

‘ನಿಮ್ಮ ರಕ್ತದೊತ್ತಡವನ್ನು ನಿಖರವಾಗಿ ಅಳೆಯಿರಿ, ಅದನ್ನು ನಿಯಂತ್ರಿಸಿ, ಹೆಚ್ಚು ಕಾಲ ಜೀವಿಸಿ’ ಎಂಬ ೋಷವಾಕ್ಯದೊಂದಿಗೆ ರಕ್ತದೊತ್ತಡದಿಂದಾಗುವ ಆರೋಗ್ಯ ಸಮಸ್ಯೆಗಳನ್ನು ತಗ್ಗಿಸಲು ಹಾಗೂ ದೀರ್ಘಾಯುಷ್ಯ ಹೊಂದಲು ನಿಖರವಾದ ರಕ್ತದೊತ್ತಡ (ಬಿಪಿ) ನಿರ್ವಹಣೆ ಮಹತ್ವ ತಿಳಿಸುವುದು ಈ ದಿನದ ಉದ್ದೇಶವಾಗಿದೆ.
ಪಂಕಜ ಕೆ.ಎಂ. ಬೆಂಗಳೂರು
ಅಧಿಕ ರಕ್ತದೊತ್ತಡ (ಬಿಪಿ) ಸದ್ದಿಲ್ಲದೆ ಕೊಲ್ಲುವ (ಸೈಲೆಂಟ್ ಕಿಲ್ಲರ್) ಅಪಾಯಕಾರಿ ಆರೋಗ್ಯ ಸಮಸ್ಯೆಯಾಗಿದೆ. ಇದು ಮಿದುಳು, ಹೃದಯ, ಮೂತ್ರಪಿಂಡ ಮತ್ತು ಕಣ್ಣಿನ ಮೇಲೆ ತೀವ್ರ ಪರಿಣಾಮ ಬೀರಲಿದೆ. ಅಧ್ಯಯನಗಳ ಪ್ರಕಾರ ಪಾರ್ಶ್ವವಾಯು ಮತ್ತು ಪರಿಧಮನಿಯ ಹೃದಯ ಕಾಯಿಲೆಯ (ಸಿಎಚ್‌ಡಿ) ಅಪಾಯ ಹೆಚ್ಚಿಸುವಲ್ಲಿ ಮುಂಚೂಣಿಯಲ್ಲಿದೆ.
ಭಾರತದಲ್ಲಿ ಪ್ರತಿ ಐವರಲ್ಲಿ ಇಬ್ಬರು ಅಧಿಕ ರಕ್ತದೊತ್ತಡ ಸಮಸ್ಯೆ ಹೊಂದಿರುತ್ತಾರೆ ಎಂದು ಅಂದಾಜಿಸಲಾಗಿದೆ. ಪಾರ್ಶ್ವವಾಯುವಿನಿಂದ ಸಂಭವಿಸುವ ಸಾವುಗಳಲ್ಲಿ ಶೇ.40 ಹಾಗೂ ಹೃದಯ ಕಾಯಿಲೆಯಿಂದ ಉಂಟಾಗುವ ಮರಣಗಳಲ್ಲಿ ಶೇ.25 ಅಧಿಕ ರಕ್ತದೊತ್ತಡ ನೇರವಾಗಿ ಕಾರಣವಾಗಿರುತ್ತದೆ ಎನ್ನಲಾಗಿದೆ. ಶೇ.85 ರೋಗಿಗಳಲ್ಲಿ ಇದರ ಲಕ್ಷಣಗಳು ಗೋಚರಿಸುವುದಿಲ್ಲ. ಇಂತಹ ಅಪಾಯಗಳಿಂದ ಪಾರಾಗಲು ರಕ್ತದೊತ್ತಡ ಪ್ರಮಾಣವನ್ನು ನಿಯಮಿತವಾಗಿ ಪರೀಕ್ಷಿಸಿ ತಿಳಿಯುವುದು ಅಗತ್ಯವಾಗಿದೆ.
ಬದಲಾದ ಜೀವನಶೈಲಿ, ಆಹಾರಕ್ರಮ, ನಾನಾ ಕಾರಣಗಳಿಂದಾಗಿ ಕೆಲಸದ ಸ್ಥಳ ಸೇರಿ ಹೆಚ್ಚಿನ ಸಂದರ್ಭಗಳಲ್ಲಿ ಒತ್ತಡಕ್ಕೆ ಒಳಗಾಗುವುದು ಶೇ.95 ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಿವೆ. ಇದರ ಹೊರತಾಗಿ ಇತ್ತೀಚಿನ ವರ್ಷಗಳಲ್ಲಿ ಅನುವಂಶಿಕ ಹಾಗೂ ಪರಿಸರ ಅಂಶಗಳೂ ಸೇರಿವೆ ಎನ್ನುತ್ತಾರೆ ವೈದ್ಯರು.
