

ನವದೆಹಲಿ: ಮುಂದಿನ ವಾರದಿಂದ ಭಾರತೀಯ ಮಾರುಕಟ್ಟೆಯಲ್ಲಿ ರಷ್ಯಾದ ಕರೊನಾ ಲಸಿಕೆ ಸ್ಪುಟ್ನಿಕ್ ವಿ ಲಭ್ಯವಿರಲಿದೆ ಎಂಬ ಮಾಹಿತಿ ತಿಳಿದುಬಂದಿದೆ. ಸ್ಪುಟ್ನಿಕ್ ಲಸಿಕೆಯನ್ನು ಗಾಮಲಯಾ ನ್ಯಾಷನಲ್ ಸೆಂಟರ್ ಆಫ್ ರಷ್ಯಾ ಅಭಿವೃದ್ಧಿಪಡಿಸಿದ್ದು, ದೇಶದಲ್ಲಿ ಬಳಸಲ್ಪಡುವ ಮೂರನೇ ಕರೊನಾ ಲಸಿಕೆಯಾಗಲಿದೆ.
ದೇಶಾದ್ಯಂತ ಮಾರುಕಟ್ಟೆಗಳಲ್ಲಿ ಮುಂದಿನ ವಾರದಿಂದ ಸ್ಪುಟ್ನಿಕ್ ಲಸಿಕೆ ಲಭ್ಯವಿರಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ಮಹತ್ವದ ಘೋಷಣೆ ಮಾಡಿದೆ. ರಷ್ಯಾದಿಂದ ಸುಮಾರು 150,000 ಡೋಸ್ ಸ್ಪುಟ್ನಿಕ್ ವಿ ಲಸಿಕೆ ಹೈದರಾಬಾದ್ ತಲುಪಿದ 12 ದಿನಗಳ ಬಳಿಕ ಕೇಂದ್ರ ಸರ್ಕಾರ ಈ ಘೋಷಣೆ ಮಾಡಿದೆ.
ಇಡೀ ದೇಶ ಕರೊನಾ ಕಪಿಮುಷ್ಠಿಯಲ್ಲಿ ಸಿಲುಕಿರುವಾಗ ಸ್ಪುಟ್ನಿಕ್ ಲಸಿಕೆ ಬಳಕೆ ಕೊಂಚ ನಿರಾಳ ತರುವ ಭರವಸೆ ಇದೆ. ಭಾರತದಲ್ಲಿ ಬಳಲಾಗುವ ಮೂರನೇ ಲಸಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈಗಾಗಲೇ ದೇಶದಲ್ಲಿ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಎಂಬ ದೇಶೀಯ ಲಸಿಕೆಯನ್ನು ಬಳಸಲಾಗುತ್ತಿದೆ.
ಲಸಿಕೆಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲ ಸ್ಪುಟ್ನಿಕ್ ಕರೊನಾ ಲಸಿಕೆ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಲಸಿಕೆಗೆ ದರ ನಿಗದಿ ಮಾಡಲಾಗಿದ್ದು, ಭಾರತೀಯ ಮಾರುಕಟ್ಟೆಗಳಲ್ಲಿ ಸ್ಪುಟ್ನಿಕ್ ಲಸಿಕೆ 750 ರೂಪಾಯಿಗೆ ದೊರೆಯಲಿದೆ.
ಕಳೆದ ತಿಂಗಳು ಇಂಡಿಯನ್ ರೆಗ್ಯುಲೇಟರಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಸ್ಪುಟ್ನಿಕ್ ವಿ ಲಸಿಕೆ ಬಳಕೆ ಅನುಮೋದನೆಯನ್ನು ನೀಡಿದೆ.
91.6 ಪ್ರತಿಶತದಷ್ಟು ಪರಿಣಾಮಕಾರಿತ್ವವನ್ನು ಹೊಂದಿರುವ ಕೋವಿಡ್ ವಿರುದ್ಧದ ವಿಶ್ವದ ಮೊದಲ ಲಸಿಕೆ ಸ್ಪುಟ್ನಿಕ್ ವಿ ಎಂದು ತಿಳಿದಿದೆ. ಲಾನ್ಸೆಟ್‌ನಲ್ಲಿ ಪ್ರಕಟವಾದ ಕ್ಲಿನಿಕಲ್ ಟ್ರಯಲ್ನಲ್ಲಿ ಲಸಿಕೆ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಕಂಡುಬಂದಿದೆ. (ಏಜೆನ್ಸೀಸ್)