

ಸುಳ್ಯ: ಪ್ರಕೃತಿಯಲ್ಲಿ ಉಂಟಾಗುತ್ತಿರುವ ವಿಕೋಪಗಳನ್ನು ತಡೆಗಟ್ಟಬೇಕಾದರೆ ಗಿಡಗಳನ್ನು ನೆಟ್ಟು ಬೆಳೆಸಿ ಉಳಿಸುವ ಕಾರ್ಯದಲ್ಲಿ ಸಾರ್ವಜನಿಕರು ಅರಣ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು ಎಂದು ಸುಳ್ಯದ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಮೋಹನ್ ಬಾಬು ಹೇಳಿದರು.
ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಮತ್ತು ಅರಣ್ಯ ಇಲಾಖೆಯ ಸಹಯೋಗದಲ್ಲಿ ಬುಧವಾರ ಆಲೆಟ್ಟಿ ಗ್ರಾಮದ ಕೂಟೇಲು ಅರಣ್ಯ ಪ್ರದೇಶದಲ್ಲಿ ಆಚರಿಸಲಾದ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಟ್ಟು ಉದ್ಘಾಟಿಸಿ ಮಾತನಾಡಿದರು.
ವಲಯ ಅರಣ್ಯಾಧಿಕಾರಿ ಮಂಜುನಾಥ್ ಎನ್. ಮಾತನಾಡಿ, ವಿಶ್ವ ಪರಿಸರ ದಿನದಂದು ಆಲೆಟ್ಟಿ ಗ್ರಾಮ ವ್ಯಾಪ್ತಿಯಲ್ಲಿ ಸುಮಾರು 10 ಎಕರೆ ಪ್ರದೇಶದಲ್ಲಿ 1600 ಗಿಡಗಳನ್ನು ನೆಡುವ ದೊಡ್ಡಮಟ್ಟದ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.
ಸುಳ್ಯ ವಕೀಲರ ಸಂಘದ ಅಧ್ಯಕ್ಷ ನಾರಾಯಣ ಕೆ. ಅಧ್ಯಕ್ಷತೆ ವಹಿಸಿದ್ದರು. ಆಲೆಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೀಣಾವಸಂತ ಆಲೆಟ್ಟಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ, ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕರುಣಾಕರ ಹಾಸ್ಪಾರೆ, ಎ.ಸಿ.ಎಫ್ ಶಿವಾನಂದ, ವಕೀಲರಾದ ನಾರಾಯಣ ಎಂ, ಹರೀಶ್ ಬೂಡುಪನ್ನೆ ಉಪಸ್ಥಿತರಿದ್ದರು.