ಗಂಡ ಅವನಲ್ಲ, ಅವಳು!: ಗಂಡಸೆಂದು ಬಿಂಬಿಸಿಕೊಂಡು ವಿಧವೆಯನ್ನು ಮದ್ವೆಯಾದ್ಲು; ಆಮೇಲೆ ನಡೆದಿದ್ದೇ ಬೇರೆ...

Crime
Published on

ಬೆಂಗಳೂರು: 'ನಾನು ಅವನಲ್ಲ ಅವಳು' ಎಂಬ ಸಿನಿಮಾವೊಂದು ಕನ್ನಡದಲ್ಲಿ ಬಂದಿರುವುದು ಬಹುತೇಕ ಹಲವರಿಗೆ ಗೊತ್ತೇ ಇದೆ. ಏಕೆಂದರೆ ಈ ಸಿನಿಮಾದಲ್ಲಿನ ಅಭಿನಯಕ್ಕಾಗಿ ನಟ ಸಂಚಾರಿ ವಿಜಯ್ ಅವರಿಗೆ ರಾಷ್ಟ್ರಪ್ರಶಸ್ತಿ ಬಂದಿತ್ತು. ಒಂದು ವೇಳೆ ರೀಲ್ ಅಲ್ಲದ ಈ ರಿಯಲ್ ಪ್ರಕರಣಕ್ಕೂ ಪ್ರಶಸ್ತಿ ಕೊಡುವುದಾದರೆ ಇಲ್ಲಿರುವ 'ಅವಳು' ಕೂಡ ರಾಷ್ಟ್ರಪ್ರಶಸ್ತಿ 'ವಿಜೇತ'ಳೇ ಆಗುತ್ತಾಳೆ!

ಹೌದು.. ಇಲ್ಲೊಬ್ಬಳು ತನ್ನನ್ನು ಗಂಡಸೆಂದು ಬಿಂಬಿಸಿಕೊಂಡು ವಿಧವೆಯೊಬ್ಬಳನ್ನು ಮದುವೆಯಾಗಿದ್ದಲ್ಲದೆ ಸುಮಾರು 7 ತಿಂಗಳ ಕಾಲ ಸಂಸಾರವನ್ನೂ ನಿಭಾಯಿಸಿದ್ದಾಳೆ. ಕೊನೆಗೆ ವಿಧವೆಯ ಬಳಿ ಇದ್ದ 1.5 ಲಕ್ಷ ರೂ. ನಗದು ಹಾಗೂ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿಕೊಂಡು ಪರಾರಿಯೂ ಆಗಿದ್ದಾಳೆ. ನಂತರ ಸಂತ್ರಸ್ತೆ ಪೊಲೀಸರಿಗೆ ದೂರು ಕೊಟ್ಟಿದ್ದು, ಗಂಡ ಎಂದುಕೊಂಡಿದ್ದವನು ಬಂಧನಕ್ಕೆ ಒಳಗಾದ ಮೇಲೆಯೇ ಆಕೆಗೆ ಗೊತ್ತಾಗಿದ್ದು, ಗಂಡ ಅವನಲ್ಲ, ಅವಳು ಅಂತ.

ರಾಜಸ್ಥಾನದ ಜೈಪುರದ ಕೋಟದಲ್ಲಿನ 30 ವರ್ಷದ ಮಹಿಳೆಯೊಬ್ಬಳು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ, ತನ್ನ ಎರಡನೇ ಗಂಡ ಮನೆಯಲ್ಲಿರುವ ಹಣ-ಆಭರಣ ದೋಚಿಕೊಂಡು ಪರಾರಿಯಾಗಿದ್ದಾನೆ ಎಂದು ದೂರು ಕೊಟ್ಟಿದ್ದಳು. ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಬಂಧಿತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಮಹಿಳೆ ಎಂಬುದು ದೃಢಪಟ್ಟಿದೆ. 32 ವರ್ಷದ ವಿಜೇತ ಎಂಬ ಹೆಸರಿನ ಈ ಆರೋಪಿ ವಿಕಾಸ್ ಎಂಬ ಹೆಸರಿನಲ್ಲಿ ಗಂಡಸೆಂದು ಬಿಂಬಿಸಿಕೊಂಡು ವಿಧವೆಯನ್ನು ಮದುವೆಯಾಗಿದ್ದಳು.

