ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ

21HDK01
Published on

ಎಚ್.ಡಿ.ಕೋಟೆ: ಮೈಸೂರು ಭಾಗದಲ್ಲಿ ಬಿಜೆಪಿಗೆ ಕೆ.ಎಂ.ಕೃಷ್ಣನಾಯಕ ಒಂದು ಶಕ್ತಿ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.


ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ನೇಮಕಾತಿ ಆದೇಶಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಮ್ಮ ಪಕ್ಷಕ್ಕೆ ಸೇರ್ಪಡೆಗೊಂಡ ಕೃಷ್ಣನಾಯಕರು ಕೇವಲ ಹದಿನೈದು ದಿನಗಳಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿ, 50 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು ಪಕ್ಷ ಗಟ್ಟಿಯಾಗಿ ನೆಲೆಯೂರಲು ಕಾರಣರಾಗಿದ್ದಾರೆ. ಚುನಾವಣೆಯಲ್ಲಿ ಪರಾಭವಗೊಂಡರೂ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಇವರಿಂದ ಮೈಸೂರು ಭಾಗದಲ್ಲಿ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂದರು.


ಕೃಷ್ಣನಾಯಕರ ಸೇವೆ ಒಂದು ಭಾಗಕ್ಕೆ ಸೀಮಿತ ಅಲ್ಲ. ರಾಜ್ಯಾದ್ಯಂತ ಸೇವೆ ಬಳಸಿಕೊಳ್ಳುವ ಉದ್ದೇಶದಿಂದ ಪಕ್ಷ ಅವರನ್ನು ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದೆ. ರಾಜ್ಯವನ್ನು ಸುತ್ತಿ ಪಕ್ಷ ಸಂಘಟನೆ ಮಾಡುವುದರ ಜತೆಗೆ, ಸಮಾಜ ಕಟ್ಟುವ ಕೆಲಸವನ್ನೂ ಮಾಡಬೇಕು. ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.


ನೇಮಕಾತಿ ಆದೇಶಪತ್ರ ಪಡೆದು ಮಾತನಾಡಿದ ಕೆ.ಎಂ.ಕೃಷ್ಣನಾಯಕ, ಪಕ್ಷದಲ್ಲಿ ಹಿರಿಯ ನಾಯಕರಿದ್ದರೂ ನನ್ನನ್ನು ಗುರುತಿಸಿ ಜವಾಬ್ದಾರಿ ನೀಡಲಾಗಿದೆ. ಅದನ್ನು ದುರುಪಯೋಗ ಮಾಡಿಕೊಳ್ಳದೆ, ಪಕ್ಷ ಸಂಘಟನೆ ಮಾಡಲು ಬಳಸಿಕೊಳ್ಳುತ್ತೇನೆ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸಾರಥ್ಯದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ಹೆಮ್ಮೆ ಎನಿಸಿದೆ ಎಂದರು.


ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಹತ್ತು ವರ್ಷಗಳಿಂದ ನಿರಂತರವಾಗಿ ಜನಸೇವೆ ಮಾಡುತ್ತ ಬಂದಿದ್ದೇನೆ. ನನಗೆ ರಾಜಕಾರಣಕ್ಕೆ ಬರುವ ಉದ್ದೇಶವಿರಲಿಲ್ಲ. ಕ್ಷೇತ್ರದ ಜನರ ಒತ್ತಾಯಕ್ಕೆ ಮಣಿದು ರಾಜಕಾರಣ ಪ್ರವೇಶಿಸಿದ್ದೇನೆ ಎಂದು ತಿಳಿಸಿದರು.


ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್, ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪ್ರೀತಂ ಜೆ.ಗೌಡ, ಮಾಜಿ ಶಾಸಕ ಪಿ.ರಾಜೀವ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net