ನಾನು ಆಂಬ್ಯುಲೆನ್ಸ್ ನಲ್ಲಿ ಬಂದಿಲ್ಲ - ಕಾಂಗ್ರೆಸ್ ನಾಯಕರಿಗೆ ತಿರುಗೇಟುಕೊಟ್ಟ ಎಚ್ಡಿಡಿ

5bb08347-934b-4a58-9c7e-7cea6321eb26-1.jpg
Published on

**

ರಾಮನಗರ: ತಮ್ಮ ಆರೋಗ್ಯ ಹಾಗೂ ನಿಖಿಲ್ ಅವರ ಕಣ್ಣೀರಿನ ಬಗ್ಗೆ ಲಘುವಾಗಿ ಮಾತನಾಡಿರುವ ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು; ಕಟುಕರಿಗೆ ಕಣ್ಣೀರು ಬರುವುದಿಲ್ಲ, ಹೃದಯವಿರುವ ಭಾವುಕ ಜೀವಿಗಳಿಗೆ ಮಾತ್ರ ಕಣ್ಣೀರು ಬರುತ್ತದೆ ಎಂದರು.

ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ವಿರೂಪಾಕ್ಷಪುರ, ಕೊಡಂಬಹಳ್ಳಿ ಗ್ರಾಮಗಳಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಪ್ರಚಾರ ಭಾಷಣ ಮಾಡಿದ ಅವರು; ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಾನು ಆಂಬುಲೆನ್ಸ್ ನಲ್ಲಿ ಬಂದಿಲ್ಲ

ನನ್ನ ಆರೋಗ್ಯ ಚೆನ್ನಾಗಿದೆ. ನಾನು ಆಂಬುಲೆನ್ಸ್ ನಲ್ಲಿ ಬಂದಿಲ್ಲ, ವ್ಹೀಲ್ ಚೇರ್ ಮೇಲೆ ಬಂದಿಲ್ಲ. ನಾನು ನಿಮ್ಮೆಲ್ಲರ ಆಶೀರ್ವಾದದಿಂದ ಚೆನ್ನಾಗಿದ್ದೇನೆ. ಆರೋಗ್ಯವಾಗಿದ್ದೇನೆ. ಅದನ್ನು ತೋರಿಸಲು ಇಲ್ಲಿಗೆ ಬಂದಿದ್ದೇನೆ. ನೀವೇ ನನ್ನನ್ನು ನೋಡುತ್ತಿದ್ದೀರಿ, ಹೇಗೆ ಇದ್ದೇನೆ ಎಂದು ಗಮನಿಸುತ್ತಿದ್ದೀರಿ ಅಲ್ಲವೇ? ಎಂದು ಮಾಜಿ ಪ್ರಧಾನಿ ಹೇಳಿದರು.

ಕಾಂಗ್ರೆಸ್‌ ನಾಯಕರು ನನ್ನ ಹೊರಗಿನವರು ಎನ್ನುತ್ತಿದ್ದಾರೆ. ನಾನು ಅವರಿಗೆ ಹೊರಗಿನವನು ಎಂದು ಈಗ ಅನ್ನಿಸುತ್ತಿದೆ. ಆದರೆ, ನಾನು ಈ ತಾಲ್ಲೂಕಿಗೆ ಶಾಶ್ವತ ನೀರಾವರಿ ಒದಗಿಸಲು ಇಗ್ಗಳೂರು ಬ್ಯಾರೇಜ್ ಕಟ್ಟಿಸಿದಾಗ ಹಾಗೆಂದು ಅನಿಸಲಿಲ್ಲವೇ? ರಾಜಕೀಯಕ್ಕಾಗಿ ಕಾಂಗ್ರೆಸ್ ನಾಯಕರು ಜನರಿಗೆ ಬರೀ ಸುಳ್ಳನ್ನೇ ಹೇಳುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ನನಗೆ ಮಂಡಿ ನೋವು, ನಿಂತುಕೊಂಡು ಮಾತಾಡೋಕೆ ಆಗಲ್ಲ. ನನಗೀಗ 92 ವರ್ಷ, ಎಸ್.ಎಂ.ಕೃಷ್ಣ ಮತ್ತು ನಾನು ಒಂದೇ ವಯಸ್ಸಿನವರು. ಆದರೆ ನಾವು ಈಗಲೂ ಕೆಲಸ ಮಾಡುತ್ತಿದ್ದೇವೆ. ದೇಹಕ್ಕೆ ವಯಸ್ಸಾಗುತ್ತದೆ, ಇಚ್ಛಾಶಕ್ತಿಗೆ ಅಲ್ಲ ಎಂದು ಮಾಜಿ ಪ್ರಧಾನಿಗಳು ಹೇಳಿದರು.

ನಿಮ್ಮ ಆಶೀರ್ವಾದ ಇದ್ದರೆ ನೂರು ವರ್ಷ ಬದುಕುತ್ತೇನೆ

ನನಗೆ ನಿಮ್ಮ ಆಶೀರ್ವಾದ ಇದೆ. ನಾನು ಶತಾಯು ಆಗುತ್ತೇನೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಬದುಕಿರುತ್ತೇನೆ ಎನ್ನುವ ಭರವಸೆ ಹೊಂದಿದ್ದೇನೆ. ದೇವರ, ನಿಮ್ಮೆಲ್ಲರ ಆಶೀರ್ವಾದ ಇದ್ದರೆ ನೂರು ವರ್ಷ ಬದುಕುತ್ತೇನೆ. ಆದರೆ, ಕಾಂಗ್ರೆಸ್ ನಾಯಕರಿಗೆ ನನ್ನ ಆರೋಗ್ಯದ ಬಗ್ಗೆಯೇ ಚಿಂತೆಯಾಗಿದೆ ಎಂದು ಮಾಜಿ ಪ್ರಧಾನಿಗಳು ಅತೀವ ನೋವು ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net