ರಿಲಯನ್ಸ್​ನ 1.5 ಲಕ್ಷಕ್ಕೂ ಅಧಿಕ ಉದ್ಯೋಗಿಗಳಿಂದ ರಾಜೀನಾಮೆ!; ಕಂಪನಿಯಲ್ಲಿ ಕೆಲಸ ಬಿಡುವವರ ಪ್ರಮಾಣದಲ್ಲೂ ಹೆಚ್ಚಳ!

Reliance industries Limited
Published on

ನವದೆಹಲಿ: ಪ್ರತಿಷ್ಠಿತ ರಿಲಯನ್ಸ್ ಜಿಯೋ ಕಂಪನಿಯ 41 ಸಾವಿರ ಉದ್ಯೋಗಿಗಳು ರಾಜೀನಾಮೆ ನೀಡಿದ್ದು, ಸಂಸ್ಥೆಯಲ್ಲಿ ಕೆಲಸ ಬಿಡುವವರ ಪ್ರಮಾಣವೂ ಹೆಚ್ಚಳಗೊಂಡಿದೆ. ಕಂಪನಿಯ ವಾರ್ಷಿಕ ವರದಿಯಿಂದಾಗಿ ಈ ಅಂಶ ಬಹಿರಂಗಗೊಂಡಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿ. (ಆರ್​ಐಎಲ್​) ಸಂಸ್ಥೆಯಿಂದ ಸ್ವಯಂಪ್ರೇರಿತರಾಗಿ ಕೆಲಸ ಬಿಡುತ್ತಿರುವವ ಪ್ರಮಾಣದಲ್ಲಿ ಗಣನೀಯ ಹೆಚ್ಚಳ ಉಂಟಾಗಿದ್ದು, ಸಂಸ್ಥೆಯ ರಿಟೇಲ್ ಮತ್ತು ಟೆಲಿಕಾಂ ಕ್ಷೇತ್ರದಲ್ಲಿ 2022-23ರ ಆರ್ಥಿಕ ವರ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳು ರಾಜೀನಾಮೆ ನೀಡಿದ್ದಾರೆ.

ಅದರಲ್ಲೂ ರಿಲಯನ್ಸ್ ಜಿಯೋದಿಂದ 41 ಸಾವಿರ ಉದ್ಯೋಗಿಗಳು ಹಾಗೂ ರಿಲಯನ್ಸ್ ರಿಟೇಲ್ಸ್​ನಿಂದ 1 ಲಕ್ಷಕ್ಕೂ ಅಧಿಕ ಉದ್ಯೋಗಿಗಳು ರಾಜೀನಾಮೆ ನೀಡಿದ್ದಾರೆ. ಇನ್ನು ಹಿಂದಿನ ವರ್ಷಕ್ಕೆ ಹೋಲಿಸಿದರೆ ಕೆಲಸ ಬಿಡುವವರ ಪ್ರಮಾಣದಲ್ಲಿ ಶೇ. 64.8 ಹೆಚ್ಚಳಗೊಂಡಿದೆ.

ಆರ್​​ಐಎಲ್​ ರಿಟೇಲ್​ ವಿಭಾಗದಲ್ಲಿ ಹಲವಾರು ಸ್ವಾಧೀನಗಳನ್ನು ಮಾಡಿದ್ದರಿಂದ ಕಾರ್ಯಗಳ ಅತಿಕ್ರಮಣಕ್ಕೆ ಕಾರಣವಾಯಿತು. ಕೆಲವು ಕೆಲಸಗಾರರು ಇತರ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದರೆ, ಇನ್ನು ಕೆಲವರು ನೇಮಕಾತಿ ಉತ್ತುಂಗದ ಸಮಯದಲ್ಲಿ ಇತರ ಕೈಗಾರಿಕೆಗಳಿಗೆ ಸೇರಲು ಸಂಸ್ಥೆಯನ್ನು ತೊರೆದರು ಎಂಬುದಾಗಿ ಕಂಪನಿಯು ಕಾರಣವನ್ನು ತಿಳಿಸಿದೆ.

2022-23ನೇ ಸಾಲಿನಲ್ಲಿ ಒಟ್ಟಾರೆಯಾಗಿ 1,67,391 ಉದ್ಯೋಗಿಗಳು ಕೆಲಸ ಬಿಟ್ಟಿದ್ದಾರೆ. ಆ ಪೈಕಿ ರಿಟೇಲ್​ ಕ್ಷೇತ್ರದಿಂದ 1,19,229 ಮತ್ತು ಜಿಯೋದಿಂದ 41,818 ಜನರು ಉದ್ಯೋಗವನ್ನು ತೊರೆದಿದ್ದಾರೆ. ಅದಾಗ್ಯೂ ಆರ್​​ಐಎಲ್​ ಹೊಸ ನೇಮಕಾತಿಯಲ್ಲಿ ತೊಡಗಿದೆ. ಪ್ರಸಕ್ತ ವರ್ಷದಲ್ಲಿ ತನ್ನ ವಿವಿಧ ವ್ಯವಹಾರಗಳಲ್ಲಿ ಕಂಪನಿಯು 2,62,558 ಉದ್ಯೋಗಿಗಳನ್ನು ನೇಮಕ ಮಾಡಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net