ಮೀಸಲು ಅರಣ್ಯದಲ್ಲಿ ಟೆಂಟ್ ಅಳವಡಿಸಿ ವಾಸ: ಅರಣ್ಯ ಅಧಿಕಾರಿಗಳಿಂದ ತೆರವು

Published on

ಕಡಬ: ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಮನೆ ನಿರ್ಮಿಸಿರುವುದಾಗಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಎರಡು ಟೆಂಟ್ ಗುಡಿಸಲು ಮನೆಯನ್ನು ಅರಣ್ಯಾಧಿಕಾರಿಗಳು ತೆರವುಗೊಳಿಸಿದ ಘಟನೆ ಕೊಂಬಾರು ಗ್ರಾಮದಲ್ಲಿ ನಡೆದಿದೆ.

ಕೊಂಬಾರು ಗ್ರಾಮದ ಬೊಟ್ಟಡ್ಕ ಎಂಬಲ್ಲಿ ಕಮಲ ಮತ್ತು ಪ್ರೇಮ ಎಂಬುವರ ಎರಡು ಬಡ ಕುಟುಂಬಗಳು ಟಾರ್ಪಾಲ್ ಹೊದಿಸಿರುವ ಪ್ರತ್ಯೇಕ ಟೆಂಟ್ ಮನೆ ನಿರ್ಮಿಸಿ ವಾಸವಾಗಿದ್ದರು. ಭಾನುವಾರ ಬಂದ ಅರಣ್ಯಾಧಿಕಾರಿಗಳು ಮೀಸಲು ಅರಣ್ಯದಲ್ಲಿ ಮನೆ ನಿರ್ಮಿಸಿರುವುದಾಗಿ ಸೂಚಿಸಿ ಮನೆ ತೆರವು ಮಾಡಿದ್ದಾರೆ.
ಗುಡಿಸಲಿನಲ್ಲಿ ವಾಸ ಇದ್ದ ಮಹಿಳೆಯರು ಮನೆಯ ಟರ್ಪಾಲು ಕಡಿದು ತೆಗೆಯುವ ಬದಲು ನಮ್ಮನ್ನು ಕಡಿದು ಸ್ಮಶಾನದಲ್ಲಿ ಹಾಕಿ, ನಿಮ್ಮಿಂದ ನಮ್ಮ ಪ್ರಾಣ ಹೋದರೂ ಸರಿ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಾರ್ಪಾಲ್ ಹೊದಿಕೆಯ ಗುಡಿಸಲಿನ ಮನೆಯೊಳಗೆ ತೊಟ್ಟಿಲಲ್ಲಿ ಮಗುವಿದೆ ಎಂದರೂ ಲೆಕ್ಕಿಸದೆ ಟರ್ಪಾಲು ತುಂಡರಿಸಲು ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಕಾನೂನು ಹೋರಾಟ

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಭೀಮ್ ಆರ್ಮಿ ಸಂಘಟನೆಯ ತಾಲೂಕು ಅಧ್ಯಕ್ಷ ರಾಘವ ಕಳಾರ ಯಾವುದೇ ನೋಟಿಸ್ ನೀಡದೆ ಮಹಿಳೆಯರು ಮಕ್ಕಳು ಇದ್ದರೂ ಕರುಣೆ ತೋರದೆ ಬಡ ಕುಟುಂಬದ ಮೇಲೆ ಅರಣ್ಯ ಇಲಾಖೆ ದರ್ಪ ತೋರಿದೆ ಎಂಬ ಆರೋಪಿಸಿ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಮೀಸಲು ಅರಣ್ಯದಲ್ಲಿ ಟೆಂಟ್ ಅಳವಡಿಕೆ

ಈ ಘಟನೆಯ ಬಗ್ಗೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್ ಬಾಬು ಅವರು ಪ್ರತಿಕ್ರಿಯೆ ನೀಡಿ ಮೀಸಲು ಅರಣ್ಯದಲ್ಲಿ ಟೆಂಟ್ ಅಳವಡಿಸಲಾಗಿತ್ತು. ತೆರವುಗೊಳಿಸಲು ಸೂಚಿಸಿದರೂ ಸ್ಪಂದಿಸದ ಹಿನ್ನೆಲೆ ಟೆಂಟ್ ತೆಗೆಯಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net