ಅಪಾಯಕಾರಿ ಅಂಶಗಳು:
ಅಧಿಕ ಮಸಾಲೆಯುಕ್ತ ಆಹಾರ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ಸೇವನೆ, ಮದ್ಯಪಾನ ಮತ್ತು ಧೂಮಪಾನ, ಮಾನಸಿಕ ಒತ್ತಡ, ಆತಂಕ, ಕೋಪ ಮತ್ತು ಭಯ, ಕಡಿಮೆ ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಸೇವನೆ, ದೈಹಿಕ ವ್ಯಾಯಾಮದ ಕೊರತೆ, ಬೊಜ್ಜು ಇವು ಅಧಿಕ ರಕ್ತದೊತ್ತಡ ಉಂಟುಮಾಡುವ ಅಪಾಯಕಾರಿ ಅಂಶಗಳಾಗಿವೆ.
ನಿರ್ವಹಣೆಯ ಅಗತ್ಯತೆ:
ಅಧಿಕ ರಕ್ತದೊತ್ತಡ ಇರುವ ಬಹುತೇಕ ರೋಗಿಗಳು ಇತರ ಆರೋಗ್ಯ ಸಮಸ್ಯೆಗಳನ್ನು ಹೊಂದುವ ಸಾಧ್ಯತೆಗಳು ಹೆಚ್ಚು. ಅವು ವಾಸಿಯಾಗದಂತಹ ಸಮಸ್ಯೆಗಳಾಗಬಹುದು. ಹಾಗಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಮುಖ್ಯ. ಈ ಸಮಸ್ಯೆಯನ್ನು ನಿಯಮಿತ ತಪಾಸಣೆ ಮತ್ತು ಔಷಧಗಳ ಮೂಲಕ ತಡೆಗಟ್ಟಬಹುದು. ಆದರೆ ಜೀವನಪರ್ಯಂತ ನಿರ್ವಹಣೆ ಮಾಡಬೇಕಾದಂತಹ ಆರೋಗ್ಯ ಸಮಸ್ಯೆ ಇದಾಗಿದೆ.
ಬಿಪಿ ಪರೀಕ್ಷಿಸಿಕೊಳ್ಳಿ:
ರಕ್ತದೊತ್ತಡ ಇರುವವರಿಗೆ ಇದರಿಂದ ಉಂಟಾಗುವ ಇತರ ಆರೋಗ್ಯ ಹಾಗೂ ಅಪಾಯದ ಮುನ್ಸೂಚನೆ ಬಗ್ಗೆ ಬಹುತೇಕರಿಗೆ ಅರಿವಿರುವುದಿಲ್ಲ. ಆದ್ದರಿಂದ ಇದರ ಅಪಾಯಗಳನ್ನು ತಡೆಯಲು ಇರುವ ಒಂದೇ ಮಾರ್ಗ ಎಂದರೆ ಅದು ನಿಯಮಿತವಾಗಿ ಬಿಪಿ ಪರೀಕ್ಷೆ ಮಾಡಿಕೊಳ್ಳುವುದು. ವಯಸ್ಕರು ವರ್ಷಕ್ಕೆ ಒಮ್ಮೆಯಾದರೂ ಹಾಗೂ ವಯಸ್ಸಾದಂತೆ ನಿಯಮಿತವಾಗಿ ಪರೀಕ್ಷಿಸಿಕೊಳ್ಳಬೇಕು.
ಬಿಪಿ ಎಷ್ಟಿದ್ದರೆ ಸೂಕ್ತ
ಬಿಪಿಯನ್ನು ಎರಡು ರೀತಿ ಪರೀಕ್ಷಿಸಲಾಗುತ್ತದೆ. ಒಂದು ಸಿಸ್ಟಾಲಿಕ್ ಮತ್ತೊಂದು ಡಯಾಸ್ಟಾಲಿಕ್. ಸಾಮಾನ್ಯವಾಗಿ 120-140 ಸಿಸ್ಟಾಲಿಕ್ ಹಾಗೂ 80-90ಡಯಾಸ್ಟಾಲಿಕ್ ಇದ್ದರೆ ತೊಂದರೆ ಇಲ್ಲ. 140-160/ 90-100 ಇದ್ದರೆ ಸ್ಟೇಜ್ -1 ಆಹಾರ ಹಾಗೂ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ನಿಯಂತ್ರಿಸಬಹುದು. 160-180/ 110-120 ಇದ್ದರೆ ಸ್ಟೇಜ್ - 2 ಔಷಧ ಪ್ರಾರಂಭಿಸಬೇಕು. ಜತೆಗೆ ಆಹಾರ ಕ್ರಮ, ಜೀವನ ಶೈಲಿ ಬದಲಾವಣೆಯೊಂದಿಗೆ ಯೋಗ, ಧ್ಯಾನ ಇತ್ಯಾದಿಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ.
