ಗಂಡನನ್ನು ಬಿಟ್ಟು ಬಂದ ಮಹಿಳೆಯ ಜೀವನ ಪ್ರಿಯಕರನೊಂದಿಗೆ ಅಂತ್ಯ! ಈಕೆಯ ಕೆಟ್ಟ ನಿರ್ಧಾರದಿಂದ ತಬ್ಬಲಿಯಾದ ಇಬ್ಬರು ಮಕ್ಕಳು

ಆತ್ಮಹತ್ಯೆ
Published on

ಹೊಸಕೋಟೆ: ಗಂಡನನ್ನು ಬಿಟ್ಟು ಓಡಿ ಬಂದಿದ್ದ ಮಹಿಳೆ ಜೀವನದಲ್ಲಿ ಬೇಸತ್ತು ಪ್ರಿಯಕರನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸುರಯ್ಯ ರಾಜು (28) ಮತ್ತು ಮೆಹಬೂಬ್ (35)ಮೃತ ದುರ್ದೈವಿಗಳು. ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕೊರಳೂರು ಗ್ರಾಮದಲ್ಲಿ ನಡೆದಿದೆ.

ಮೂಲತಃ ಧಾರವಾಡ ಮೂಲದ ಸುರಯ್ಯ ನಾಲ್ಕು ತಿಂಗಳ ಹಿಂದೆ ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ಓಡಿ ಬಂದಿದ್ದಳು. ಈ ವೇಳೆ ಗಂಡನ ಮನೆಯವರು ಧಾರವಾಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ಇಬ್ಬರನ್ನ ಠಾಣೆಗೆ ಕರೆಸಲಾಗಿತ್ತು. ಈ ವೇಳೆ ಸುರಯ್ಯ ನಾನು ಮೆಹಬೂಬ್ ಜೊತೆಯೇ ಇರುತ್ತೇನೆಂದು ಹೇಳಿದ್ದಳು. ಬಳಿಕ ಗಂಡನನ್ನು ಬಿಟ್ಟು ತನ್ನಿಬ್ಬರು ಮಕ್ಖಳನ್ನು ಕರೆದುಕೊಂಡು ಬಂದು ಪ್ರಿಯಕರನೊಂದಿಗೆ ಕೊರಳೂರಿನ ಬಾಡಿಗೆ ಮನೆಯಲ್ಲಿದ್ದುಕೊಂಡು ಗಾರೆ ಕೆಲಸ ಮಾಡುತ್ತಾ ವಾಸವಾಗಿದ್ದಳು. ಆದರೆ ಆರ್ಥಿಕ ಸಂಕಷ್ಟ ಇವರನ್ನು ಚಿಂತೆಗೆ ದೂಡಿತ್ತು. ಇದೀಗ ಮನನೊಂದು ಇವರಿಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸುರಯ್ಯ ಹಾಗೂ ಮೆಹಬೂಬ್ ಮನೆಯಲ್ಲಿದ್ದ ಮಕ್ಕಳನ್ನು ಮನೆಯಿಂದ ಹೊರಗೆ ಹೋಗುವಂತೆ ಹೇಳಿದ್ದಾರೆ. ಮಾತನ್ನು ನಂಬಿ ಮಕ್ಕಳು ಹೊರ ಹೋಗುತ್ತಿದ್ದಂತೆ ಇಬ್ಬರು ಸೇರಿಕೊಂಡು ಸೀರೆಯಿಂದ ನೇಣು ಬಿಗಿದುಕೊಂಡಿದ್ದಾರೆ. ಸದ್ಯ ಇವರಿಬ್ಬರ ದುರಂತ ಅಂತ್ಯದಿಂದ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ಸ್ಥಳಕ್ಕೆ ತಿರುಮಲಶೆಟ್ಟಿಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net