ಆರೋಗ್ಯ ಜೋಪಾನ, ಮುನ್ನೆಚ್ಚರಿಕೆಯೇ ಸೋಪಾನ: ಇಂದು ವಿಶ್ವ ಹೃದಯ ದಿನ

Heart
Published on
ಹೃದಯಾಘಾತಕ್ಕೆ ಒಳಗಾಗುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಹದಿಹರೆಯದವರಲ್ಲೂ ಹೃದಯಾಘಾತ ಸಂಭವಿಸುತ್ತಿರುವುದು ಕಳವಳಕಾರಿ ಸಂಗತಿ. ಜೀವನಶೈಲಿ ಬದಲಾವಣೆ, ಆರೋಗ್ಯಪೂರ್ಣ ಆಹಾರ ಸೇವನೆ, ವ್ಯಾಯಾಮ ಮತ್ತಿತರ ಚಟುವಟಿಕೆಗಳಿಂದ ಹೃದಯ ಕಾಯಿಲೆ ತಡೆಗಟ್ಟಬಹುದು. ವಿಶ್ವ ಹೃದಯ ದಿನ ಅಂಗವಾಗಿ ವಿಜಯವಾಣಿ ಹಮ್ಮಿಕೊಂಡಿದ್ದ ಸಂವಾದದಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕಾರ್ಡಿಯಾಲಜಿ ಪ್ರೊಫೆಸರ್ ಡಾ.ಎ.ಸಿ. ನಾಗಮಣಿ ಹಾಗೂ ನಾರಾಯಣ ಎಂ.ಎಸ್.ರಾಮಯ್ಯ ಹೃದ್ರೋಗ ಕೇಂದ್ರದ ಮುಖ್ಯಸ್ಥ ಡಾ. ಯು.ಎ. ನಾಗಮಲೇಶ್ ಅವರು ಹೃದ್ರೋಗ ಕುರಿತ ಹಲವು ಮಹತ್ವದ ಸಂಗತಿಗಳ ಮೇಲೆ ಬೆಳಕು ಚೆಲ್ಲಿದರು.

ಧೂಮಪಾನ, ಮದ್ಯಪಾನ, ಉದ್ದೀಪನ ಮದ್ದುಗಳ ಸೇವನೆಯ ಅಡ್ಡಪರಿಣಾಮದ ಅರಿವಿಲ್ಲದೆ ಯುವಜನರು ಅವುಗಳಿಗೆ ದಾಸರಾಗುತ್ತಿದ್ದಾರೆ. ಪರಿಣಾಮ ಯುವಜನರಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚಾಗುತ್ತಿದೆ. ಹೃದಯಾಘಾತಕ್ಕೆ ಒಳಗಾಗುವ ಪ್ರತಿ ಹತ್ತು ಮಂದಿಯಲ್ಲಿ ಇಬ್ಬರು 20-30 ವಯೋಮಾನದವರಿದ್ದಾರೆ. ಅಸಾಂಕ್ರಾಮಿಕ ಕಾಯಿಲೆಯಾಗಿರುವ ಹೃದ್ರೋಗವನ್ನು ಉತ್ತಮ ಜೀವನ ಶೈಲಿಯಿಂದ ನಿಯಂತ್ರಿಸಲು ಸಾಧ್ಯ. ಹೃದಯಾಘಾತ ಆಗುವ ಮೊದಲು ಮುನ್ಸೂಚನೆಯಾಗಿ ಕೆಲ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅವುಗಳನ್ನು ನಿರ್ಲಕ್ಷಿಸದೆ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಂಡು ಅವರ ಸಲಹೆ ಪಾಲಿಸಿದರೆ ಹೃದಯದ ಆರೋಗ್ಯ ಕಾಪಾಡಿಕೊಳ್ಳಬಹುದು.

