

ಭೋಪಾಲ್: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಮೆರವಣಿಗೆ ವೇಳೆ ಉದ್ದೇಶಪೂರ್ವಕವಾಗಿ ಶಾಂತಿ ಸೌಹಾರ್ದತೆಗೆ ಧಕ್ಕೆ ತಂದ ಆರೋಪದ ಮೇಲೆ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಮೂವರ ಮನೆಯನ್ನು ಜಿಲ್ಲಾಡಳಿತದ ನೇತೃತ್ವದಲ್ಲಿ ಹೊಡೆದು ಹಾಕಲಾಗಿದೆ.
ಸೋಮವಾರ ಉಜ್ಜಯಿನಿಯಲ್ಲಿ ನಡೆದ ಮಹಾಕಾಲ್ ಕಿ ಸವಾರಿ ಮೆರವಣಿಗೆ ವೇಳೆ ಮುಸ್ಲಿಂ ಸಮುದಾಯಕ್ಕೆ ಸೇರಿದ ಮೂವರು ಉದ್ದೇಶಪೂರ್ವಕವಾಗಿ ತಮ್ಮ ಮನೆಯ ಟೆರೇಸ್ ಮೇಲಿಂದ ಭಕ್ತಾದಿಗಳ ಮೇಲೆ ಉಗುಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ವಿಡಿಯೋ ವೈರಲ್ ಆದ ಬೆನ್ನಲ್ಲೇ ,ಮುಂಜಾಗ್ರತ ಕ್ರಮವಾಗಿ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಈ ಪೈಕಿ ಓರ್ವ ಅಪ್ರಾಪ್ತ ವಯಸ್ಕನಾಗಿದ್ದಾನೆ. ಬಂಧಿತರ ಮೆನಯನ್ನು ಕೆಡವಿರುವ ಮಧ್ಯಪ್ರದೇಶ ಸರ್ಕಾರ ಡಿಜೆ ಹಾಗೂ ಡ್ರಮ್ಸ್ಗಳ ಸದ್ದಿನೊಂದಿಗೆ ಕಾರ್ಯಾಚರಣೆ ನಡೆಸುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಉಜ್ಜಯಿನಿ ಜಿಲ್ಲಾ ಪೊಲೀಸ್ ಉಪ ವರಿಷ್ಠಾಧಿಕಾರಿ ಆಕಾಶ್ ಭುರಿಯಾ ಧಾರ್ಮಿಕ ಕಾರ್ಯಕ್ರಮ ನಡೆಯುವ ವೇಳೆ ಕೆಲವರು ಶಾಂತಿ-ಸಾಹಾರ್ದತೆಗೆ ಧಕ್ಕೆ ತರಲು ಯತ್ನಿಸಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ FIR ದಾಖಲಿಸಲಾಗಿದ್ದು, ನಗರಸಭೆ ಹಾಗೂ ಕಂದಾಯ ಇಲಾಖೆಗೆ ಮಾಹಿತಿ ನೀಡಿದ್ದೇವೆ.
ನಗರಸಭೆ ಹಾಗೂ ಕಂದಾಯ ಇಲಾಖೆಯ ನೇತೃತ್ವದಲ್ಲಿ ಆರೋಪಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದ್ದ ಜಾಗವನ್ನು ಬಿಗಿ ಭದ್ರತೆಯಲ್ಲಿ ಹೊಡೆದು ಹಾಕಲಾಗಿದೆ. ಡ್ರಮ್ ಹಾಗೂ ಡಿಜೆಯನ್ನು ಸಾರ್ವಜನಿಕರಿಗೆ ಅತಿಕ್ರಮಣ ತೆರವು ಕಾರ್ಯಾಚರಣೆ ಮಾಡುತ್ತಿರುವುದಾಗಿ ತಿಳಿಸಲು ಉಪಯೋಗಿಸಲಾಯಿತು ಎಂದು ಉಜ್ಜಯಿನಿ ಜಿಲ್ಲಾ ಪೊಲೀಸ್ ಉಪ ವರಿಷ್ಠಾಧಿಕಾರಿ ಆಕಾಶ್ ಭುರಿಯಾ ತಿಳಿಸಿದ್ದಾರೆ.