ಸಂತ್ರಸ್ತ ಮಹಿಳೆಯ ಗಂಡ ನಾಲ್ಕು ವರ್ಷದ ಹಿಂದೆ ತೀರಿಹೋಗಿದ್ದ. ಬಳಿಕ ಅಂದರೆ ಒಂದು ವರ್ಷದ ಹಿಂದೆ ಕೋಟದ ನಂತ ಪ್ರದೇಶದ ನಾರಿಶಾಲಾ ಎಂಬ ಮಹಿಳಾ ಆಶ್ರಮಕ್ಕೆ ತನ್ನ ಇಬ್ಬರು ಮಕ್ಕಳೊಂದಿಗೆ ಬಂದಿದ್ದ ಸಂತ್ರಸ್ತೆ, ಅಲ್ಲಿ ಭದ್ರತಾ ಸಿಬ್ಬಂದಿ ಥರ ಕೆಲಸ ಮಾಡುತ್ತಿದ್ದಳು. ಅದೇ ಸಮಯದಲ್ಲಿ ಅಲ್ಲಿ ವಿಕಾಸ್ (ವಿಜೇತ) ಒಂದು ಹುಡುಗಿಯೊಂದಿಗೆ ಇದ್ದಿದ್ದು, ಆಕೆಯನ್ನು ತನ್ನ ಮಗಳೆಂದು ಹೇಳಿಕೊಂಡಿದ್ದಳು. ಸಂತ್ರಸ್ತೆಗೆ ತನ್ನನ್ನು ಪೊಲೀಸರು ಇಲ್ಲಿಗೆ ಮಹಿಳೆ ಎಂದು ತಪ್ಪಾಗಿ ಕಳಿಸಿದ್ದಾರೆ, ನಾನು ಪುರುಷ ಎಂದು ಪರಿಚಯಿಸಿಕೊಂಡಿದ್ದ ವಿಜೇತ, ಆ ನಂತರ ಸಂತ್ರಸ್ತೆಯನ್ನು ಮನವೊಲಿಸಿ ಮದುವೆಯಾಗಿದ್ದಳು. ಗಿಡ್ಡ ಕೂದಲು, ತನ್ನ ಗಡಸು ಧ್ವನಿಯಿಂದಾಗಿ ಸಂತ್ರಸ್ತೆಗೆ ಅಸಲಿಯತ್ತು ಗೊತ್ತಾಗಿರಲಿಲ್ಲ. ಏಳು ತಿಂಗಳ ಕಾಲ ಇಬ್ಬರೂ ಜೊತೆಗಿದ್ದರೂ ಲೈಂಗಿಕ ಸಂಪರ್ಕ ಆಗಿರಲಿಲ್ಲ. ತನನ್ನು ಬೆತ್ತಲೆಯಾಗಿ ನೋಡಿದವರು ಸತ್ತು ಹೋಗುತ್ತಾರೆ ಎಂದು ಮಂತ್ರವಾದಿಯೊಬ್ಬರು ಹೇಳಿದ್ದಾರೆ ಎಂದು ಹೆದರಿಸಿದ್ದ ವಿಜೇತ, ಅಸಲಿಯತ್ತು ಬಯಲಾಗದಂತೆ ಎಚ್ಚರ ವಹಿಸಿದ್ದಳು. ವಿಜೇತ ತನ್ನನ್ನು ಮೂಲತಃ ಬಿಹಾರದವಳು ಎಂದು ಹೇಳಿಕೊಂಡಿದ್ದರೂ ಆ ಬಗ್ಗೆ ದಾಖಲೆ ಹೊಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net