

ನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್ ಕೇಂದ್ರಾಡಳಿತ ಪ್ರದೇಶದಲ್ಲಿರುವ ಹೆಸರಿಡದ 21 ದ್ವೀಪಗಳಿಗೆ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಕೇಂದ್ರ ಸರ್ಕಾರ ಇಂದು (ಜ.23) ನಾಮಕರಣ ಮಾಡಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನ ಹಿನ್ನೆಲೆಯಲ್ಲಿ ದ್ವೀಪಗಳ ನಾಮಕರಣ ಸಮಾರಂಭ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾದರು.
ಅಂಡಮಾನ್ ಮತ್ತು ನಿಕೋಬಾರ್ನಲ್ಲಿ ನೇತಾಜಿ ಹೆಸರಿನಲ್ಲಿ ದ್ವೀಪದಲ್ಲಿ ನಿರ್ವಿುಸಲಾಗುವ ರಾಷ್ಟ್ರೀಯ ಸ್ಮಾರಕದ ಮಾದರಿಯನ್ನು ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಅನಾವರಣ ಮಾಡಿದರು. ಬಳಿಕ ಹೆಸರಿಲ್ಲದ 21 ದೊಡ್ಡ ದ್ವೀಪಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಹೆಸರಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂದು ನೇತಾಜಿ ಸುಭಾಷ್ ಬೋಸ್ ಅವರ ಜನ್ಮದಿನ. ದೇಶವು ಈ ದಿನವನ್ನು ಪರಾಕ್ರಮ್ ದಿವಸ್ ಎಂದು ಆಚರಿಸುತ್ತದೆ. ಇಂದು ಹೊಸ ಹೆಸರುಗಳನ್ನು ಪಡೆದಿರುವ 21 ದ್ವೀಪಗಳ ನಾಮಕರಣದಲ್ಲಿ ಹಲವು ಸಂದೇಶಗಳು ಅಡಕವಾಗಿವೆ. ಆ ಸಂದೇಶ ಏನೆಂದರೆ, ಒಂದು ಭಾರತ, ಶ್ರೇಷ್ಠ ಭಾರತ ಎಂಬುದು. ಈ ಸಂದೇಶ ನಮ್ಮ ಸಶಸ್ತ್ರ ಪಡೆಗಳ ಶೌರ್ಯದ ಸಂಕೇತ ಎಂದು ಪ್ರಧಾನಿ ಮೋದಿ ಹೇಳಿದರು.
ಎಲ್ಲ 21 ಪರಮವೀರರಿಗೆ ಭಾರತವೇ ಮೊದಲು ಎಂಬುದು ಏಕೈಕ ಸಂಕಲ್ಪವಾಗಿತ್ತು. ಇಂದು ಈ ದ್ವೀಪಗಳ ನಾಮಕರಣದಲ್ಲಿ ಅವರ ನಿರ್ಣಯವು ಅಮರವಾಗಿ ಉಳಿಯಲಿದೆ. ದಶಕಗಳಿಂದ ನಮ್ಮ ದೇಶದ ಸಾಮರ್ಥ್ಯವನ್ನು ಕಡಿಮೆ ಅಂದಾಜು ಮಾಡಲಾಗಿದೆ. ಆದರೆ ಈಗ ಭಾರತವು ಆಧುನಿಕ ಅಭಿವೃದ್ಧಿಯ ಎತ್ತರವನ್ನು ಮುಟ್ಟುವ ಸಾಮರ್ಥ್ಯವನ್ನು ಹೊಂದಿದೆ. ಭಾರತದ ದ್ವೀಪಗಳು ಇಡೀ ಜಗತ್ತಿಗೆ ಬಹಳಷ್ಟು ನೀಡಬಲ್ಲವು. ಆದರೆ ಈ ಮೊದಲು ದ್ವೀಪಗಳ ಸಾಮರ್ಥ್ಯವನ್ನು ಯಾರೂ ಸಹ ಗುರುತಿಸಿರಲಿಲ್ಲ. ಅಲ್ಲದೆ, ಯಾವುದೇ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ಸರ್ಕಾರವನ್ನು ಪ್ರಧಾನಿ ಟೀಕಿಸಿದರು.
ವೀರ ಸಾವರ್ಕರ್ ಮತ್ತು ದೇಶಕ್ಕಾಗಿ ಹೋರಾಡಿದ ಅನೇಕ ವೀರರನ್ನು ಅಂಡಮಾನ್ನ ಈ ನೆಲದಲ್ಲಿ ಬಂಧಿಸಲಾಗಿದೆ. ನಾನು 4 ರಿಂದ 5 ವರ್ಷಗಳ ಹಿಂದೆ ಪೋರ್ಟ್ ಬ್ಲೇರ್ಗೆ ಭೇಟಿ ನೀಡಿದಾಗ ಅಲ್ಲಿನ 3 ಪ್ರಮುಖ ದ್ವೀಪಗಳಿಗೆ ಭಾರತೀಯ ಹೆಸರುಗಳನ್ನು ಅರ್ಪಿಸಿದ್ದೆ. ಅಂಡಮಾನ್ನ ಈ ನಾಡು ಮೊಟ್ಟಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದ ನಾಡು. ಇಲ್ಲಿ ಮೊದಲ ಬಾರಿಗೆ ಸ್ವತಂತ್ರ ಭಾರತದ ಸರ್ಕಾರ ರಚನೆಯಾಯಿತು ಎಂದರು.
ಅಂದಹಾಗೆ 2018ರಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಕ್ಕೆ ಭೇಟಿ ನೀಡಿದ್ದ ಮೋದಿ, ರಾಸ್ ದ್ವೀಪಕ್ಕೆ ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪ ಎಂದು ಮರುನಾಮಕರಣ ಮಾಡಿದ್ದರು. ಹೆಸರಿಡದ ದ್ವೀಪಗಳಿಗೆ ಮೇಜರ್ ಸೋಮನಾಥ ಶರ್ವ, ಕ್ಯಾಪ್ಟನ್ ಕರಮ್ ಸಿಂಗ್, ಎರಡನೇ ಲೆಫ್ಟಿನೆಂಟ್ ರಾಮ ರಘೋಬಾ ರಾಣೆ, ನಾಯಕ್ ಜಾದುನಾಥ್ ಸಿಂಗ್, ಕಂಪನಿ ಹವಾಲ್ದಾರ್ ಮೇಜರ್ ಪೀರು ಸಿಂಗ್, ಕ್ಯಾಪ್ಟನ್ ಜಿ.ಎಸ್. ಸಲಾರಿಯಾ, ಲೆ.ಕರ್ನಲ್ ದನ್ಸಿಂಗ್ ಥಾಪಾ, ಸುಬೇದಾರ್ ಜೋಗಿಂದರ್ ಸಿಂಗ್, ಮೇಜರ್ ಶೈತಾನ್ ಸಿಂಗ್, ಕಂಪನಿ ಕ್ವಾರ್ಟರ್ ಮಾಸ್ಟರ್ ಹವಾಲ್ದಾರ್ ಅಬ್ದುಲ್ ಹಮೀದ್ , ಲೆ.ಕರ್ನಲ್ ಅರ್ದೇಶಿರ್ ಬುಜೋಜಿ ತಾರಾಪೋರ್ ಹೆಸರುಗಳನ್ನು ಇಡಲಾಗಿದೆ. (ಏಜೆನ್ಸೀಸ್)