

ಶಿಕಾರಿಪುರ: ಸಂಘಟನೆ ಸದೃಢವಾಗಿದ್ದರೆ ಮಾತ್ರ ನಾವು ಬಲಗೊಳ್ಳಲು ಸಾಧ್ಯ. ಹಾಗಾಗಿ ನೂತನ ಅಧ್ಯಕ್ಷರು ಎಲ್ಲ ಪದಾಧಿಕಾರಿಗಳ ಸಹಕಾರ, ಸಲಹೆ ಪಡೆದು ಸಮಾಜವನ್ನು ಸಂಘಟನೆ ಮಾಡಬೇಕು ಎಂದು ಶಿವಮೊಗ್ಗ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಎಂ.ಜಿ.ಬಾಲು ಹೇಳಿದರು.
ಪಟ್ಟಣದ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ ಸಮುದಾಯ ಭವನದಲ್ಲಿ ಆಯೋಜಿಸಿದ್ದ ತಾಲೂಕು ಸವಿತಾ ಸಮಾಜದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಲ್ಲಾ ಸಮಾಜ ಉತ್ತಮವಾಗಿ ಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲಿ ಎರಡು ಸಮಾವೇಶಗಳನ್ನು ಯಶಸ್ವಿಯಾಗಿ ನಡೆಸಿರುವುದೇ ಇದಕ್ಕೆ ಸಾಕ್ಷಿ ಎಂದರು.
ಪ್ರಸ್ತುತ ಸಮಾಜದ ಸಂಘಟನೆಗೆ ಶ್ರಮಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ವೈಯಕ್ತಿಕ ಜೀವನದ ಜತೆಗೆ ಸಮಾಜದ ಕಡೆಗೂ ಗಮನ ಹರಿಸಬೇಕು. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಇರುವವರು ಸಹ ಸಂಘಟನೆಯತ್ತ ಗಮನ ಕೊಡಬೇಕು ಎಂದು ತಿಳಿಸಿದರು.
ಜಿಲ್ಲಾ ಸವಿತಾ ಸಮಾಜಕ್ಕೆ ಎಜುಕೇಷನ್ ಟ್ರಸ್ಟ್ ರಚನೆ ಮಾಡುವ ಉದ್ದೇಶವಿದೆ. ಇದಕ್ಕಾಗಿ ನಿವೇಶನ ಖರೀದಿಸಬೇಕಿದೆ. ಜಿಲ್ಲಾ ಸಮಾಜಕ್ಕೆ ಸದಸ್ಯತ್ವ ನೋಂದಣಿ ಮಾಡುವ ಪ್ರಕ್ರಿಯೆ ನಡೆಸುತ್ತಿದ್ದು, ಇದಕ್ಕೆ ಎಲ್ಲ ಸದಸ್ಯರ ಸಹಕಾರ ಅಗತ್ಯ. ಸರ್ಕಾರಿ ಸೌಲಭ್ಯ ಪಡೆಯುವಲ್ಲಿ ಹಿಂದೇಟು ಹಾಕುತ್ತಿದ್ದೇವೆ. ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಸವಿತಾ ಸಮಾಜದ ನೂತನ ಅಧ್ಯಕ್ಷ ಸತ್ಯನಾರಾಯಣ ಮಾತನಾಡಿ, ಎಲ್ಲ ಸದಸ್ಯರ ಸಹಕಾರದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ನೂತನ ಪದಾಧಿಕಾರಿಗಳು: ತಾಲೂಕು ಸವಿತಾ ಸಮಾಜ ಅಧ್ಯಕ್ಷರಾಗಿ ಸತ್ಯನಾರಾಯಣ, ಯುವಕ ಸಂಘದ ಅಧ್ಯಕ್ಷರಾಗಿ ವಿ.ಗೋಪಿ ಸರ್ವಾನುಮತದಿಂದ ಆಯ್ಕೆಯಾದರು. ಸಂಜೀವ (ಉಪಾಧ್ಯಕ್ಷ), ಜಿ.ಎನ್.ಉಮೇಶ್ (ಕಾರ್ಯದರ್ಶಿ), ಭೀಮಣ್ಣ, ಗೋಪಾಲ, ಕೃಷ್ಣಪ್ಪ (ಕಾರ್ಯಕಾರಿ ಸಮಿತಿ ಸದಸ್ಯರು), ಆರ್.ಈಶ್ವರಪ್ಪ, ಡಿ.ಆರ್.ಶ್ರೀನಿವಾಸ್ (ಸಲಹೆಗಾರರು), ಯುವಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮನೋಜ್, ಅನಿಲ್, ಅಭಿಲಾಷ್, ವೀರೇಶ್, ಧನಂಜಯ್ ಆಯ್ಕೆಯಾದರು.
ಜಿಲ್ಲಾ ಉಪಾಧ್ಯಕ್ಷ ಪರಮೇಶ್, ನಿಕಟಪೂರ್ವ ತಾಲೂಕು ಅಧ್ಯಕ್ಷ ಟಿ.ಕೃಷ್ಣಪ್ಪ, ಸವಿತಾ ಯುವಕ ಸಂಘದ ನಿಕಟಪೂರ್ವ ಅಧ್ಯಕ್ಷ ಎಸ್.ಮಧುಕುಮಾರ್, ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವಿ.ರಾಮಣ್ಣ, ಸವಿತಾ ಸಹಕಾರ ಸಂಘದ ಅಧ್ಯಕ್ಷ ಟಿ.ವೀರಭದ್ರಪ್ಪ, ಶಿರಾಳಕೊಪ್ಪ ಪಪಂ ಸದಸ್ಯ ಗಣೇಶ್ ಭಂಡಾರಿ, ಸಿ.ಎಸ್.ಜಯರಾಜ್, ಎಸ್.ಪರಮೇಶ್, ಬಿ.ಸುಂದರ್ ರಾಜ್ ಇತರರಿದ್ದರು.