ಮನಸ್ಸಿನ ರೋಗಕ್ಕೆ ರಂಗಭೂಮಿಯೇ ಮದ್ದು

VV_Rangabhumi
Published on

ತುಮಕೂರು: ಮನುಷ್ಯನ ಮನಸ್ಸಿನ ರೋಗಕ್ಕೆ ರಂಗಭೂಮಿಯೇ ಮದ್ದು ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ ಕೆಂಕೆರೆ ಹೇಳಿರು.

ಕರ್ನಾಟಕ ನಾಟಕ ಅಕಾಡೆಮಿ ಹಾಗೂ ತುಮಕೂರು ವಿಶ್ವವಿದ್ಯಾಲಯ ಕಲಾ ಕಾಲೇಜಿನ ಸಹಯೋಗದೊಂದಿಗೆ ಗುರುವಾರ ಆಯೋಜಿದ್ದ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮನುಷ್ಯನನ್ನು ದೈಹಿಕವಾಗಿ ಬಾಧಿಸುವ ರೋಗಗಳಿಗೆ ವಿಭಿನ್ನ ರೀತಿಯ ಔಷಧಗಳಿವೆ, ಆದರೆ ಮನಸ್ಸಿನ ಕಾಯಿಲೆಗಳಿಗೆ ರಂಗಭೂಮಿ ಮೊದಲಾದ ಸಂಪ್ರಾದಾಯಿಕ ಕಲೆಗಳೇ ಔಷಧಗಳು ಎಂದರು.

ಇಂದಿನ ಯುವಜನತೆ ಮೊಬೈಲ್​ ದಾಸರಾಗಿದ್ದಾರೆ. ಅವರು ಮೊಬೈಲ್​ ಲೋಕದಿಂದ ಹೊರಬಂದು ಜಗತ್ತನ್ನು ನೋಡಲು ಕಲಿತರೆ ಅನೇಕ ಸಮಸ್ಯೆಗಳು ತಾವಾಗಿಯೇ ಪರಿಹಾರವಾಗುತ್ತವೆ. ಹಾಗಾಗಿ, ಮಕ್ಕಳನ್ನು ಕ್ರೀಯಾಶೀಲ ಚಟುವಟಿಕೆಗಳನ್ನು ತೊಡುಗುವಂತೆ ಮಾಡುವುದು ಪೋಷಕರ ಕರ್ತವ್ಯ ಎಂದು ತಿಳಿಸಿದರು.

ಕಳೆದ 40 ವರ್ಷಗಳಿಂದ ರಂಗಭೂಮಿ ಕಲೆಯ ಉಳಿವಿಗಾಗಿ ತನ್ನ ಕೈಲಾದ ಸೇವೆ ಮಾಡುತ್ತಿದ್ದೇನೆ. ಮನೆಯಲ್ಲಿಯೇ ಆಪ್ತರಂಗ ಮಂದಿರ ನಡೆಸಿಕೊಂಡು ಹೋಗುತ್ತಿದ್ದೇನೆ. ರಂಗಭೂಮಿಯನ್ನು ಉಳಿಸಿ ಬೆಳೆಸಲು ಪ್ರಜ್ಞಾವಂತ ಯುವ ಸಮುದಾಯ ಮುಂದೆ ಬರಬೇಕಿದ ಎಂದು ಹಿರಿಯ ರಂಗಭೂಮಿ ಕಲಾವಿದ ಹೆಚ್​.ಎಂ.ರಂಗಯ್ಯ ಹೇಳಿದರು.

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯೆ ಆರತಿ ಪಟ್ರಮೆ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸಮಾಜವು ಅನೇಕ ರೀತಿಯ ಒತ್ತಡ ಮತ್ತು ಸವಾಲುಗಳನ್ನು ಎದುರಿಸುತ್ತಿದೆ. ಸವಾಲುಗಳು ಇಲ್ಲದೇ ಯಾವ ಯುಗವೂ ಇಲ್ಲ. ಆದರೆ ಇವುಗಳಿಂದ ಹೊರಬರಲು ಮತ್ತು ಸಮಾಜದಲ್ಲಿ ಶಾಂತಿಯನ್ನು ಕಾಪಾಡಲು ಕಲೆಯ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು.

ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ, ಹಿರಿಯ ರಂಗಭೂಮಿ ಕಲಾವಿದರಾದ ಪಂಡಿತ್​ ಜವಾಹರ್​, ಎಸ್​. ಎ. ಖಾನ್​, ರಾಜ್ಯ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್​ ಮತ್ತಿತರರು ಉಪಸ್ಥಿತರಿದ್ದರು. ಕುಮಾರ್​ ಮತ್ತು ತಂಡವು ಜಾಗೃತಿ ಗೀತೆಗಳನ್ನು ಪ್ರಸ್ತುತಪಡಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net