ವಂಶವಾಹಿಯಿಂದ ಶೇ. 50 ಅಪಾಯ: ತಂದೆ ಮತ್ತು ತಾಯಿ ಇಬ್ಬರಿಗೂ ಹೃದಯಾಘಾತದ ಸಮಸ್ಯೆ ಇದ್ದರೆ ಅಂತಹ ಕುಟುಂಬದಲ್ಲಿ ಶೇ. 50 ಹೃದಯಾಘಾತದ ಅಪಾಯ ಇದೆ. ಇವರಲ್ಲಿ ಯಾರಿಗಾದರೂ ಒಬ್ಬರಿಗೆ ಇದ್ದಲ್ಲಿ ಶೇ. 25 ಸಾಧ್ಯತೆ ಇದೆ. ಹೃದಯಾಘಾತದ ಕೌಟುಂಬಿಕ ಹಿನ್ನೆಲೆ ಹೊಂದಿದ್ದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.

ಆಹಾರ ಕ್ರಮದಲ್ಲಿ ಬೇಕು ಎಚ್ಚರಿಕೆ: ಮನೆಯಿಂದ ಹೊರಗೆ ಹೋದಾಗ ಎಲ್ಲೆಡೆ ಸುಲಭವಾಗಿ ಸಿದ್ಧ ಆಹಾರ ದೊರೆಯುತ್ತಿರುವುದು ಅಸಾಂಕ್ರಾಮಿಕ ರೋಗಗಳ ಹೆಚ್ಚಳಕ್ಕೆ ಕಾರಣವಾಗಿದೆ. ಈ ಬದಲಾದ ಆಹಾರ ಕ್ರಮದಿಂದ ಮಧುಮೇಹ, ಅಧಿಕ ರಕ್ತದೊತ್ತಡ, ಸ್ಥೂಲಕಾಯ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.

ಹೊರಗೆ ಸುಲಭವಾಗಿ ಆಹಾರ ದೊರೆಯುತ್ತಿರುವುದು ಸಹ ಹೃದ್ರೋಗ ಹೆಚ್ಚಳಕ್ಕೆ ಕಾರಣವಾಗಿದೆ. ದೇಶದಲ್ಲಿ ಸಿದ್ಧ ಆಹಾರದಲ್ಲಿ ಎಷ್ಟು ಪ್ರಮಾಣದಲ್ಲಿ ಉಪು್ಪ, ಹುಳಿ, ಖಾರ, ಎಣ್ಣೆ ಬಳಕೆ ಮಾಡಬೇಕು ಎಂಬ ನಿಯಮವಿಲ್ಲ. ಕೆಲ ರಾಷ್ಟ್ರಗಳಲ್ಲಿ ಇಂತಿಷ್ಟೇ ಪ್ರಮಾಣದಲ್ಲಿ ಪದಾರ್ಥಗಳ ಬಳಕೆ ಮಾಡಬೇಕೆಂಬ ನಿಯಮವಿದೆ. ಆದು ಇಲ್ಲಿಯೂ ಜಾರಿಗೆ ಬರುವಂತಾಗಬೇಕು. | ಡಾ. ಯು.ಎಂ. ನಾಗಮಲೇಶ್ ಮುಖ್ಯಸ್ಥರು, ನಾರಾಯಣ ಎಂ.ಎಸ್. ರಾಮಯ್ಯ ಹೃದ್ರೋಗ ಕೇಂದ್ರ ಮಕ್ಕಳು ಈಗ ಹಣ್ಣು ತಿನ್ನುವುದೇ ಕಡಿಮೆಯಾಗಿದೆ. ಹೃದಯ ಸಂರಕ್ಷಣೆಗೆ ಹಣ್ಣು ಅತ್ಯವಶ್ಯ. ಮಕ್ಕಳಿಗೆ ಕುರುಕಲು ಹಾಗೂ ಜಂಕ್ ಫುಡ್ ಕೊಡುವುದರಿಂದ ಸ್ಥೂಲಕಾಯರಾಗುತ್ತಿದ್ದಾರೆ. ಇದು ನಾನಾ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆರೋಗ್ಯಪೂರ್ಣ ಆಹಾರದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. | ಡಾ. ಎ.ಸಿ.ನಾಗಮಣಿ ಪ್ರೊಫೆಸರ್, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು

ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೌಲಭ್ಯದ ಕೊರತೆ

ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಹೃದಯಾಘಾತದ ಸಂದರ್ಭದಲ್ಲಿ ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ರೋಗಿಗಳು ಸಾವನ್ನಪು್ಪತ್ತಿದ್ದಾರೆ. ಅದರಲ್ಲೂ ಸುಲಭ ಹಾಗೂ ಕಡಿಮೆ ವೆಚ್ಚದಲ್ಲಿ ನೀಡಬಹುದಾದ ಥ್ರಂಬೋಲಿಟಿಕ್ ಥೆರಪಿ ಚಿಕಿತ್ಸೆಗೆ ಪೂರಕ ವ್ಯವಸ್ಥೆ ಇಲ್ಲದ ಕಾರಣ ಪ್ರಾಥಮಿಕ ಚಿಕಿತ್ಸೆ ನೀಡದೆಯೇ ರೋಗಿಗಳನ್ನು ನಗರ ಪ್ರದೇಶದ ದೊಡ್ಡ ಆಸ್ಪತ್ರೆಗಳಿಗೆ ರೆಫರ್ ಮಾಡಲಾಗುತ್ತಿದೆ. ಇದರಿಂದ ಗೋಲ್ಡನ್ ಅವರ್​ನಲ್ಲಿ (ಮಹತ್ವದ ಸಮಯ) ಚಿಕಿತ್ಸೆ ಪಡೆಯಲಾಗುತ್ತಿಲ್ಲ. ಥ್ರಂಬೋಲಿಟಿಕ್ ಥೆರಪಿ ಎಂದರೆ ರೋಗಿಗೆ ಹೃದಯದ ರಕ್ತನಾಳದಲ್ಲಿ ಹೆಪು್ಪಗಟ್ಟಿರುವ ರಕ್ತವನ್ನು ಕರಗಿಸಲು ಇಂಜೆಕ್ಷನ್ ನೀಡುವ ಚಿಕಿತ್ಸಾ ವಿಧಾನ. ಆದರೆ, ಇದರಿಂದ ಕೆಲವರಿಗೆ ಏಕಾಏಕಿ ಹೃದಯ ಬಡಿತ ನಿಲ್ಲುವುದು, ಅಧಿಕ ರಕ್ತದ ಒತ್ತಡ ಉಂಟಾಗುವ ಸಾಧ್ಯತೆಗಳಿರುತ್ತದೆ. ಹಾಗಾಗಿ ಈ ಚಿಕಿತ್ಸೆಯನ್ನು ತೀವ್ರ ನಿಗಾ ಘಟಕದಲ್ಲಿಯೇ ನೀಡಬೇಕು. ಆದರೆ, ಗ್ರಾಮೀಣ ಪ್ರದೇಶಗಳಲ್ಲಿನ ಆಸ್ಪತ್ರೆಗಳಲ್ಲಿ ಐಸಿಯು ಅಲಭ್ಯತೆ ಹಾಗೂ ಅಗತ್ಯ ಸಿಬ್ಬಂದಿ ಕೊರತೆಯಿಂದಾಗಿ ವೈದ್ಯರು ಯಾವುದೇ ಪ್ರಾಥಮಿಕ ಚಿಕಿತ್ಸೆ ನೀಡದೆ ರೋಗಿಗಳನ್ನು ದೂರದ ಆಸ್ಪತ್ರೆಗಳಿಗೆ ರೆಫರ್ ಮಾಡುತ್ತಿದ್ದಾರೆ. ಇದರಿಂದ ರೋಗಿಗಳು ಸಕಾಲದಲ್ಲಿ ಚಿಕಿತ್ಸೆ ಪಡೆಯಲಾಗದೆ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಸ್ತಂಭನ: ರಕ್ತನಾಳ ಬ್ಲಾಕ್ ಆಗಿ ರಕ್ತಸಂಚಾರ ಇಲ್ಲದಿದ್ದಾಗ ಹೃದಯಾಘಾತ ಎಂದು ಹೇಳುತ್ತೇವೆ. ಹೃದಯಸ್ತಂಭನ ಎಂದರೆ ಏಕಾಏಕಿ ಹೃದಯ ಕಾರ್ಯ ನಿಂತು ಹೋಗುತ್ತದೆ. ಅದಕ್ಕೆ ಹೃದಯಾಘಾತ ಹಾಗೂ ಹೃದಯ ವೈಫಲ್ಯ ಕಾರಣವಾಗಿರುತ್ತದೆ. ಪ್ರಮುಖವಾಗಿ ಕ್ರೀಡಾಪಟುಗಳಲ್ಲಿ ಹೃದಯಸ್ತಂಭನ ಸಾಧ್ಯತೆ ಹೆಚ್ಚಿರುತ್ತದೆ. ಅದಕ್ಕೆ ಬೇರೆ ಬೇರೆ ಆರೋಗ್ಯ ಕಾರಣಗಳು ಇರುತ್ತವೆ.

