

ಉತ್ತರಪ್ರದೇಶ: ಅಯೋಧ್ಯೆಯ ಪವಿತ್ರ ಕೊಳದಲ್ಲಿ ಮಹಿಳೆಯೊಬ್ಬರು ಡ್ಯಾನ್ಸ್ ಮಾಡಿದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ವೈರಲ್ ವಿಡಿಯೋಗೆ ಇದೀಗ ಪೊಲೀಸರು ಪ್ರತಿಕ್ರಿಯಿಸಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸರಯೂ ನದಿಯ ದಡದಲ್ಲಿರುವ ರಾಮ್ ಕಿ ಪೈಡಿ ಘಾಟ್ನಲ್ಲಿ ಮಹಿಳೆಯು ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸದ್ಯ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಭಕ್ತರು ಪವಿತ್ರ ಸ್ನಾನಕ್ಕಾಗಿ ಭೇಟಿ ನೀಡುವ ಸ್ಥಳದಲ್ಲಿ ಮಹಿಳೆ ಡ್ಯಾನ್ಸ್ ರೀಲ್ಸ್ ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಮೋಜಿಗಾಗಿ ಅಪ್ಲೋಡ್ ಮಾಡಿದ್ದಾರೆ.
ಮಹಿಳೆ ಬಾಲಿವುಡ್ ಚಿತ್ರದ ಹಾಡಿಗೆ ನೃತ್ಯ ಮಾಡಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ವಿಡಿಯೋ ಭಾರೀ ವೈರಲ್ ಆದ ಬೆನ್ನಲ್ಲೇ ಅಯೋಧ್ಯೆ ಪೊಲೀಸರು ಪ್ರತಿಕ್ರಿಯಿಸಿದ್ದು, ಮಹಿಳೆಯ ವಿರುದ್ಧ ಅಗತ್ಯ ಕ್ರಮ ಮತ್ತು ತನಿಖೆ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.
ಈ ವರ್ಷದ ಆರಂಭದಲ್ಲಿ, ಅಯೋಧ್ಯೆಯ ಸರಯು ನದಿ ಘಾಟ್ನಿಂದ ಇದೇ ರೀತಿಯ ಘಟನೆಯೊಂದು ವರದಿಯಾಗಿತ್ತು. 'ಪಾನಿ ಮೇ ಆಗ್ ಲಗಾನಿ ಹೈ' ಹಾಡಿಗೆ ಹುಡುಗಿಯೊಬ್ಬಳು ಡ್ಯಾನ್ಸ್ ಮಾಡಿದ್ದ ವಿಡಿಯೋಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಇದನ್ನು ಗಮನಿಸಿದ ಪೊಲೀಸರು ಈ ವಿಷಯವನ್ನು ತಿಳಿದು, ಧಾರ್ಮಿಕ ಮತ್ತು ಪೂಜಾ ಸ್ಥಳಗಳಲ್ಲಿ ಅನುಚಿತವಾದ ರೀಲ್ಗಳನ್ನು ಮಾಡುವುದು ಸ್ವೀಕಾರಾರ್ಹವಲ್ಲ ಎಂದು ಸಾರ್ವಜನಿಕರಿಗೆ ಎಚ್ಚರಿಸಿದ್ದರು,(ಏಜೆನ್ಸೀಸ್).