಂಹಕ್ಕಿದೆ. ರಾಜಠೀವಿಯ ನಡಿಗೆ, ಗಾಂರ್ಭೀಯತೆ, ಸಿಂಹ ಗರ್ಜನೆ ಈ ವನ್ಯಜೀವಿಯ ವಿಶೇಷತೆ. ಅಚ್ಚರಿಯೆಂದರೆ ಸಿಂಹ ಗರ್ಜನೆ 8 ಕಿ.ಮೀ. ವರೆಗೂ ಕೇಳಿಸುವುದುಂಟು. ಈ ಸದ್ದಿಗೆ ಆನೆಯಿಂದ ಮೊದಲ್ಗೊಂಡು ಇತರ ಪ್ರಾಣಿಗಳು ಹೆದರುವುದರಿಂದರಿಂದಾಗಿಯೇ ಸಿಂಹಕ್ಕೆ ಕಾಡಿನ ರಾಜ ಎಂಬ ಅನ್ವರ್ಥ ಹೆಸರು ಬಳಕೆಯಲ್ಲಿದೆ. ಆದರೆ, ಮನುಷ್ಯ ಮಾತ್ರ ವನ್ಯಜೀವಿಗಳ ವಿಚಾರದಲ್ಲಿ ಸಿಂಹಾವಲೋಕನ ಮಾಡಿಕೊಳ್ಳುತ್ತಿಲ್ಲ. ಸಿಂಹಗಳ ಮೂಳೆ ಔಷಧ ಹಾಗೂ ಅಲಂಕಾರಕ್ಕೆ ಬಳಕೆಯಾಗುತ್ತಿರುವುದರಿಂದ ಈ ಪ್ರಾಣಿಯ ಬೇಟೆ, ಕಳ್ಳಸಾಗಣೆ ಅವ್ಯಾಹತವಾಗಿ ನಡೆದಿದೆ. ಜೀವವೈವಿಧ್ಯತೆಯಲ್ಲಿ ಸಿಂಹಗಳ ಪಾತ್ರದ ಪ್ರಾಮುಖ್ಯತೆ ಅರಿತು ಕೇಂದ್ರ ಸರ್ಕಾರ 2020ರಲ್ಲಿ ‘ಪ್ರಾಜೆಕ್ಟ್ ಲಯನ್’ ಕಾರ್ಯಕ್ರಮ ಘೋಷಿಸಿ ಸಂರಕ್ಷಣೆಗೆ ಮುಂದಾಗಿದೆ

ಸಿಂಹದ ವಿಶೇಷತೆ ಏನು?
  • ಬೆಕ್ಕಿನ ಜಾತಿಗೆ ಸೇರಿರುವ ಸಿಂಹದ ಪ್ರಭೇದಗಳು ಎಂಟು. ಪ್ರಸ್ತುತ ಏಷ್ಯಾಟಿಕ್, ಆಫ್ರಿಕನ್ ಪ್ರಭೇದ ಮಾತ್ರ ಕಾಣಸಿಗುತ್ತಿದೆ.
  • ಬೆಳವಣಿಗೆ ಹೊಂದಿದ ಸಿಂಹ 80 ಕಿ.ಮೀ. ವೇಗದಲ್ಲಿ ಓಡುವ ಸಾಮರ್ಥ್ಯ ಪಡೆದಿದೆ.
  • ಏಷ್ಯಾಟಿಕ್ ಗಂಡು ಸಿಂಹ 180-190 ಕೆಜಿ, ಹೆಣ್ಣು ಸಿಂಹ 125 ಕೆಜಿ ತೂಗುತ್ತದೆ.
  • ಸರಾಸರಿ ಎತ್ತರ 3.5 ಅಡಿ ಹಾಗೂ 8 ಅಡಿ ಉದ್ದ ಇರುತ್ತದೆ.
  • ಸಿಂಹ ಬೇಟೆಯಾಡಿ ಹೊಟ್ಟೆತುಂಬಿಸಿಕೊಂಡ ಬಳಿಕ ಮರುಬೇಟೆ ಆಡದು.
  • ಬೇಟೆ ವೇಳೆ 8-10 ಮೀಟರ್ ವರೆಗೆ ಜಿಗಿತ ಮಾಡುವ ಶಾರೀರಿಕ ದೃಢತೆ ಇದೆ.
  • ಸಿಂಹ ದಿನದಲ್ಲಿ 18 ಗಂಟೆ ನಿದ್ರೆಗೆ ಜಾರುವ ಜಾಯಮಾನ ಹೊಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net