ಮಿತಪಾನವೂ ಒಳ್ಳೆಯದಲ್ಲ: ಮದ್ಯಪಾನ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಹೃದಯಾಘಾತಕ್ಕೆ ಕಾರಣವಾಗಬಹುದು. ವೈದ್ಯರು ಮದ್ಯಪಾನ ಶಿಫಾರಸು ಮಾಡುವುದಿಲ್ಲ. ಜಾಸ್ತಿ ಕುಡಿಯುವವರು ಕಡಿಮೆ ಕುಡಿಯಬೇಕು. ಇಲ್ಲವೇ ಮದ್ಯ ಸೇವನೆ ನಿಲ್ಲಿಸಬೇಕು. ಮಿತಪಾನವೂ ಒಳ್ಳೆಯದಲ್ಲ.

ಖಂಡಿತ ತಡೆಗಟ್ಟಬಹುದು: ಹೃದಯಾಘಾತ ತಡೆಗಟ್ಟಬಹುದಾದ ಕಾಯಿಲೆ. ಪಾಶ್ಚಿಮಾತ್ಯ ರಾಷ್ಟ್ರಗಳು ಜೀವನ ಶೈಲಿ ಬದಲಾವಣೆ ಮೂಲಕ ನಿಯಂತ್ರಣ ಮಾಡಿಕೊಂಡಿವೆ. ನಮ್ಮಲ್ಲಿ ಸರ್ಕಾರ, ಜನರು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ಶಾಲಾ ಹಂತದಲ್ಲೇ ಆರೋಗ್ಯಕರ ಆಹಾರದ ಬಗ್ಗೆ ಜಾಗೃತಿ ಮೂಡಿಸಬೇಕು. ಪಾಶ್ಚಿಮಾತ್ಯ ರಾಷ್ಟ್ರಗಳಿಗಿಂತ 10 ವರ್ಷ ಮೊದಲೇ ನಮ್ಮಲ್ಲಿ ಹೃದ್ರೋಗ ಕಾಣಿಸಿಕೊಳ್ಳುತ್ತದೆ. 21-30 ವಯಸ್ಸಿನವರಲ್ಲಿ ಈ ಕಾಯಿಲೆ ಕಂಡುಬರುತ್ತಿದೆ. ನಗರ ಪ್ರದೇಶ ಮಾತ್ರವಲ್ಲ, ಹಳ್ಳಿಯವರೂ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಮಧುಮೇಹ, ಅಧಿಕ ರಕ್ತದೊತ್ತಡ, ಕೊಬ್ಬಿನ ಅಂಶವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು.

ಕೋವಿಡ್ ನಂತರದ ಪರಿಣಾಮ: ಕೋವಿಡ್ ನಂತರ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಕೋವಿಡ್ ಸೋಂಕಿಗೆ ಒಳಗಾದವರಲ್ಲಿ ರಕ್ತ ಹೆಪ್ಪುಗಟ್ಟುವ ಪ್ರಮಾಣ ಹೆಚ್ಚಿದ್ದು, ರಕ್ತನಾಳಕ್ಕೆ ಹಾನಿ ಉಂಟುಮಾಡುತ್ತಿದೆ. ಕೋವಿಡ್​ನಿಂದ ಉದ್ಯೋಗ ನಷ್ಟ, ಒತ್ತಡದಿಂದಲೂ ಹೃದಯಾಘಾತಗಳಾಗಿವೆ.

ಮಹಿಳೆಯರಲ್ಲಿ ಕಡಿಮೆ: ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಅದರಲ್ಲೂ ಕಡಿಮೆ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಒಳಗಾಗು ವವರ ಸಂಖ್ಯೆ ತೀರ ಕಡಿಮೆ. ಇದಕ್ಕೆ ದೈಹಿಕ ಮತ್ತು ಮಾನಸಿಕ ಅಂಶಗಳು ಕಾರಣವಾಗಿವೆ. ಮಹಿಳೆಯರಲ್ಲಿ ಧೂಮಪಾನ, ಮದ್ಯಪಾನ ಕಡಿಮೆ ಇರುತ್ತದೆ. ಋತುಚಕ್ರದ ಸಮಯದಲ್ಲಿ ಮಹಿಳೆಯರಿಗೆ ಹೃದಯಾಘಾತ ಸಾಧ್ಯತೆ ಕಡಿಮೆ. ನಂತರದಲ್ಲಿ ಅಂದರೆ 50- 60 ವರ್ಷಗಳಲ್ಲಿ ಮಹಿಳೆಯರಲ್ಲಿ ಹೃದಯಾಘಾತ ಕಾಣಿಸಿಕೊಳ್ಳಬಹುದಾಗಿದೆ.

ತುರ್ತು ಸಂದರ್ಭದ ಮುನ್ನೆಚ್ಚರಿಕೆಗಳು

  • ಹೃದಯ ಸಮಸ್ಯೆ ಕಾಣಿಸಿಕೊಂಡ 1-3 ಗಂಟೆ ಒಳಗೆ ಆಸ್ಪತ್ರೆಗೆ ಕರೆ ತರಬೇಕು.
  • ರಕ್ತ ತೆಳುಗೊಳಿಸುವ ಮಾತ್ರೆ ಕೊಟ್ಟು ಆಸ್ಪತ್ರೆಗೆ ಕರೆದುಕೊಂಡು ಬರಬೇಕು.
  • 3 ಗಂಟೆ ಗೋಲ್ಡನ್ ಅವರ್. ಈ ಅವಧಿಯಲ್ಲಿ ರೋಗಿಯನ್ನು ಆಸ್ಪತ್ರೆಗೆ ಕರೆ ತಂದರೆ ಜೀವ ಉಳಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ.
  • ಹೃದಯ ಸಮಸ್ಯೆ ಕಾಣಿಸಿಕೊಂಡಾಗ ರೋಗಿಗಳಲ್ಲಿ ಗಾಬರಿ ಉಂಟು ಮಾಡಬಾರದು, ಓಡಬಾರದು, ಬೈಕ್ ಮತ್ತಿತರ ವಾಹನ ಚಾಲನೆ ಮಾಡಿಕೊಂಡು ಆಸ್ಪತ್ರೆಗೆ ಬರಬಾರದು.
  • ಮಧುಮೇಹ, ಬಿಪಿ ಇರುವವರು ಮನೆಯಲ್ಲಿ ಆಸ್ಪಿರಿನ್, ಕೊಲೆಸ್ಟ್ರಾಲ್ ಮಾತ್ರೆ ಇಟ್ಟುಕೊಳ್ಳುವುದು ಒಳ್ಳೆಯದು.
  • ಹೃದಯಾಘಾತದ ಲಕ್ಷಣ ಕಂಡುಬಂದ ಕೂಡಲೇ ಥ್ರಾಂಬೋಲಿಟಿಕ್ ಥೆರಪಿ (ಬ್ಲಡ್ ಕ್ಲಾಟ್ ಕರಗಿಸುವ ಚಿಕಿತ್ಸೆ) ಪಡೆದರೆ ಹೆಚ್ಚು ಉಪಯುಕ್ತ.
  • ಎದೆನೋವು ಕಾಣಿಸಿಕೊಂಡಾಗ ಗ್ಯಾಸ್ಟಿ್ರ್ ಎಂದು ನಿರ್ಲಕ್ಷಿಸಬಾರದು.

