1 ಗಂಟೆಯಲ್ಲಿ 6 ಮಗುವಿಗೆ ಜನ್ಮ ನೀಡಿದ ಮಹಿಳೆ! ಶಿಶುಗಳ ಆರೋಗ್ಯ ಉತ್ತಮ, ಇದು ಪವಾಡವೇ ಎಂದ್ರು ನೆಟ್ಟಿಗರು

WhatsApp Image 2024-04-20 at 7.14.41 PM
Published on

ಈ ಜಗತ್ತಿನಲ್ಲಿ ಒಮ್ಮೊಮ್ಮೆ ಮಾತ್ರ ಅಪರೂಪದಲ್ಲಿ ಅಪರೂಪದ ಘಟನೆಗಳು ನಡೆಯುವುದು. ಅದರಲ್ಲಿ ಬೆಳಕಿಗೆ ಬರುವುದು ಕೆಲವೇ ಕೆಲವು. ಇನ್ನೂ ಒಂದಷ್ಟು ನಮ್ಮ ಗಮನಕ್ಕೆ ಬಾರದಂತೆ ಮಾಸಿ ಹೋಗುತ್ತವೆ. ಇದೇ ರೀತಿಯ ಅಪರೂಪದ ಘಟನೆಯೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಮೂಲಕ ಬೆಳಕಿಗೆ ಬಂದಿದ್ದು, ನೆಟ್ಟಿಗರನ್ನು ಭಾರೀ ಅಚ್ಚರಿಗೆ ದೂಡಿದೆ.

ಮಹಿಳೆಯೊಬ್ಬಳು ಏಕಕಾಲಕ್ಕೆ ಆರು ಮಕ್ಕಳಿಗೆ ಜನ್ಮ ನೀಡಿದ ಘಟನೆಯೊಂದು ಪಾಕಿಸ್ತಾನದ ರಾವಲ್ಪಂಡಿಯಲ್ಲಿ ನಡೆದಿದ್ದು, ಇದೊಂದು ಪವಾಡವೇ ನಿಜ ಎಂದು ಅನೇಕರು ಅಭಿಪ್ರಾಯಿಸಿದ್ದಾರೆ. ಆರಕ್ಕೆ ಆರು ಶಿಶುಗಳ ಆರೋಗ್ಯ ಕೂಡ ಉತ್ತಮವಾಗಿದ್ದು, ಈ ಘಟನೆ ವೈದ್ಯ ಲೋಕಕ್ಕೆ ಶಾಕ್ ತಂದಿದೆ. ರಾವಲ್ಪಿಂಡಿಯ ಆಸ್ಪತ್ರೆಯಲ್ಲಿ 27 ವರ್ಷದ ಮಹಿಳೆ ನಾಲ್ಕು ಗಂಡು ಮತ್ತು ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿರುವುದು ಅಲ್ಲಿನ ಸ್ಥಳೀಯ ಸುದ್ದಿಪತ್ರಿಕೆಗಳಲ್ಲಿ ವರದಿಯಾಗಿದೆ.

ಮೊಹಮ್ಮದ್ ವಹೀದ್ ಅವರ ಪತ್ನಿ ಜೀನತ್ ವಹೀದ್ ಎಂದು ಗುರುತಿಸಲಾಗಿರುವ ಮಹಿಳೆ ನಿನ್ನೆ (ಏಪ್ರಿಲ್ 19) ರಾವಲ್ಪಿಂಡಿಯ ಜಿಲ್ಲಾ ಆಸ್ಪತ್ರೆಯಲ್ಲಿ 6 ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ. ಜೀನತ್ ಒಂದು ಗಂಟೆಯ ಅವಧಿಯೊಳಗೆ ಎಲ್ಲಾ ಆರು ಮಕ್ಕಳಿಗೆ ಒಂದರ ಹಿಂದೆ ಒಂದರಂತೆ ಜನ್ಮ ನೀಡಿದ್ದಾರೆ.

ವೈದ್ಯರ ಮಾತು: ವರದಿಗಳ ಪ್ರಕಾರ, ರಾವಲ್ಪಿಂಡಿಯ ಹಾಜಿರಾ ಕಾಲೋನಿಯಲ್ಲಿ ನೆಲೆಸಿರುವ ಜೀನತ್ ವಹೀದ್ ಗರ್ಭಿಣಿಯಾಗಿದ್ದು, ಏಪ್ರಿಲ್ 18ರಂದು ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡ ಬೆನ್ನಲ್ಲೇ ಜಿಲ್ಲಾ ಆಸ್ಪತ್ರೆಗೆ ಕರೆತರಲಾಯಿತು. ಆರು ಶಿಶುಗಳಲ್ಲಿ ನಾಲ್ಕು ಗಂಡು ಮತ್ತು ಎರಡು ಹೆಣ್ಣು ಮಗು ಸೇರಿವೆ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ. ತಾಯಿ ಸೇರಿದಂತೆ ಎಲ್ಲಾ ಶಿಶುಗಳ ಸ್ಥಿತಿ ಸ್ಥಿರವಾಗಿದೆ. ಆರು ಶಿಶು ಕೂಡ ತಲಾ ಎರಡು ಪೌಂಡ್‌ಗಳಿಗಿಂತ ಕಡಿಮೆ ತೂಕವನ್ನು ಹೊಂದಿವೆ ಎಂದು ತಿಳಿಸಿದ್ದಾರೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net