ನಡುರಸ್ತೆಯಲ್ಲೇ ಕರ್ತವ್ಯನಿರತ ಪೊಲೀಸ್​ ಸಿಬ್ಬಂದಿ ಕೆನ್ನೆಗೆ ಬಾರಿಸಿದ ಯುವತಿ: ಕಠಿಣ ಕ್ರಮಕ್ಕೆ ಆಗ್ರಹ

Delhi Woman
Published on

ನವದೆಹಲಿ: ಯುವತಿಯೊಬ್ಬಳು ಕರ್ತವ್ಯ ನಿರತ ಪೊಲೀಸ್​ ಸಿಬ್ಬಂದಿಯೊಬ್ಬರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಯುವತಿಯ ವಿರುದ್ಧ ಕ್ರಮ ಜರುಗಿಸುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.

ಕರ್ತವ್ಯನಿರತ ಪೊಲೀಸ್​ ಸಿಬ್ಬಂದಿ ಮೇಲೆ ಹಲ್ಲೆ ಮಾಡುವುದು ಕಾನೂನಿಗೆ ವಿರುದ್ಧವಾಗಿದೆ. ಯಾರೇ ಆಗಲಿ ಇಂತಹ ಕೃತ್ಯ ಎಸಗಿದರೆ ಅಂಥವರನ್ನು ತಕ್ಷಣ ಬಂಧನ ಮಾಡಬಹುದು. ಇದರ ಅರಿವು ಇದ್ದರೂ ಆಗಾಗ ಇಂತಹ ಕೃತ್ಯಗಳನ್ನು ಎಸೆಯುತ್ತಿರುವುದು ವಿಪರ್ಯಾಸ. ಏನೇ ವಿವಾದವಿದ್ದರೂ ಅದನ್ನು ಕಾನೂನಿನ ಮೂಲಕ ಬಗೆಹರಿಸುವ ಪ್ರಯತ್ನ ಮಾಡಬೇಕು. ಅದನ್ನು ಬಿಟ್ಟು ಕೈ ಮಾಡುವ ಕೃತ್ಯಕ್ಕೆ ಕೈಹಾಕಬಾರದು.

ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಹಳದಿ ಟೀ ಶರ್ಟ್​ ಮತ್ತು ಜೀನ್ಸ್​ ಪ್ಯಾಂಟ್​ ಧರಿಸಿರುವ ಯುವತಿ ರಸ್ತೆಯ ಮಧ್ಯೆಯೇ ಕಾರು ನಿಲ್ಲಿಸಿ, ಕರ್ತವ್ಯ ನಿರತ ಪೊಲೀಸ್​ ಸಿಬ್ಬಂದಿ ಮೇಲೆ ಕೈ ಮಾಡಿದ್ದಾರೆ. ಅಲ್ಲದೆ, ಅಶ್ಲೀಲ ಪದಗಳಿಂದ ನಿಂದಿಸಿ ಮತ್ತೆ ಕಾರು ಏರಿ ಅಲ್ಲಿಂದ ಹೊರಟ್ಟಿದ್ದಾರೆ. ಈ ದೃಶ್ಯವನ್ನು ದಾರಿಹೋಕರೊಬ್ಬರು ಮೊಬೈಲ್​ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ವಿಡಿಯೋ ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಯುವತಿಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಆಕೆಯ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.

ಇಂತಹ ಘಟನೆ ಇದೇ ಮೊದಲೇನಲ್ಲ ಕಳೆದ ಮೇ ತಿಂಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಇದೇ ರೀತಿಯ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್​ ಆಗಿತ್ತು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಹಿಳೆಯೊಬ್ಬರು ಪೊಲೀಸ್ ಅಧಿಕಾರಿಗೆ ಹೊಡೆಯುತ್ತಿರುವ ದೃಶ್ಯ ವಿಡಿಯೋದಲ್ಲಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಫೈನಲ್ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳು ಬಂದಿದ್ದಾಗ ಈ ಘಟನೆ ನಡೆದಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net