ಆರೋಗ್ಯ ಕಾಪಾಡುವ ಕ್ರಮಗಳು

  • ಹೋಟೆಲ್ ಸೇರಿದಂತೆ ಹೊರಗಿನ ಆಹಾರ ಸೇವನೆಯಲ್ಲಿ ಮಿತವಿರಬೇಕು.
  • ಅತಿಯಾದ ಉಪ್ಪು, ಖಾರ, ಮಸಾಲೆ ಇರುವ ಪದಾರ್ಥಗಳ ಸೇವನೆ ಮಾಡಬಾರದು.
  • ಮನೆಯಲ್ಲಿ ತಯಾರಿಸಿದ ತಾಜಾ ಆಹಾರ, ತಾಜಾ ಹಣ್ಣು, ತರಕಾರಿ, ಧಾನ್ಯಗಳನ್ನು ಬಳಸಬೇಕು.
  • ಎಣ್ಣೆ, ಬೆಣ್ಣೆ, ತುಪ್ಪ, ಸಕ್ಕರೆ, ಅಂಶ ಇರುವ ಪದಾರ್ಥಗಳ ಸೇವನೆ ಮಿತವಾಗಿರಬೇಕು.
  • ಅತಿಯಾದ ಕೊಬ್ಬು ಇರುವ ಮಾಂಸ ಪದಾರ್ಥದ ಸೇವನೆ ಒಳ್ಳೆಯದಲ್ಲ.
  • ಬೇಯಿಸಿದ ಮೀನಿನ ಆಹಾರ ಆರೋಗ್ಯಕ್ಕೆ ಪೂರಕ.
  • ಸೂರ್ಯಕಾಂತಿ, ಕಡಲೆಕಾಯಿ, ಆಲಿವ್ ಹಾಗೂ ಒಂದೊಂದು ಧಾನ್ಯದ ಎಣ್ಣೆ ಬಳಕೆ ಒಳ್ಳೆಯದು.
  • ಬೆಳಗ್ಗೆ ಹೆಚ್ಚು, ಮಧ್ಯಾಹ್ನ ಮಿತವಾಗಿ ಹಾಗೂ ರಾತ್ರಿ ಅತಿ ಕಡಿಮೆ ಅಹಾರ ಸೇವನೆ ಉತ್ತಮ.

ಕಾರಣಗಳು

  • ಬದಲಾದ ಆಹಾರ ಮತ್ತು ಜೀವನ ಶೈಲಿ
  • ಚಟುವಟಿಕೆರಹಿತ ಜೀವನಕ್ರಮ
  • ಧೂಮಪಾನ ಮತ್ತು ಮದ್ಯಪಾನ
  • ಅತಿ ರಕ್ತದೊತ್ತಡ ಮತ್ತು ಮಧುಮೇಹ
  • ಸ್ಥೂಲಕಾಯ ಸಮಸ್ಯೆ
  • ಕುಟುಂಬದಲ್ಲಿ ಹೃದಯಾಘಾತದ ಹಿನ್ನೆಲೆ
  • ಉದ್ದೀಪನ ಮದ್ದುಗಳ ಬಳಕೆ
  • ವಾಯು ಮಾಲಿನ್ಯ
  • ಮಾನಸಿಕ ಒತ್ತಡ, ಖಿನ್ನತೆ
  • ನಿದ್ರಾಹೀನತೆ
  • ಹೊರಗಿನ ಆಹಾರ ಹೆಚ್ಚು ಸೇವನೆ