ಆಚರಣೆಯ ಇತಿಹಾಸ
ಅಧಿಕ ರಕ್ತದೊತ್ತಡ ಕುರಿತು ಜಾಗೃತಿ ಮೂಡಿಸುವ ಸಂಸ್ಥೆ ‘ವರ್ಲ್ಟ್ ಟೈಪರ್‌ಟೆನ್ಷನ್ ಲೀಗ್’ 2005ರ ಮೇ 14ರಂದು ಅಧಿಕ ರಕ್ತದೊತ್ತಡ ದಿನವನ್ನು ಪರಿಚಯಿಸಿತು. ಆದರೆ 2006ರಿಂದ ಪ್ರತಿ ವರ್ಷ ಮೇ 17ರಂದು ಅಧಿಕ ರಕ್ತದೊತ್ತಡ ದಿನ ಆಚರಿಸುವ ಮೂಲಕ ಜನರಲ್ಲಿ ಸಮಸ್ಯೆ ಪತ್ತೆ ಮತ್ತು ಚಿಕಿತ್ಸೆಯ ಕುರಿತು ಅರಿವು ಮೂಡಿಸಲಾಗುತ್ತದೆ. ಅದಕ್ಕಾಗಿ ಆರೋಗ್ಯ ಸಂಸ್ಥೆಗಳು ಈ ದಿನದಂದು ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ.
ಮುನ್ನೆಚ್ಚರಿಕೆ ಕ್ರಮಗಳು
* ನಿತ್ಯ ಯೋಗ ಮತ್ತು ಧ್ಯಾನ ಮಾಡಬೇಕು
* ದೇಹಕ್ಕೆ ಅಗತ್ಯವಾದಷ್ಟು ವಿಶ್ರಾಂತಿ ಪಡೆಯಬೇಕು
* ಸಾಕಷ್ಟು ಪ್ರಮಾಣದಲ್ಲಿ (6 -8 ತಾಸು) ನಿದ್ರೆ ಮಾಡಬೇಕು
* ರಾತ್ರಿ ತಡವಾಗಿ ಊಟ ಮಾಡಬಾರದು
* ಶ್ರಮದಾಯಕ ಕೆಲಸಗಳನ್ನು ಮಿತವಾಗಿ ಮಾಡುವುದು
* ಆಹಾರದಲ್ಲಿ ಮಸಾಲೆ ಹಾಗೂ ಉಪ್ಪು ಕಡಿಮೆ ಬಳಕೆ ಸೂಕ್ತ
* ಅನಗತ್ಯವಾಗಿ ಸಣ್ಣ-ಪುಟ್ಟ ವಿಚಾರಗಳಿಗೆ ಒತ್ತಡಕ್ಕೆ ಒಳಗಾಗಬಾರದು
* ವೈದ್ಯರ ಸಲಹೆಯಂತೆ ನಿಯಮಿತ ಔಷಧ ಸೇವನೆ
* ದೇಹದ ತೂಕ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು
ಕೋಟ್
ಚಟುವಟಿಕೆಯುಕ್ತ ಜೀವನ ಶೈಲಿ ಹಾಗೂ ಸಾಂಪ್ರದಾಯಿಕ ಆಹಾರ ಕ್ರಮದಿಂದ ಉತ್ತಮ ಆರೋಗ್ಯ ಹೊಂದಬಹುದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯ ಆಹಾರ ಕ್ರಮಗಳನ್ನು ಅನುಸರಿಸುವ ಮೂಲಕ ಜನರು ಅನಾರೋಗ್ಯ ತಂದುಕೊಳ್ಳುತ್ತಿದ್ದಾರೆ. ಅದರಲ್ಲಿ ಬಿಪಿ ಸಹ ಒಂದು. ಹಾಗಾಗಿ ನಿಯಮಿತವಾಗಿ ಬಿಪಿ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ವೈದ್ಯರ ಸಲಹೆ ಪಡೆಯಬೇಕು.
ಡಾ.ಶಿವಕುಮಾರ್, ಕ್ಯಾಶುಯಲ್ಟಿ ವೈದ್ಯಾಧಿಕಾರಿ, ವಿಕ್ಟೋರಿಯಾ ಆಸ್ಪತ್ರೆ