

ಮೆಕ್ಸಿಕೋ: ಮನುಷ್ಯ ಇದ್ದಂತೇ ಇರುವುದಿಲ್ಲ. ದೈಹಿಕವಾಗಿ ಪ್ರತಿ ವ್ಯಕ್ತಿಯೂ ಬದಲಾಗುತ್ತಲೇ ಇರುತ್ತಾನೆ. ಅದೇ ರೀತಿಯಾದ ದೈಹಿಕ ಬದಲಾವಣೆಯಿಂದಾಗಿ ಹೆಂಡತಿಯೊಬ್ಬಳು ಗಂಡನನ್ನೇ ಕೊಲೆ ಮಾಡಲು ಹೊರಟ ವಿಚಿತ್ರ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.
ಅದು ಸುಖ ಸಂಸಾರವಾಗಿತ್ತು. ಅವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಅದೊಂದು ದಿನ ಹೆಂಡತಿ ಗಂಡನ ಫೋನ್ ನೋಡುವಾಗ ಗಂಡ ಯಾರೋ ಬೇರೆ ಹುಡುಗಿಯೊಂದಿಗಿರುವ ಪೋಟೋ ನೋಡಿದ್ದಾಳೆ. ಇದರಿಂದ ಸಿಟ್ಟಾದ ಹೆಂಡತಿ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಗಂಡನನ್ನು ಕೊಲೆ ಮಾಡಲು ಮುಂದಾಗಿದ್ದಾಳೆ. ನನ್ನ ಬಿಟ್ಟು ಬೇರೆ ಹುಡುಗಿಯ ಜತೆ ತಿರುಗಾಡುವ ನೀನು ಬದುಕಬೇಡ ಎಂದು ರೇಗಾಡಿದ್ದಾಳೆ.
ಹೆಂಡತಿಯ ಚಾಕು ದಾಳಿಯಿಂದ ತಪ್ಪಿಸಿಕೊಂಡ ಗಂಡ, ಸಾಕಷ್ಟು ಕಷ್ಟ ಪಟ್ಟು ಆಕೆಯನ್ನು ಸಮಾಧಾನ ಮಾಡಿದ್ದಾನೆ. ಆಮೇಲೆ ತನ್ನ ಮೊಬೈಲ್ ತೆಗೆದು ಫೋಟೋಗಳನ್ನು ಸರಿಯಾಗಿ ತೋರಿಸಲಾರಂಭಿಸಿದ್ದಾನೆ. ಸರಿಯಾಗಿ ನೆನಪಿಸಿಕೋ, ಇದು ನಾನು ನೀನು ಪ್ರೀತಿ ಮಾಡುವ ಸಮಯದಲ್ಲಿ ತೆಗೆಸಿಕೊಂಡ ಫೋಟೋಗಳು ಎಂದು ನೆನಪಿಸಿದ್ದಾನೆ. ಆಗ ಹೆಂಡತಿ ಫೋಟೋದಲ್ಲಿರುವುದು ತಾನೆ ಎಂದು ಅರಿತು ಶಾಕ್ ಆಗಿದ್ದಾಳೆ.
ಮದುವೆಗೆ ಮುಂಚೆ ಆಕೆ ಸಾಕಷ್ಟು ತೆಳ್ಳಗಿದ್ದಳಂತೆ. ಆದರೆ ಮದುವೆಯಾದ ಮೇಲೆ ವಿಪರೀತ ದಪ್ಪ ಆದ ಕಾರಣ ಆಕೆಗೆ ತನ್ನ ಹಳೆಯ ಫೋಟೋಗಳ ಗುರುತು ಸಿಕ್ಕಿಲ್ಲ. ಅದೂ ಅಲ್ಲದೆ ಹಳೆಯ ಫೋಟೋಗಳನ್ನು ಡಿಜಿಟಲ್ ಟಚ್ಅಪ್ ಕೊಟ್ಟು ಎಡಿಟಿಂಗ್ ಮಾಡಿದ್ದ ಗಂಡನಿಂದಾಗಿ ಈ ಎಡವಟ್ಟು ಸಂಭವಿಸಿದೆ. (ಏಜೆನ್ಸೀಸ್)