VIDEO| ಮನೆ ಕೆಲಸಕ್ಕಿದ್ದ ಅಪ್ರಾಪ್ತ ವಯಸ್ಕಳಿಗೆ ಚಿತ್ರ ಹಿಂಸೆ ಪ್ರಕರಣ; ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

Women Pilot
Published on

ನವದೆಹಲಿ: ಮನೆ ಕೆಲಸಕ್ಕಿದ್ದ ಅಪ್ರಾಪ್ತ ವಯಸ್ಕಳಿಗೆ ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ಸ್ಥಳಿಯರಿಂದ ಥಳಿತಕ್ಕೊಳಗಾಗಿದ್ದ ಮಹಿಳಾ ಪೈಲಟ್​ ಹಾಗೂ ಆಕೆಯ ಪತಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಬಂಧಿತ ಆರೋಪಿಗಳನ್ನು ಪೂರ್ಣಿಮಾ ಬಾಗ್ಚಿ (33) ಹಾಗು ಆಕೆಯ ಪತಿ ಕೌಶಿಕ್ ಬಾಗ್ಚಿ (36) ಎಂದು ಗುರುತಿಸಲಾಗಿದೆ. ಬಂಧಿತರನ್ನು ಪೊಲೀಸರು ಸ್ಥಳೀಯರಿಂದ ರಕ್ಷಿಸಿ ಚಿಕಿತ್ಸೆ ಕೊಡಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಬಂಧಿತ ಅರೋಪಿಗಳಿಬ್ಬರು ವಿಮಾನಯಾನ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಈ ಪೈಕಿ ಮಹಿಳೆ ಪೈಲಟ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಕೆಯ ಪತಿ ಗ್ರೌಂಡ್​ ಸ್ಟ್ಯಾಫ್​ ಆಗಿ ಕೆಲಸ ಮಾಡುತ್ತಿದ್ದು, ಇಬ್ಬರನ್ನು ಸಹ ಘಟನೆ ನಡೆದ ಬಳಿಕ ಅವರು ಕೆಲಸ ಮಾಡುತ್ತಿರುವ ಸಂಸ್ಥೆಯಿಂದ ವಜಾ ಮಾಡಲಾಗಿದೆ.

ಯಾವ ಕಾರಣಕ್ಕಾಗಿ ಆಕೆಯ ಮೇಲೆ ನಿರಂತರವಾಗಿ ಹಲ್ಲೆ ನಡೆಸಲಾಯಿತು ಮತ್ತು ಯಾರ ಸಹಾಯದಿಂದ ಅಪ್ರಾಪ್ತ ವಯಸ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗಿತ್ತು ಎಂಬುದರ ಕುರಿತು ವಿಚಾರಿಸಲಾಗುತ್ತಿದೆ. ಸಂತ್ರಸ್ತೆ ಮೈಮೇಲೆ ಗಾಯ ಹಾಗೂ ಸುಟ್ಟ ಕಲೆಗಳು ಪತ್ತೆಯಾಗಿದ್ದು, ಒಂದು ವೇಳೆ ಉದ್ದೇಶಪೂರ್ವಕವಾಗಿ ಮಾಡಿದ್ದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net