ತಾಯಿಯ ಕಣ್ಣೆದ್ದುರಲ್ಲೇ ಮಗಳ ಮೇಲೆ ಅತ್ಯಾಚಾರ ಎಸಗಿದ ಇಬ್ಬರು ಕಾನ್ಸ್​ಟೇಬಲ್​ಗಳ ಬಂಧನ! Policemen ​

Policemen
Published on

Policemen : ತಾಯಿಯ ಕಣ್ಣೆದುರಲ್ಲೇ 25 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ಇಬ್ಬರು ಪೊಲೀಸ್ ಕಾನ್ಸ್​ಟೆಬಲ್​ಗಳನ್ನು ಅಮಾನತು ಮಾಡಿರುವ ಘಟನೆ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ನಡದಿದೆ.

ಪೊಲೀಸರಿಬ್ಬರನ್ನು ಬಂಧಿಸಿದ ಬಳಿಕ ಅವರನ್ನು ಅಮಾನತು ಮಾಡಲಾಗಿದೆ. ಬಂಧಿತರನ್ನು ಡಿ. ಸುರೇಶ್ ರಾಜ್ ಮತ್ತು ಪಿ. ಸುಂದರ್ ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶ ಮೂಲದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಅವರಿಬ್ಬರ ಮೇಲಿದೆ.

ಈ ಘಟನೆ ಕಳೆದ ಸೋಮವಾರ ರಾತ್ರಿ ನಡೆದಿದೆ. ತಾಯಿ ಮತ್ತು ಮಗಳು ಆಂಧ್ರಪ್ರದೇಶದಿಂದ ತಮಿಳುನಾಡಿನ ತಿರುವಣ್ಣಾಮಲೈನಲ್ಲಿರುವ ಅರುಣಾಚಲೇಶ್ವರ ದೇವಸ್ಥಾನಕ್ಕೆ ಹೋಗುತ್ತಿದ್ದರು. ಆಂಧ್ರಪ್ರದೇಶದಿಂದ ಹಣ್ಣುಗಳನ್ನು ತೆಗೆದುಕೊಂಡು ಮಾರಾಟ ಮಾಡಲು ಹೋಗುತ್ತಿದ್ದ ವಾಹನದಲ್ಲಿ ಅಮ್ಮ-ಮಗಳು ತಮಿಳುನಾಡು ತಲುಪಿದ್ದರು. ಈ ಮಧ್ಯೆ ಪೊಲೀಸರು ವಾಹನವನ್ನು ಪರಿಶೀಲಿಸಲು ರಸ್ತೆಬದಿಯಲ್ಲಿ ವಾಹನವನ್ನು ತಡೆದರು.

ವಾಹನವನ್ನು ನಿಲ್ಲಿಸಿದ ಬಳಿಕ ಅಮ್ಮ-ಮಗಳನ್ನು ಬಲವಂತವಾಗಿ ಹೊರಗೆಳೆದು, ವಾಹನವನ್ನು ಮುಂದೆ ಹೋಗಲು ಬಿಟ್ಟರು. ನಂತರ ಅವರಿಬ್ಬರು ನಿರ್ಜನ ಸ್ಥಳಕ್ಕೆ ಕರೆದೊಯ್ದು, ತಾಯಿಯ ಮೇಲೆ ಹಲ್ಲೆ ಮಾಡಿ, ಆಕೆಯ ಮಗಳ ಮೇಲೆ ಇಬ್ಬರು ಅತ್ಯಾಚಾರ ಎಸಗಿದ್ದಾರೆ. ಈ ಘಟನೆಯ ಬಳಿಕ ಇಬ್ಬರು ಪೇದೆಗಳು ಅಲ್ಲಿಂದ ಪರಾರಿಯಾದರು. ಸ್ವಲ್ಪ ಹೊತ್ತಿನ ಬಳಿಕ ಅಮ್ಮ-ಮಗಳಿಗೆ ಪ್ರಜ್ಞೆ ಬಂದಾಗ, ಇಬ್ಬರನ್ನೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು.

ಆರೋಪಿಗಳಿಬ್ಬರನ್ನು ಸೇವೆಯಿಂದ ವಜಾಗೊಳಿಸಲು ಮತ್ತು ಅವರಿಗೆ ಗರಿಷ್ಠ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸ್ಥಳೀಯ ಉನ್ನತ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯ ನಂತರ, ತಮಿಳುನಾಡಿನಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ.

ಪ್ರತಿಪಕ್ಷ ನಾಯಕ ಮತ್ತು ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಈ ಘಟನೆಯನ್ನು ಖಂಡಿಸಿದ್ದು, ಇದು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯನ್ನು ಎತ್ತಿ ತೋರಿಸಿದ್ದು, ಡಿಎಂಕೆ ಸರ್ಕಾರ ತಲೆ ತಗ್ಗಿಸಬೇಕಿದೆ. ಪೊಲೀಸರಿಂದಲೇ ಮಹಿಳೆಯರು ತಪ್ಪಿಸಿಕೊಂಡು ಓಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net