VIDEO| ನೋಡು ನೋಡುತ್ತಿದ್ದಂತೆ ಎಲ್ಲರ ಕಣ್ಮುಂದೆ ಕೊಚ್ಚಿ ಹೋದ ಮಹಿಳೆ

flood
Published on

ಹೈದರಾಬಾದ್: ನೋಡು ನೋಡುತ್ತಿದ್ದಂತೆ ಎಲ್ಲರ ಕಣ್ಮುಂದೆಯೇ ಮಹಿಳೆಯೊಬ್ಬಳು ಕೊಚ್ಚಿ ಹೋಗಿರುವ ಘಟನೆ ತೆಲಂಗಾಣದ ಕೊತಗುಡೆಂನಲ್ಲಿ ನಡೆದಿದೆ.

56 ವರ್ಷದ ಮಹಿಳೆ ಕುಂಜ ಸಾವಿತ್ರಿ ಎಂಬಾಕೆ ಭತ್ತದ ನಾಟಿ ಕೆಲಸ ಮುಗಿಸಿ ಕೃಷಿ ಕಾರ್ಮಿಕರ ಗುಂಪಿನೊಂದಿಗೆ ಮನೆಗೆ ಮರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕೊತಗುಡೆಂ ಬಳಿ ಸೇತುವೆಯೊಂದು ಮುಳುಗಿದ್ದು, ನೀರು ರಭಸವಾಗಿ ಹರಿಯುತ್ತಿತ್ತು.

ಈ ವೇಳೆ ಕಾರ್ಮಿಕರ ಗುಂಪೊಂದು ಪರಸ್ಪರ ಕೈಹಿಡಿದುಕೊಂಡು ಒಂದು ದಡದಿಂದ ಇನ್ನೊಂದು ದಡಕ್ಕೆ ಹೊರಟಿತ್ತು. ಈ ವೇಳೆ ಮಹಿಳೆಯು ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾಳೆ. ಸ್ಥಳೀಯರು ಮಹಿಳೆಯ ರಕ್ಷಣೆಗೆ ಧಾವಿಸಿದ್ದು, ಮಹಿಳೆಯ ಹುಡುಕಾಟ ಇನ್ನೂ ಮುಂದುವರೆದಿದೆ.


ನೆರೆಯ ರಾಜ್ಯವಾದ ತೆಲಂಗಾಣದಲ್ಲಿ ಜುಲೈ 25 ರಿಂದ 27ರವರೆಗೆ ರೆಡ್ ಅಲರ್ಟ್ ಘೋಷಿಸಿದ್ದು, ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದೆ. ಅಲ್ಲದೇ, ರಾಜ್ಯದ ಅತಿ ಎತ್ತರದ ಜಲಪಾತವಾದ ಮುತ್ಯಾಲಧಾರವನ್ನು ವೀಕ್ಷಿಸಲು ತೆರಳಿದ್ದ ಮುಲುಗು ಜಿಲ್ಲೆಯ ಆಳವಾದ ಅರಣ್ಯ ಪ್ರದೇಶದಲ್ಲಿ ಕನಿಷ್ಠ 42 ಪ್ರವಾಸಿಗರು ಸಿಕ್ಕಿಬಿದ್ದಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net