ಐವರು ಮಕ್ಕಳನ್ನು ಕಾಪಾಡಿ ಮರುಕ್ಷಣವೇ ದುರಂತ ಸಾವಿಗೀಡಾದ ತಾಯಿ..!

Mother
Published on

ಮಾಸ್ಕೋ: ಮನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಿಲುಕಿದ್ದ ಐವರು ಮಕ್ಕಳನ್ನು ಕಾಪಾಡಿದ ಮರುಕ್ಷಣವೇ ತಾಯಿಯೊಬ್ಬಳು ದುರಂತ ಸಾವಿಗೀಡಾಗಿರುವ ಘಟನೆ ರಷ್ಯಾದಲ್ಲಿ ನಡೆದಿದೆ.

ಗುಲ್ನರಾ ಕೊಸ್ಟೆಲ್ನ್ಯುಕ್​ (31) ಮಕ್ಕಳಿಗಾಗಿ ಪ್ರಾಣ ತ್ಯಾಗ ಮಾಡಿದ ತಾಯಿ. ಸುಟ್ಟು ಕರಕಲಾಗಿದ್ದ ಮನೆಯ ಮೇಲ್ಛಾವಣಿ ಕುಸಿದುಬಿದ್ದ ಪರಿಣಾಮ ಅದರಡಿಯಲಿ ಸಿಲುಕಿ ಗುಲ್ನರಾ ಮೃತಪಟ್ಟಿದ್ದಾರೆ.

ಸಾವಿಗೂ ಮುನ್ನ 14 ವರ್ಷಕ್ಕಿಂತ ಕೆಳಗಿನ ತನ್ನ ಐದೂ ಮಕ್ಕಳನ್ನು ಗುಲ್ನರಾ ಕಾಪಾಡಿದ್ದಾರೆ. ಬುಧವಾರ ತಡರಾತ್ರಿ ಪೂರ್ವ ರಷ್ಯಾದ ಯಕುಟ್ಸ್​ ನಗರದಲ್ಲಿರುವ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಅಡುಗೆ ಮನೆಯಲ್ಲಿ ತುಂಬಾ ಕಾದಿದ್ದ ಸ್ಟೌನಿಂದ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು. ಮನೆಯಲ್ಲಿ ಮರದ ವಸ್ತು ತುಂಬಾ ಇದ್ದಿದ್ದರಿಂದ ಬೆಂಕಿ ಇಡೀ ಮನೆಯನ್ನೇ ಆವರಿಸಿತ್ತು. ಈ ವೇಳೆ ಎಲ್ಲರೂ ಮಲಗಿದ್ದರು. ಇದರ ನಡುವೆ ಗುಲ್ನಾರ ಅವರ 14 ವರ್ಷದ ಮಗ ಎಚ್ಚರಗೊಂಡಾಗ ಬೆಂಕಿ ಹೊತ್ತಿಕೊಂಡಿರುವುದನ್ನು ನೋಡಿ ತಾಯಿಯನ್ನು ಎಚ್ಚರಿಸಿದ್ದ.

ಸುತ್ತ ಬೆಂಕಿ ಆವರಿಸಿದೆ ಎಂಬುದು ಗುಲ್ನರಾಗೆ ಮನವರಿಕೆಯಾದಾಗ ಮನೆಯಲ್ಲಿನ ಕಿಟಕಿ ಗಾಜನ್ನು ಮುರಿದು ಮೊದಲು ಮಕ್ಕಳನ್ನು ಹೊರಹಾಕಿದ್ದರು. ಅದಾದ ಬಳಿಕ ತಾನೂ ಹೊರಬರಲು ಯತ್ನಿಸುವಾಗ ಮನೆಯಲ್ಲಿ ಮರದ ಬೀಮ್​ ಆಕೆಯ ಮೇಲೆ ಬಿದ್ದು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸಿದ ಬಳಿಕ ಗುಲ್ನರಾ ಮೃತದೇಹ ಪತ್ತೆಯಾಗಿದೆ.

ಮಕ್ಕಳಿಗೂ ಸಣ್ಣ ಪುಟ್ಟ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಘಟನೆಗೆ ಸ್ಟೌನ ದೋಷವೇ ಕಾರಣ ಎಂದು ಪರಿಣಿತರು ಆರೋಪಿಸಿದ್ದಾರೆ. ದುರ್ಘಟನೆ ಸಂಭವಿಸಿದಾಗ ಗುಲ್ನರಾ ಪತಿ ಅಲೆಕ್ಸಿ ಕೊಸ್ಟೆಲ್ನ್ಯುಕ್​ ಕಚೇರಿಯಲ್ಲಿದ್ದರು. ಇತ್ತ ಪತ್ನಿ ದುರಂತ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅಲೆಕ್ಸಿ ಕುಸಿದು ಬಿದ್ದಿದ್ದಾರೆ. ಗುಲ್ನರಾ ಇಲ್ಲದ ಜೀವನ ಹೇಗೆ ಎಂದು ಅಲೆಕ್ಸಿ ಕಣ್ಣೀರಿಟ್ಟಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net