ಮದುವೆ ಹೆಸರಲ್ಲಿ ಆಭರಣ-ಹಣ ದೋಚುತ್ತಿದ್ದ ಮಹಿಳಾ ಪ್ರಧಾನ ಗ್ಯಾಂಗ್ ಪತ್ತೆ

womengang
Published on

ಪುಣೆ: ಮದುವೆ ವಯಸ್ಸು ಮೀರಿದ ಗಂಡಸರನ್ನು ಪತ್ತೆ ಹಚ್ಚಿ ಸುಳ್ಳು ಮದುವೆ ಆಟ ಆಡಿ ಆಭರಣ ಮತ್ತು ಹಣ ದೋಚುತ್ತಿದ್ದ ಮಹಿಳಾ ಪ್ರಧಾನ ಗ್ಯಾಂಗ್ ಒಂದನ್ನು ಪುಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧವಾಗಿ ಒಂಭತ್ತು ಮಹಿಳೆಯರು ಮತ್ತು ಇಬ್ಬರು ಗಂಡಸರನ್ನು ಬಂಧಿಸಲಾಗಿದೆ.

ಇತ್ತೀಚೆಗೆ ಪುಣೆ ಗ್ರಾಮಾಂತರ ಜಿಲ್ಲಾ ಪೊಲೀಸರಿಗೆ ಮಾವಳ್ ನಿವಾಸಿ ಯುವಕನೊಬ್ಬ ತಾನು ವಾರದ ಹಿಂದೆ ಮದುವೆಯಾಗಬೇಕಿದ್ದ ಸೊನಾಲಿ ಜಾಧವ್ ತಮ್ಮ ಮನೆಯಿಂದ 2.4 ಲಕ್ಷ ರೂಪಾಯಿ ಹಣ ಕದ್ದು ಓಡಿಹೋಗಿರುವುದಾಗಿ ದೂರು ಸಲ್ಲಿಸಿದ. ತನಿಖೆ ನಡೆಸಿದಾಗ ಸೋನಾಲಿ ಎಂಬ ಹೆಸರಲ್ಲಿ ಮದುವೆ ಹೆಣ್ಣಾಗಿ ಕಾಣಿಸಿಕೊಂಡಿದ್ದ 27 ವರ್ಷದ ವಿದ್ಯಾ ಖಂಡಲೆಗೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿರುವುದು ತಿಳಿದುಬಂತು. ಅವಳನ್ನು ಬಂಧಿಸಿದ ಪೊಲೀಸರಿಗೆ ಈ ರೀತಿಯಾಗಿ ಸುಳ್ಳು ಮದುವೆ ಆಟ ಆಡಿ ಹಣ ದೋಚುತ್ತಿದ್ದ ಗ್ಯಾಂಗ್ ನಡೆಸುತ್ತಿರುವುದು ಪತ್ತೆಯಾಯಿತು.

ಗ್ಯಾಂಗ್​ನ ನಾಯಕಿಯಾದ ಜ್ಯೋತಿ ಪಾಟೀಲ್(35), ಮದುವೆಯ ವಯಸ್ಸು ಮೀರಿದ ಗಂಡುಗಳನ್ನು ಹುಡುಕಿ ಅವರಿಗೆ ಬಡ ಕುಟುಂಬದ ಹೆಣ್ಣು ಮಕ್ಕಳು ಮದುವೆಗೆ ಸಿದ್ಧವಾಗಿದ್ದಾರೆ ಎಂದು ಹೇಳುತ್ತಿದ್ದಳು. ಎರಡರಿಂದ ಮೂರು ಲಕ್ಷ ರೂಪಾಯಿ ಹಣವನ್ನು ಹೆಣ್ಣಿನ ಮನೆಯವರ ಮದುವೆ ಖರ್ಚಿಗಾಗಿ ಮತ್ತು ಹೆಣ್ಣಿನ ಆಭರಣಕ್ಕಾಗಿ ಪಡೆಯುತ್ತಿದ್ದರು. ಮತ್ತೆ ಮದುವೆಗೆ ಮುಂಚೆ ಅದನ್ನೆಲ್ಲಾ ದೋಚಿಕೊಂಡು ಕಣ್ಮರೆಯಾಗುತ್ತಿದ್ದರು. ಇಲ್ಲವೇ ಮದುವೆ ಆಗಿ ಗಂಡಿನೊಂದಿಗೆ ಸ್ವಲ್ಪ ದಿನ ವಾಸಿಸುತ್ತಿದ್ದ ನವವಧು ನಂತರ ಆಭರಣ ಮತ್ತು ಹಣದೊಂದಿಗೆ ಮಾಯವಾಗುತ್ತಿದ್ದಳು ಎನ್ನಲಾಗಿದೆ.

ವಘೋಲಿ ನಿವಾಸಿ ಜ್ಯೋತಿ ಪಾಟೀಲ್ ಮತ್ತು ವಿದ್ಯಾಖಂಡಲೆಯೊಂದಿಗೆ, ಮಹಾನಂದ ಕಸಳೆ(39), ರೂಪಾಲಿ ಬನ್ಪಟ್ಟೆ(37), ಕಲಾವತಿ ಬನ್ಪಟ್ಟೆ (25), ಸಾರಿಕಾ ಗಿರಿ (33), ಸ್ವಾತಿ ಸಬಳೆ(24) , ಮೋನಾ ಸಾಲುಂಕೆ(28) ಮತ್ತು ಪಾಯಲ್ ಸಬಳೆ(28) ಎಂಬ ಮಹಿಳೆಯರನ್ನು ಮತ್ತು ಇವರಿಗೆ ಸಹಾಯಕರಾಗಿದ್ದ ಇಬ್ಬರು ಗಂಡಸರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಈವರೆಗೆ ಐದು ಗಂಡಸರನ್ನು ಹೀಗೆ ದೋಚಿರುವುದಾಗಿ ಈ ಗುಂಪು ಒಪ್ಪಿಕೊಂಡಿದೆ. ಇನ್ನೂ ಹೆಚ್ಚು ಪ್ರಕರಣಗಳು ನಡೆದಿವೆ ಎಂಬ ಅನುಮಾನದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net