

ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯ ಮೇಲೆ ಕೇಂದ್ರ ಸರ್ಕಾರ ಐದು ವರ್ಷಗಳ ಕಾಲ ನಿಷೇಧ ಹೇರಿರುವುದು ಇಂದು ದೇಶದಲ್ಲೇ ದೊಡ್ಡ ಸುದ್ದಿ. ಪಿಎಫ್ಐ ಸಂಘಟನೆಯನ್ನು ಬ್ಯಾನ್ ಮಾಡಿರುವುದನ್ನು ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರು ಸೆಪ್ಟೆಂಬರ್ ಕ್ರಾಂತಿ ಎಂದು ಬಣ್ಣಿಸಿದ್ದಾರೆ.
ಪಿಎಫ್ಐ ನಿಷೇಧ ಕುರಿತು ಟ್ವೀಟ್ ಮಾಡಿರುವ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ ಅವರು ಭಗವಾನ್ ಕೃಷ್ಣನ ಮಾತನ್ನೂ ಉಲ್ಲೇಖಿಸಿದ್ದಾರೆ. 'ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ' (ಸಜ್ಜನರನ್ನು ರಕ್ಷಿಸಿ, ದುರ್ಜನರನ್ನು ಶಿಕ್ಷಿಸಲು) ಎಂಬ ಕೃಷ್ಣನ ಮಾತನ್ನು ಉಲ್ಲೇಖಿಸಿರುವ ಅವರು ಸರ್ಕಾರ ಕೂಡ ಅದನ್ನೇ ಮಾಡಿದೆ ಎಂಬುದನ್ನು ಹೇಳಿದ್ದಾರೆ.
ಜೊತೆಗೆ ಪಿಎಫ್ಐ ನಿಷೇಧವನ್ನು ಅವರು ಸೆಪ್ಟೆಂಬರ್ ಕ್ರಾಂತಿ ಎಂಬುದಾಗಿ ಬಣ್ಣಿಸಿದ್ದಾರೆ. ಏಕೆಂದರೆ ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿದ್ದ ಸಿಮಿ ಸಂಘಟನೆಯನ್ನೂ 2001ರ ಸೆ. 26ರಂದು ನಿಷೇಧಿಸಲಾಗಿತ್ತು. ಇದೀಗ ಪಿಎಫ್ಐಯನ್ನು ಕೂಡ ಸೆಪ್ಟೆಂಬರ್ನಲ್ಲೇ ನಿಷೇಧಿಸಲಾಗಿದೆ ಎಂಬುದನ್ನು ತಾರೀಕು ಸಹಿತ ಉಲ್ಲೇಖಿಸಿರುವ ಅವರು ಇದು ಸೆಪ್ಟೆಂಬರ್ ಕ್ರಾಂತಿ ಎಂಬುದಾಗಿ ಹೇಳಿದ್ದಾರೆ. ಅಲ್ಲದೆ ಜನಹಿತದ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ ಮತ್ತು ನಾವು ಕೇವಲ ಕಾನೂನುಬಾಹಿರ ಚಟುವಟಿಕೆಗಳಿಗಷ್ಟೇ ವಿರುದ್ಧ ಎಂಬುದಾಗಿ ಹೇಳಿಕೊಂಡಿದ್ದಾರೆ.
ಪಿಎಫ್ಐ ಬ್ಯಾನ್ ಕುರಿತು ಅಲೋಕ್ಕುಮಾರ್ ಅವರ ಈ ಪ್ರತಿಕ್ರಿಯೆ ಜನರಿಂದ ಬಹಳ ಮೆಚ್ಚುಗೆಗೆ ಪಾತ್ರವಾಗುತ್ತಿದ್ದು, ಈ ಟ್ವೀಟ್ ವೈರಲ್ ಆಗಲಾರಂಭಿಸಿದೆ. ಬಹಳಷ್ಟು ಮಂದಿ ಇದರ ಸ್ಕ್ರೀನ್ಶಾಟ್ ತೆಗೆದು ಹಂಚಿಕೊಂಡಿದ್ದು, ಕೃಷ್ಣನ ನುಡಿ, ಸರ್ಕಾರ ನಡೆ, ಅಲೋಕ್ ಪ್ರತಿಕ್ರಿಯೆ ಎಲ್ಲದರ ಬಗ್ಗೆಯೂ ಪ್ರಶಂಶೆ ವ್ಯಕ್ತಪಡಿಸುತ್ತಿದ್ದಾರೆ.