

ನವದೆಹಲಿ: ವಿಚ್ಛೇದನ ಸಂದರ್ಭದಲ್ಲಿ ಹಣದ ವಿಚಾರದಲ್ಲಿ ಸೆಟಲ್ಮೆಂಟ್ ಆಗುವುದು ಸಹಜ. ಪತಿ ಪತ್ನಿಗೆ ಜೀವನಾಂಶ ನೀಡಿ ದಾಂಪತ್ಯ ಸಂಬಂಧ ಕಡಿದುಕೊಳ್ಳಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಪತ್ನಿಯೇ ಪತಿಗೆ ಹಣ ಕೊಡಬೇಕಾಗಿ ಬಂದಿದೆ. ಅರ್ಥಾತ್ ವಿಚ್ಛೇದನಕ್ಕೆ 11 ದಿನ ಇರುವಾಗ ಬಂದ ಬಂಪರ್ ಬಹುಮಾನ ಈಕೆ ಹಳೇ ಗಂಡಂಗೇ ಕೊಡಬೇಕಾಯ್ತು!
ಕ್ಯಾಲಿಪೋರ್ನಿಯಾದಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಡೆನಿಸ್ ರೊಸ್ಸಿ ಎಂಬ ಈ ಮಹಿಳೆಗೆ 1.3 ಮಿಲಿಯನ್ ಡಾಲರ್ ಬಹುಮಾನ ಲಾಟರಿಯಲ್ಲಿ ಬಂದಿತ್ತು. ಆದರೆ ವಿಚ್ಛೇದನಕ್ಕೆ 11 ದಿನ ಇರುವಾಗ ಬಂದಿದ್ದ ಈ ಬಂಪರ್ ಬಹುಮಾನದ ವಿಷಯ ಗುಟ್ಟಾಗಿಟ್ಟಿದ್ದಳು. ಆದರೆ ಕೊನೆಗೆ ಪತಿಗೆ ಈ ವಿಷಯ ಗೊತ್ತಾಗಿದ್ದು, ಕೋರ್ಟ್ ಈಕೆ ಆ ಹಣವನ್ನು ಪತಿಗೆ ನೀಡಬೇಕು ಎಂದು ಆದೇಶಿಸಿದೆ.
ಡೆನಿಸ್ ರೊಸ್ಸಿ ಮತ್ತು ಥಾಮಸ್ ರೊಸ್ಸಿ 1996ರಲ್ಲಿ ವಿಚ್ಛೇದನ ಹೊಂದಿದ್ದರು. ಆದರೆ ಇತ್ತೀಚೆಗೆ ಲಾಟರಿ ಕಂಪನಿಯವರು ದೊಡ್ಡ ಮೊತ್ತದ ಪರಿವರ್ತನೆ ಕುರಿತು ವಿಜೇತರಿಗೆ ಕಳುಹಿಸಿದ್ದ ಪತ್ರ ಥಾಮಸ್ ವಿಳಾಸಕ್ಕೆ ಬಂದದ್ದರಿಂದ ಡೆನಿಸ್ಗೆ ಬಂಪರ್ ಬಹುಮಾನ ಬಂದ ವಿಚಾರ ಆತನಿಗೆ ಗೊತ್ತಾಗಿತ್ತು.
ಈ ಹಿನ್ನೆಲೆಯಲ್ಲಿ ಥಾಮಸ್ ನ್ಯಾಯಾಲಯದ ಮೆಟ್ಟಿಲೇರಿದ್ದ. ವಿಚ್ಛೇದನ ಸಂದರ್ಭದಲ್ಲಿ ಆಸ್ತಿ ಮಾಹಿತಿ ಬಹಿರಂಗ ಸಂದರ್ಭದಲ್ಲಿ ತಪ್ಪು ಮಾಹಿತಿ ನೀಡಿದ್ದ ಡೆನಿಸ್ ವಿರುದ್ಧ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅದರಲ್ಲೂ ಆಕೆ ಬಂಪರ್ ಬಹುಮಾನದ ಮಾಹಿತಿ ಬಹಿರಂಗಪಡಿಸದ್ದರಿಂದ ಅದು ಆಕೆಯದ್ದಲ್ಲ ಎಂದು ಕೋರ್ಟ್ನಲ್ಲಿ ವಾದಿಸಲಾಗಿದೆ. ಅಲ್ಲದೆ 66,800 ಡಾಲರ್ನಂತೆ ಅಷ್ಟೂ ಹಣವನ್ನು 20 ವಾರ್ಷಿಕ ಕಂತಿನಲ್ಲಿ ಥಾಮಸ್ಗೆ ಪಾವತಿಸುವಂತೆ ಡೆನಿಸ್ಗೆ ಆದೇಶಿಸಲಾಗಿದೆ. -ಏಜೆನ್ಸೀಸ್