ಬಿಗ್ ಸುಂದರಿಯರ ಬಗೆ ಬಗೆ ಮಾತು...: 72 ದಿನಗಳ ಕಿರು ಅನುಭವ

B B
Published on

ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಬಿಗ್​ಬಾಸ್ ರಿಯಾಲಿಟಿ ಶೋ ರದ್ದಾಗಿದೆ. ಸ್ಪರ್ಧಿಗಳೆಲ್ಲ ಅವರವರ ಮನೆ ಸೇರಿದ್ದಾರೆ. ಹೀಗಿರುವಾಗ ಮನೆಯಲ್ಲಿದ್ದುಕೊಂಡೇ ಮತ್ತೆ ಎಲ್ಲರಿಗೂ ಹತ್ತಿರವಾಗಿದ್ದಾರೆ. ಅಂದರೆ, ಸೋಷಿಯಲ್ ಮೀಡಿಯಾ ಮೂಲಕ ಸುದೀರ್ಘ 72 ದಿನದ ಅನುಭವಗಳನ್ನು ಹೇಳಿಕೊಂಡಿದ್ದಾರೆ.

‘ನಾನು ರಿಯಲ್ ಲೈಫ್​ನಲ್ಲಿ ತುಂಬ ಸಿಂಪಲ್. ಬಿಗ್​ಬಾಸ್​ನಲ್ಲೂ ಹಾಗೇ ಇದ್ದೆ..’ ಎನ್ನುವ ನಿಧಿ ಸುಬ್ಬಯ್ಯ, ಈಗಲೂ ಬಿಗ್​ಬಾಸ್​ನ ಬೆಳಗಿನ ಹಾಡು, ಅಲ್ಲಿನ ವಾತಾವರಣವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ. ‘ನಾನೀಗ ಮೈಸೂರಿನ ನಮ್ಮ ಮನೆಯಲ್ಲಿದ್ದೇನೆ. ಬಿಗ್​ಬಾಸ್​ನಿಂದ ಬಂದ ಮೇಲೆ ನಮ್ಮ ಮನೆ ತುಂಬ ಡಲ್ ಆಗಿ ಕಾಣುತ್ತಿದೆ. ಮಲಗಿದರೆ ಕನಸಲ್ಲೂ ಬಿಗ್​ಬಾಸ್ ಜಪಿಸುತ್ತಿದ್ದೇನೆ. ಕ್ಯಾಮರಾ ಇಲ್ಲ, ಸ್ನೇಹಿತರಿಲ್ಲ.. ಎಲ್ಲವೂ ಮಿಸ್ಸಿಂಗ್’ ಎನ್ನುತ್ತಾರವರು. ಇನ್ನು ಬಿಗ್​ಬಾಸ್​ಗೆ ಹೋಗಿದ್ದೇಕೆ ಎಂಬ ಪ್ರಶ್ನೆಗೆ, ‘ಕಳೆದ 10 ವರ್ಷಗಳಿಂದ ಸಿನಿಮಾದಲ್ಲಿ ನನ್ನನ್ನು ನೋಡಿದ್ದೀರಿ. ಅದಕ್ಕೆ ಎಲ್ಲರೂ ಕನೆಕ್ಟ್ ಸಹ ಆಗಿದ್ದೀರಿ. ನನ್ನ ನೈಜ ಜೀವನ ಹೇಗಿದೆ ಎಂಬುದನ್ನು ಎಲ್ಲರಿಗೂ ತಿಳಿಸುವ ಕುತೂಹಲ ಇತ್ತು ಅದಕ್ಕಾಗಿ ಬಿಗ್​ಬಾಸ್ ವೇದಿಕೆ ಆಯ್ದುಕೊಂಡೆ’ ಎಂಬುದು ಅವರ ಮಾತು.

ನಟಿ ದಿವ್ಯಾ ಉರುಡುಗ ಸಹ ಸಾಕಷ್ಟು ಮರೆಯದ ನೆನಪುಗಳನ್ನು ಬಿಗ್​ಬಾಸ್​ನಿಂದ ಹೊತ್ತು ತಂದಿದ್ದಾರೆ. ‘ಬಿಗ್​ಬಾಸ್ ಅಂದ ತಕ್ಷಣ ಮೊದಲಿಗೆ ಟ್ರೋಫಿ ನೆನಪಾಗುತ್ತದೆ. ಆದರೆ ಈ ಸಲ ಯಾರಿಗೂ ಟ್ರೊಫಿ ಸಿಗಲಿಲ್ಲ. ಆದರೆ, ಒಳ್ಳೊಳ್ಳೆ ಮನಸುಗಳು ನನಗೆ ಸಿಕ್ಕವು. ಜೀವನಪೂರ್ತಿ ಮರೆಯಲಾರದ ಅನುಭವವೂ ಸಿಕ್ಕಿದೆ. ಅದೆಲ್ಲದಕ್ಕಿಂತ ನಾಡಿನ ಜನರ ಮನಸ್ಸು ಗೆದ್ದಿದ್ದೇನೆ. ಅದೇ ನನಗೆ ಟ್ರೋಫಿ ಆಗಿರಲಿದೆ. ದುಡ್ಡು ಕೊಟ್ಟರೂ ಇಂಥ ಒಂದು ಅವಕಾಶ ಯಾರಿಗೂ ಸಿಗುವುದಿಲ್ಲ. ಐ ಆಮ್ ಲಕ್ಕಿ’ ಎಂದು ಸಂಭ್ರಮಿಸುತ್ತಾರೆ ದಿವ್ಯಾ.

ಮನೆಯಲ್ಲಿ ಸದಾ ನಗುತ್ತಲೇ, ಅಲ್ಲಿನವರ ಮತ್ತು ವೀಕ್ಷಕರ ಮನಸ್ಸಿಗೆ ಹತ್ತಿರವಾದವರು ವೈಷ್ಣವಿ ಗೌಡ. ‘ನಾನು ಯಾವಾಗಲೂ ಸಂತೋಷದಿಂದ ಇರಲು ಬಯಸುತ್ತೇನೆ. ಕೋಪ ನನ್ನ ಹಿಡಿತದಲ್ಲಿಯೇ ಇರುತ್ತದೆ. ಭಾವನೆಗಳನ್ನು ನಾನೇ ವ್ಯಕ್ತಪಡಿಸುವುದರಿಂದ ಸದಾ ನಗುಮೊಗದಲ್ಲಿಯೇ ಎದುರಾಗುತ್ತೇನೆ. ಇದೆಲ್ಲವನ್ನು ಹಂಚಲೆಂದೇ ನಾನು ಬಿಗ್​ಬಾಸ್ ಶೋಗೆ ಬಂದೆ. ಆ ಕೆಲಸವನ್ನು ಅಷ್ಟೇ ಖುಷಿಯಿಂದ ಮಾಡಿದ್ದೇನೆಂದು ಇದೀಗ ಹೊರಬಂದ ಮೇಲೆ ಗೊತ್ತಾಗುತ್ತಿದೆ’ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net