ಲಕ್ಷಣಗಳು

  • ಎದೆಯಲ್ಲಿ ತೀವ್ರವಾದ ನೋವು
  • ಚಳಿಯಲ್ಲೂ ಮೈ ಬೆವರುವುದು
  • ಭುಜದ, ಕೈ, ಕುತ್ತಿಗೆ, ಕೆಳದವಡೆ ಮತ್ತು ಬೆನ್ನು ನೋವು
  • ಆಯಾಸ ಮತ್ತು ಅತಿಯಾದ ಸುಸ್ತು
  • ಗ್ಯಾಸ್ಟ್ರಿಕ್ ರೀತಿಯ ಲಕ್ಷಣಗಳು
  • ತಲೆ ಸುತ್ತುವಿಕೆ, ವಾಕರಿಕೆ
  • ಎದೆಯಲ್ಲಿ ಭಾರವಾದ ಅನುಭವ
  • ಉಸಿರಾಟದ ಸಮಸ್ಯೆ
  • ಎದೆಬಡಿತ ಜೋರಾಗುವುದು
  • ಬಿಟ್ಟುಬಿಟ್ಟು ಎದೆನೋವು ಕಾಣಿಸಿಕೊಳ್ಳುವುದು

ನಿಯಮಿತ ವ್ಯಾಯಾಮ, ಹಾರ್ಟ್​ಬೀಟ್ ಸುಗಮ

| ಡಾ. ಬಸವರಾಜ ಬಳಿಗಾರ ಹೃದ್ರೋಗ ತಜ್ಞರು, ಹುಬ್ಬಳ್ಳಿ

ಆರೋಗ್ಯಕರ ಹೃದಯಕ್ಕೆ ಒಳ್ಳೆಯ ಜೀವನಶೈಲಿ ಪ್ರಮುಖ ಪಾತ್ರ ವಹಿಸುತ್ತದೆ. ವ್ಯಾಯಾಮ, ಆಹಾರ ಪದ್ಧತಿ, ಬಿಪಿ ಮತ್ತು ಡಯಾಬಿಟಿಸ್ ನಿಯಂತ್ರಣ ಮುಂತಾದವು ಈ ನಿಟ್ಟಿನಲ್ಲಿ ಪ್ರಮುಖವಾಗಿವೆ. ವ್ಯಾಯಾಮವು ಹೃದಯದ ಪಂಪ್ ಮಾಡುವ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ; ಕೊಬ್ಬು ರಕ್ತನಾಳದಲ್ಲಿ ಶೇಖರವಾಗುವುದನ್ನು ತಪ್ಪಿಸುತ್ತದೆ. ಇದರಿಂದ ಹೃದಯಾಘಾತದ ಸಾಧ್ಯತೆ ಕಡಿಮೆಯಾಗುತ್ತದೆ. ದೇಹದ ತೂಕ ಮತ್ತು ರಕ್ತದೊತ್ತಡ ಕಡಿಮೆಯಾಗುತ್ತದೆ. ಇದು ಮಧುಮೇಹವನ್ನು ಕೂಡ ಹತೋಟಿಯಲ್ಲಿಡುತ್ತದೆ. ವಾರಕ್ಕೆ 150 ನಿಮಿಷದ ವ್ಯಾಯಾಮ ಬೇಕಾಗುತ್ತದೆ. ದಿನಕ್ಕೆ 20-30 ನಿಮಿಷಕ್ಕೆ ವಿಭಾಗಿಸಿದರೆ ವಾರಕ್ಕೆ 150 ನಿಮಿಷದ ವ್ಯಾಯಾಮವಾಗುತ್ತದೆ. ವೇಗದ ನಡಿಗೆ ಅಥವಾ ಲಘು ವ್ಯಾಯಾಮವು ಹೃದಯ ಕಾಯಿಲೆ ಮತ್ತು ಪಾರ್ಶ್ವವಾಯು ಅಪಾಯವನ್ನು ಶೇ. 