

ನವದೆಹಲಿ: ವಿಪತ್ತು ನಿರ್ವಹಣೆಯಲ್ಲಿ ಪರಿಣತರಾದ 100ಕ್ಕೂ ಹೆಚ್ಚು ಮಹಿಳೆಯರು ನ್ಯಾಷನಲ್ ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸ್ (ಎನ್ಡಿಆರ್ಎಫ್)ಗೆ ಸೇರ್ಪಡೆಯಾಗುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಇದೇ ಮೊದಲ ಬಾರಿಗೆ ವಿಪತ್ತು ನಿರ್ವಹಣಾ ತಂಡದಲ್ಲಿ ಮಹಿಳಾ ಯೋಧರ ಸೇರ್ಪಡೆಯಾಗಿದ್ದು, ಎನ್ಡಿಆರ್ಎಫ್ಗೆ ಸ್ತ್ರೀ ಶಕ್ತಿಯ ಬಲ ಸಿಕ್ಕಂತಾಗಿದೆ.
ಇತ್ತೀಚೆಗೆ ಹೊಸದಾಗಿ ನೇಮಕವಾಗಿದ್ದ ಮಹಿಳೆಯರ ತಂಡವನ್ನು ಉತ್ತರ ಪ್ರದೇಶ ಗಢಮುಕ್ತೇಶ್ವರ ಪಟ್ಟಣದ ಗಂಗಾ ನದಿ ತಟದಲ್ಲಿ ಕರ್ತವ್ಯ ನಿರ್ವಹಣೆಗಾಗಿ ನಿಯೋಜಿಸಲಾಗಿತ್ತು. ರಕ್ಷಣಾ ಬೋಟ್ ಮತ್ತು ಸಂಬಂಧಿತ ಉಪಕರಣಗಳನ್ನು ಸಮರ್ಪಕವಾಗಿ ಬಳಸುವ ಮೂಲಕ ತಮ್ಮ ಕರ್ತವ್ಯವನ್ನು ಆ ತಂಡದ ಸದಸ್ಯರು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದು ಎನ್ಡಿಆರ್ಎಫ್ ಮಹಾ ನಿರ್ದೇಶಕ ಎಸ್.ಎನ್. ಪ್ರಧಾನ್ ತಿಳಿಸಿದ್ದಾರೆ.
ಎನ್ಡಿಆರ್ಎಫ್ ಆರಂಭವಾದಾಗಿನಿಂದ ಇಂದಿನ ತನಕವೂ ಪುರುಷರೇ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಕೆಲವು ತಿಂಗಳ ಅವಧಿಯಲ್ಲಿ 100ಕ್ಕೂ ಹೆಚ್ಚು ಪರಿಣತ ಮಹಿಳೆಯರ ಸೇರ್ಪಡೆಯಾಗಿದ್ದಾರೆ. ಸದ್ಯದಲ್ಲೇ ಮಹಿಳೆಯರ ಸಂಖ್ಯೆ 200ಕ್ಕೂ ಹೆಚ್ಚಾಗಲಿದೆ. ಸದ್ಯ ಮಹಿಳಾ ಪರಿಣತರನ್ನು ಕಾನ್ಸ್ಟೆಬಲ್ ಮತ್ತು ಸಬ್ ಇನ್ಸ್ಪೆಕ್ಟರ್, ಇನ್ಸ್ಪೆಕ್ಟರ್ ದರ್ಜೆಯ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಎನ್ಡಿಆರ್ಎಫ್ ಬೆಟಾಲಿಯನ್ನಲ್ಲಿರುವ 1,000 ಸಿಬ್ಬಂದಿ ಪೈಕಿ 108 ಮಹಿಳೆಯರು ಇರಲಿದ್ದಾರೆ. ಪ್ರಸ್ತುತ ದೇಶಾದ್ಯಂತ ಎನ್ಡಿಆರ್ಎಫ್ನ 12 ಬೆಟಾಲಿಯನ್ಗಳು ವಿವಿಧ ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿವೆ.