

ಪ್ರಸ್ತುತ ಸ್ಮಾರ್ಟ್ಫೋನ್ ಯುಗದಲ್ಲಿ ಎಲ್ಲವೂ ಈಗ ಅತ್ಯಂತ ಸರಳ, ವೇಗ. ಅದರಲ್ಲೂ ಆಧುನಿಕ ತಂತ್ರಜ್ಞಾನದ ಚಮತ್ಕಾರದಿಂದ ಆನ್ಲೈನ್ ಶಾಪಿಂಗ್ಗಳ ಭರಾಟೆ ಕೂಡ ಜೋರಾಗಿದೆ. ವಿಶೇಷವಾಗಿ ಯುವಜನತೆ ಇಂತಹ ಶಾಪಿಂಗ್ ಆ್ಯಪ್ಗಳ ಮೊರೆ ಹೋಗಿದ್ದು, ತಮಗಿಷ್ಟವಾದ ವಸ್ತುಗಳನ್ನು ಕುಳಿತ ಜಾಗಕ್ಕೆ ಬುಕ್ ಮಾಡಿ, ತರಿಸಿಕೊಳ್ಳುತ್ತಾರೆ. ಇದು ಅವರ ಆನಂದವನ್ನು ಮಾತ್ರ ಹೆಚ್ಚಿಸುವುದಲ್ಲದೇ, ಆರ್ಡರ್ ಮಾಡಿದ ಐಟಂ ಬರುವ ತನಕ ಉತ್ಸಾಹದ ಚಿಲುಮೆ ಉಳಿದಿರುವಂತೆ ಮಾಡುತ್ತದೆ. ಆದರೆ, ಕೆಲವೊಮ್ಮೆ ಆರ್ಡರ್ ಮಾಡಿದ ವಸ್ತು ಬದಲಿಗೆ ಯಾವುದೋ ಸಂಬಂಧವಿಲ್ಲದ ವಸ್ತುಗಳು ಡೆಲಿವರಿ ಆಗಿರುತ್ತದೆ. ಇದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗುತ್ತೆ. ಇಂತಹದ್ದೇ ಘಟನೆಯೊಂದು ಇದೀಗ ಬೆಳಕಿಗೆ ಬಂದಿದ್ದು, ಮಹಿಳೆ ಪಡೆದ ಬಾಕ್ಸ್ನಲ್ಲಿ (Amazon Parcel) ವಸ್ತು ಅದಲು-ಬದಲು ಅನ್ನೋದಕ್ಕಿಂತ ವಾಂತಿ ತರಿಸುವಂತ ಕೆಟ್ಟ ದೃಶ್ಯವೊಂದು ಕಂಡುಬಂದಿರುವುದು ಸದ್ಯ ನೆಟ್ಟಿಗರನ್ನು ಅಚ್ಚರಿಗೆ ದೂಡಿದೆ.
ಸೈಕಲ್ಗೆ ಒಂದೊಳ್ಳೆ ಚೆಂದ ಹೆಲ್ಮೆಟ್ ಆರ್ಡರ್ ಮಾಡೋಣ ಎಂದು ಬುಕ್ ಮಾಡಿದ್ದ ರೇಚಲ್ ಮ್ಯಾಕ್ ಆಡಮ್ಸ್ ಎಂಬ ಮಹಿಳೆ, ಎಲ್ಲರಂತೆ ತಾನು ಕೂಡ ವಸ್ತುವಿನ ಡೆಲಿವರಿಗೆ ಕಾತರದಿಂದ ಕಾಯುತ್ತಿದ್ದರು. ಇದೇ ವೇಳೆ ಮನೆಯ ಬಾಗಿಲಿಗೆ ಬಂದ ಡೆಲಿವರಿಯನ್ನು ಒಳಗೆ ತಂದ ಆಕೆ, ಬಹಳ ಉತ್ಸಾಹದಿಂದ ಬಾಕ್ಸ್ ತೆರೆದಿದ್ದಾಳೆ. ಈ ವೇಳೆ ಒಳಗಿನಿಂದ ಕೆಟ್ಟ ವಾಸನೆ ಬಂದಿದೆ, ಇನ್ನೇನು ಅದರೊಳಗೆ ಏನಿದೆ ಎಂಬುದನ್ನು ನೋಡುವಷ್ಟರಲ್ಲಿಯೇ ಕೇವಲ ದರ್ವಾಸನೆಗೆ ಮಹಿಳೆ ವಾಂತಿ ಮಾಡಿಕೊಂಡಿದ್ದಾಳೆ.
ಅಸಲಿಗೆ ಬಾಕ್ಸ್ನಲ್ಲಿ ಏನೋ ಕೊಳೆತ ವಸ್ತುವಿರಬೇಕು ಅಥವಾ ಏನೋ ಸತ್ತಿರಬೇಕು ಎಂದು ಮಹಿಳೆ ಅನುಮಾನ ವ್ಯಕ್ತಪಡಿಸಿದ್ದಾರೆ, ವಾಂತಿ ಮಾಡಿಕೊಂಡ ನಂತರ ಧೈರ್ಯ ಮಾಡಿ, ಅದರೊಳಗೆ ಏನಿದೆ ಎಂದು ಇಣುಕಿ ನೋಡಿದ ಆಕೆಗೆ ಕಂಡಿದ್ದು, ಬ್ರೆಡ್ ಚೂರುಗಳು, ಇಲಿ ಹಿಕ್ಕೆಗಳು ಮತ್ತು ಅರ್ಧ ಕೊಳೆತ ಇಲಿ ದೇಹ. ತಕ್ಷಣವೇ ಈ ಘಟನೆ ಬಗ್ಗೆ ಅಮೆಜಾನ್ ಸಂಸ್ಥೆಗೆ ದೂರು ನೀಡಿದ್ದಾರೆ.
ದೂರಿನಲ್ಲಿ ರೇಚಲ್, "ನಾನು ಮೂರ್ಛೆ ಹೋದೆ ಎಂದೇ ಭಾವಿಸಿದೆ. ಬಾಕ್ಸ್ ನೋಡ್ತಿದ್ದಂತೆ ನಾನೇನು ಮುಟ್ಟಲಿಲ್ಲ. ಆ ಕೆಟ್ಟ ದೃಶ್ಯ ಕಂಡು ರಾತ್ರಿ ನನ್ನ ಹೊಟ್ಟೆಗೆ ಊಟ ಸೇರಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಗ್ರಾಹಕಿಗೆ ಕ್ಷಮೆಯಾಚಿಸಿದ ಸಂಸ್ಥೆ, ಮತ್ತೊಮ್ಮೆ ಈ ರೀತಿಯ ತಪ್ಪುಗಳು ನಮ್ಮಿಂದ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ,(ಏಜೆನ್ಸೀಸ್).