ಚಲಿಸುತ್ತಿದ್ದ ಬೈಕ್​ಗೆ ಫುಟ್​ಬಾಲ್​ ಬಡಿದು ಕೆಳಗೆ ಬಿದ್ದ ಮಹಿಳೆ: ಲಾರಿ ಹರಿದು ದುರಂತ ಸಾವು

Kerala Woman
Published on

ಮಲಪ್ಪುರಂ: ಚಲಿಸುತ್ತಿದ್ದ ಬೈಕ್​ಗೆ ಫುಟ್​ಬಾಲ್​ ಬಡಿದಿದ್ದರಿಂದ ನಿಯಂತ್ರಣ ಕಳೆದುಕೊಂಡು ಬೈಕ್​ ಕೆಳಗೆ ಬಿದ್ದ ಪರಿಣಾಮ ಹಿಂಬದಿಯಲ್ಲಿ ಕುಳಿತ್ತಿದ್ದ ಮಹಿಳೆಯ ಮೇಲೆ ಲಾರಿ ಹರಿದು ದುರಂತ ಸಾವಿಗೀಡಾಗಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಒಥಾಯಿಯಲ್ಲಿ ನಡೆದಿದೆ.

ಮೃತಳನ್ನು ಫಾತಿಮಾ ಸುಹ್ರಾ (38) ಎಂದು ಗುರುತಿಸಲಾಗಿದೆ. ಈಕೆ ಮಲಪ್ಪುರಂನ ತ್ರಿಕ್ಕಾಲಾಂಗೋದೆ ಮೂಲದವಳು. ತನ್ನ ಸಹೋದರ ಮತ್ತು ಮಕ್ಕಳೊಂದಿಗೆ ಅತ್ತೆಯ ಮನೆಗೆ ವಾಪಸ್​ ಬರುವಾಗ ಈ ದುರ್ಘಟನೆ ಸಂಭವಿಸಿದೆ.

ಮಕ್ಕಳು ಫುಟ್​ಬಾಲ್​ ಆಡುತ್ತಿದ್ದರು. ಅವರ ಸಮೀಪದ ರಸ್ತೆಯಲ್ಲಿ ಬೈಕ್​ ಹಾದು ಹೋಗುವಾಗ ಮಕ್ಕಳು ಒದ್ದ ಫುಟ್​ಬಾಲ್​ ಬೈಕ್​ಗೆ ಬಡಿದಿದೆ. ಇದರಿಂದ ಬೈಕ್​ ಸವಾರ ನಿಯಂತ್ರಣ ಕಳೆದುಕೊಂಡಿದ್ದರಿಂದ ಬೈಕ್​ ಕೆಳಗೆ ಬಿದ್ದಿದೆ. ಇದೇ ಸಮಯದಲ್ಲಿ ಹಿಂದೆ ಬರುತ್ತಿದ್ದ ಲಾರಿ, ಫಾತಿಮಾ ಮೇಲೆ ಹರಿದಿದೆ.

ಗಂಭೀರವಾಗಿ ಗಾಯಗೊಂಡಿದ್ದ ಫಾತಿಮಾಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದಾದರೂ ಆಕೆಯನ್ನು ಕಾಪಾಡಲು ಸಾಧ್ಯವಾಗಲಿಲ್ಲ. ಆಕೆಯ ಸಹೋದರ ಮತ್ತು ಮಕ್ಕಳು ಯಾವುದೇ ಹಾನಿ ಇಲ್ಲದೆ ಬಚಾವ್​ ಆಗಿದ್ದಾರೆ. ಫಾತಿಮಾಳ ದೇಹವನ್ನು ಮಂಜೇರಿ ಮೆಡಿಕಲ್​ ಕಾಲೇಜಿಗೆ ಸ್ಥಳಾಂತರ ಮಾಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net