ಹಾವು ಕಚ್ಚಿ ಮೃತಪಟ್ಟ ಮಹಿಳೆಯ ಸಾವಿನ ಸುತ್ತ ಅನುಮಾನದ ಹುತ್ತ: ಚಿನ್ನಾಭರಣವೂ ನಾಪತ್ತೆ!

Uttara snake bite death case 21 MAY 20
Published on

ಅಂಚಾಲ್​ (ಕೊಲ್ಲಂ): ಪತಿಯ ಮನೆಯಲ್ಲಿ ಹಾವು ಕಡಿದ ಕಾರಣ ಚಿಕಿತ್ಸೆ ಪಡೆದು ಅಮ್ಮನ ಮನೆಗೆ ಬಂದಿದ್ದ ಮಹಿಳೆಗೆ ಅಲ್ಲೂ ಹಾವು ಕಡಿದ ಕಾರಣ ಮೇ 7ರಂದು ಮೃತಪಟ್ಟ ವಿಚಾರ ಸುದ್ದಿಯಾಗಿತ್ತು. ಇಷ್ಟಾಗಿ ಕೆಲವೇ ದಿನಗಳ ಬಳಿಕ ಈ ಸಾವಿನ ಸುತ್ತ ಅನುಮಾನದ ಹುತ್ತ ಎದ್ದಿದೆ. ಅಂಚಾಲ್​​ ಗ್ರಾಮೀಣ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ಈರಂ ನಿವಾಸಿ ಉತ್ತರಾ (25) ಮೇ 7ರಂದು ಹಾವು ಕಡಿತಕ್ಕೆ ಒಳಗಾಗಿ ಮೃತಪಟ್ಟ ಮಹಿಳೆ. ಈಕೆಯ ತಂದೆ ವಿಜಯಸೇನನ್​ ಮತ್ತು ತಾಯಿ ಮಣಿಮೇಘಲಾ ಈ ಸಾವಿನ ಕುರಿತು ಸಂದೇಹ ವ್ಯಕ್ತಪಡಿಸಿ ದೂರು ದಾಖಲಿಸಿದವರು.

ಈರಂನ ತವರುಮನೆಯಲ್ಲಿ ಉತ್ತರಾ ಇದ್ದ ಬೆಡ್​ರೂಮ್​ ಹವಾನಿಯಂತ್ರಿತವಾಗಿತ್ತು. ನೆಲ ಟೈಲ್ಸ್ ಹಾಕಿದ್ದಾಗಿತ್ತು. ರಾತ್ರಿ ಆಕೆ ಮಲಗುವ ಮುನ್ನ ಕಿಟಕಿ ಎಲ್ಲವೂ ಮುಚ್ಚಿತ್ತು. ಆದರೆ ಅದನ್ನು ಆಕೆಯ ಪತಿಯೇ ತೆರೆದಿಟ್ಟಿದ್ದರು. ಇದು ಸಂದೇಹಕ್ಕೆ ಕಾರಣವಾಗಿದೆ. ಹಾವಿನ ಕಡಿತದ ಗಾಯ ಉತ್ತರಾಳ ಎಡಗೈ ಮೇಲಾಗಿತ್ತು. ಅಲ್ಲದೆ, ಬೆಡ್​ರೂಮಿನಲ್ಲಿ ಬೆಳಗ್ಗೆ ಆಕೆಯ ಬಳಿ ಹಾವನ್ನು ಮೊದಲು ಕಂಡದ್ದು ಪತಿಯೇ. ಇದು ಕೂಡ ಸಂದೇಹವನ್ನು ಇನ್ನಷ್ಟು ಬಲಗೊಳಿಸುತ್ತದೆ.

ಇದಕ್ಕೂ ಮುನ್ನ ಪತಿಯ ಮನೆಯಲ್ಲಿ ಇರುವಾಗಲೇ ಉತ್ತರಾಗೆ ಹಾವು ಕಡಿದಿತ್ತು. ಅದೃಷ್ಟವಶಾತ್ ಚಿಕಿತ್ಸೆ ಬಳಿಕ ಆಕೆ ಬದುಕಿ ಉಳಿದಿದ್ದಳು. ಈಗ ಆಕೆ ಮೃತಪಟ್ಟ ಬೆನ್ನಲ್ಲೇ ವರದಕ್ಷಿಣೆ ರೂಪದಲ್ಲಿ ನೀಡಿದ್ದ ಚಿನ್ನಾಭರಣಗಳು ಕಾಣುತ್ತಿಲ್ಲ. ಅದನ್ನು ಕೇಳಿದಾಗ ಪತಿ ಏನೂ ಉತ್ತರಿಸುತ್ತಿಲ್ಲ ಎಂಬ ಆರೋಪವನ್ನು ಉತ್ತರಾಳ ತಂದೆ, ತಾಯಿ ದೂರಿನಲ್ಲಿ ದಾಖಲಿಸಿದ್ದಾರೆ.

ಎರಡೆರಡು ಹಾವು ಕಡಿತಕ್ಕೆ ಒಳಗಾಗಿ ಸಾವನ್ನಪ್ಪಿದ ಪ್ರಕರಣ ಮೊದಲೇ ಕುತೂಹಲ ಕೆರಳಿಸಿದ್ದರೂ, ಈಗ ಇದಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಪತಿಯ ಮೇಲೆ ಎಲ್ಲರ ಸಂದೇಹ ದೃಷ್ಟಿ ನೆಟ್ಟಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net