35 ರಷ್ಟು ಕಡಿಮೆ ಮಾಡಬಹುದಾಗಿದೆ. ಉತ್ತಮ ಆಹಾರ ಪದ್ಧತಿ ಕೂಡ ಹೃದಯ ಕಾಯಿಲೆ ತಪ್ಪಿಸಲು ಸಹಕಾರಿ. ಕೊಬ್ಬು (ಎಣ್ಣೆ) ಇರುವ ಆಹಾರವನ್ನು ಕಡಿಮೆ ಮಾಡಬೇಕು. ಹೆಚ್ಚಿಗೆ ನಾರಿನಾಂಶವಿರುವ ಆಹಾರ ಸೇವಿಸಬೇಕು. ಉದಾ: ಹಣ್ಣುಗಳು, ಹಸಿರು ತಪ್ಪಲು, ತರಕಾರಿ, ಒಣಗಿದ ಹಣ್ಣು, ಪೊಟ್ಯಾಶಿಯಂ ಮ್ಯಾಗ್ನೇಶಿಯಂ ಮತ್ತು ಕ್ಯಾಲ್ಸಿಯಂನಿಂದ ಕೂಡಿದ ಆಹಾರ ತೆಗೆದುಕೊಳ್ಳಬೇಕು. ಇವು ಬ್ಲಡ್ ಪ್ರೆಶರ್ ಕಡಿಮೆ ಮಾಡುತ್ತವೆ. ಅಂಜೂರ ಹಣ್ಣು, ಎಪ್ರಿಕಾಟ್, ಅವಕಾಡೂ, ಟೊಮೆಟೊ, ಬಾಳೆಹಣ್ಣು, ಬೀಟರೂಟ್ - ಪೋಟ್ಯಾಶಿಯಂ ಹೆಚ್ಚಿಗೆಯಿರುವ ಆಹಾರಗಳಾಗಿವೆ. ಓಟ್ಸ್, ಧಾನ್ಯಗಳು, ಬೀನ್ಸ್, ಬಾಳೆಹಣ್ಣು ಬೀಜಗಳು- ಮ್ಯಾಗ್ನೇಶಿಯಂ ಹೆಚ್ಚಿರುವ ಆಹಾರಗಳಾಗಿವೆ. ಬ್ರೋಕೋಲಿ ಡೈರಿ ಪದಾರ್ಥ, ಹಾಲು, ಮೊಸರು, ಎಳ್ಳು ಬೀಜ, ಬಾದಾಮಿ ಇವು ಕ್ಯಾಲ್ಸಿಯಂ ಇರುವ ಆಹಾರಗಳಾಗಿವೆ. ರಕ್ತದೊತ್ತಡವನ್ನು ಹತೋಟಿಯಲ್ಲಿ ಇಡಬೇಕು. ಶೇ. 54ರಷ್ಟು ಪಾರ್ಶ್ವವಾಯು ಮತ್ತು ಶೇ. 47ರಷ್ಟು ಹೃದಯಾಘಾತಕ್ಕೆ ಹೈ ಬಿಪಿಯೇ ಕಾರಣ. ಸಕ್ಕರೆ ಕಾಯಿಲೆ ಇದ್ದವರಲ್ಲಿ ಹೃದಯಾಘಾತದ ಸಾಧ್ಯತೆ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಹೃದಯದ ರಕ್ತನಾಳಗಳಲ್ಲಿ ಬ್ಲಾಕೇಜುಗಳನ್ನು ಹೆಚ್ಚಿಸುತ್ತದೆ.

  • ನಿಯಮಿತ ವ್ಯಾಯಾಮದಿಂದ ಹೃದಯದ ಆರೋಗ್ಯ ಕಾಪಾಡಿಕೊಳ್ಳಬಹುದು.
  • ಪ್ರತಿ ದಿನ ಬೆಳಗ್ಗೆ 20 ನಿಮಿಷಗಳ ನಡಿಗೆ ಹಾಗೂ ವ್ಯಾಯಾಮ ಮಾಡುವುದು ಉತ್ತಮ.
  • ದೇಹದ ಫಿಟ್​ನೆಸ್​ಗಾಗಿ ಜಿಮ್ೆ ಹೋಗುವವರು ಹಿತಮಿತವಾಗಿ ಅಭ್ಯಾಸ ಮಾಡಬೇಕು.
  • ಊಟ ಮಾಡಿದ ನಂತರ ವ್ಯಾಯಾಮ ಮಾಡಬಾರದು (ಎರಡು ತಾಸು ಬಳಿಕ ಮಾಡಬಹುದು)
  • ಯೋಗ ಮತ್ತು ಧ್ಯಾನ ಹೃದಯದ ಆರೋಗ್ಯಕ್ಕೆ ಒಳ್ಳೆಯದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net