

ಸಾಗರ: ಹೆಣ್ಣುಮಕ್ಕಳು ರಕ್ತದಾನ ಮಾಡುವುದರಿಂದ ಹಿಂದೆ ಸರಿಯಬಾರದು. ಮಹಿಳೆ ಎಲ್ಲ ಕ್ಷೇತ್ರದಲ್ಲೂ ಮುಂದಿದ್ದು ರಕ್ತದಾನ ಮಾಡುವಲ್ಲಿಯೂ ಮುಂದೆ ಬರಬೇಕು ಎಂದು ರೋಟರಿ ರಕ್ತನಿಧಿ ಕೇಂದ್ರದ ಗೌರವಾಧ್ಯಕ್ಷೆ ಡಾ. ರಾಜನಂದಿನಿ ಕಾಗೋಡು ಹೇಳಿದರು.
ತಾಲೂಕಿನ ಹೆಗ್ಗೋಡು-ಹೊನ್ನೆಸರದ ಶ್ರಮಜೀವಿ ಆಶ್ರಮದಲ್ಲಿ ಬಹುಮುಖಿ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ನಮ್ಮ ಆರೋಗ್ಯ ನಮ್ಮ ಕೈನಲ್ಲಿ ವಿಷಯ ಕುರಿತು ಉಪನ್ಯಾಸ ನೀಡಿದರು.
ಅಂಕಿ ಅಂಶದ ಪ್ರಕಾರ ಶೇ.35ರಷ್ಟು ಮಹಿಳೆಯರು ಮಾತ್ರ ರಕ್ತದಾನ ಮಾಡುತ್ತಿದ್ದಾರೆ. ಆದರೆ ತುರ್ತು ಸಂದರ್ಭಗಳಲ್ಲಿ ಹೆಚ್ಚಾಗಿ ಮಹಿಳೆಯರಿಗೆ ರಕ್ತ ನೀಡಲಾಗುತ್ತದೆ. ಪುರುಷರು ಮಾತ್ರ ರಕ್ತದಾನಕ್ಕೆ ಅರ್ಹರು ಎಂಬ ಭಾವನೆ ಸಲ್ಲದು. ಪುರುಷರಷ್ಟೇ ಮಹಿಳೆಯರೂ ದೈಹಿಕವಾಗಿ ಸಬಲರಿದ್ದು ರಕ್ತದಾನ ಮಾಡಬಹುದು ಎಂದು ತಿಳಿಸಿದರು.
ರಕ್ತದಾನ ಮಾಡುವುದರಿಂದ ನಮ್ಮಲ್ಲಿ ಮತ್ತಷ್ಟು ರಕ್ತ ಉತ್ಪಾದನೆ ಆಗುತ್ತದೆ. ಮುಖ್ಯವಾಗಿ ದೈಹಿಕ, ಮಾನಸಿಕ ಆರೋಗ್ಯದಲ್ಲಿ ಉತ್ತಮ ಬದಲಾವಣೆ ಆಗುತ್ತದೆ. ಹಾಗಾಗಿ ಹೆಣ್ಣು ಮಕ್ಕಳು ಧೈರ್ಯವಾಗಿ ರಕ್ತದಾನ ಮಾಡಬೇಕು ಎಂದು ಸಲಹೆ ನೀಡಿದರು.
ಹಿಮೋಗ್ಲೊಬಿನ್ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ರಕ್ತಹೀನತೆ ಮತ್ತಿತರ ಸಮಸ್ಯೆಗಳನ್ನು ಅರಿಯಲು ಸಾಧ್ಯವಾಗುತ್ತದೆ. ಬಹಳಷ್ಟು ಹೆಣ್ಣುಮಕ್ಕಳಲ್ಲಿ ಹಿಮೋಗ್ಲೊಬಿನ್‌ನಲ್ಲಿ ಕಬ್ಬಿಣಾಂಶ ಕಡಿಮೆ ಇರುವುದು ಪತ್ತೆಯಾಗಿದೆ. ಆಹಾರದಲ್ಲಿ ಕಬ್ಬಿಣಾಂಶ ಇರುವ ನುಗ್ಗೆಸೊಪ್ಪು ಸೇರಿ ತರಕಾರಿಗಳನ್ನು ಸೇವಿಸಿದರೆ ಸಮಸ್ಯೆಯಿಂದ ಹೊರಗೆ ಬರಬಹುದು. ಋತುಮಾನಕ್ಕೆ ತಕ್ಕಂತೆ ಹಣ್ಣುಗಳನ್ನು ಸೇವಿಸಬೇಕು. ಬೆಳಗ್ಗೆ ಎದ್ದ ತಕ್ಷಣ ಬೆಚ್ಚಗಿನ ನೀರು ಸೇವನೆ ಮತ್ತು ನಾರಿನಾಂಶದ ಆಹಾರ ತೆಗೆದುಕೊಳ್ಳಬೇಕು ಎಂದರು.
ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷೆ ಮಹಾಲಕ್ಷ್ಮೀ, ಟೆರೆನ್ಸ್ ಪೀಟರ್, ನಿಖಿತಾ, ರಮೇಶ್, ನಾಗರತ್ನಾ, ಕೃಷ್ಣ, ಪದ್ಮಶ್ರೀ, ಮಧುರಾ, ಎಂ.ವಿ.ಪ್ರತಿಭಾ ಇತರರಿದ್ದರು.