ಫೋಟೋಶೂಟ್ ವೇಳೆ​ ಅಪ್ಪಿಕೊಂಡಿದ್ದಕ್ಕೆ ವರನಿಂದ 3 ಲಕ್ಷ ವಸೂಲಿ ಮಾಡಿದ ವಧು: ಕಾರಣ ಕೇಳಿದ್ರೆ ಹುಬ್ಬೇರೋದು ಖಚಿತ! Photoshoot

Photoshoot
Published on

ಬೀಜಿಂಗ್​: ಮದುವೆಗೂ ಮುನ್ನ ವಧು-ವರ ಫೋಟೋಶೂಟ್ ( Photoshoot ) ಮಾಡಿಸುವುದು ಈಗ ಸರ್ವೇ ಸಾಮಾನ್ಯವಾಗಿದೆ. ನಿಶ್ಚಿತಾರ್ಥ ಮುಗಿಯುತ್ತಿದ್ದಂತೆಯೇ ಫೋಟೋಶೂಟ್​ಗೆ ಪ್ಲಾನ್ ಮಾಡಲು ಪ್ರಾರಂಭಿಸುತ್ತಾರೆ. ಮದುವೆಗೂ ಮುನ್ನ ಅಥವಾ ನಂತರ ಸಮಯ ಯಾವುದೇ ಇರಲಿ ಇಂದಿನ ದಿನದಲ್ಲಿ ವೆಡ್ಡಿಂಗ್​ ಫೋಟೋಶೂಟ್​ ನವ ಜೋಡಿಯ ಅವಿಭಾಜ್ಯ ಅಂಗವಾಗಿದೆ. ಬಹುತೇಕ ಜೋಡಿಗಳು ತಮ್ಮ ವೆಡ್ಡಿಂಗ್​ ಫೋಟೋ ಮತ್ತು ವಿಡಿಯೋಗಳು ತುಂಬಾ ವಿಭಿನ್ನವಾಗಿರಬೇಕೆಂಬ ಕನಸನ್ನೂ ಹೊಂದಿರುತ್ತಾರೆ. ಸಾಧ್ಯವಾದಷ್ಟು ಸುಂದರವಾದ ತಾಣಗಳಲ್ಲಿ ಸೆರೆಹಿಡಿಯಬೇಕೆಂದು ಬಯಸುತ್ತಾರೆ. ಇನ್ನು ಕೆಲವು ಜೋಡಿ ತುಂಬಾ ವಿಭಿನ್ನವಾಗಿರಬೇಕೆಂದು ಸಾಹಸಕ್ಕೂ ಕೈಹಾಕುತ್ತಾರೆ.

ಆದರೆ, ಹಿಂದಿನ ಕಾಲದಲ್ಲಿ ಫೋಟೋಶೂಟ್​ ಕಲ್ಪನೆಯೇ ಇರಲಿಲ್ಲ. ಹೇಳಬೇಕೆಂದರೆ, ವರ, ವಧುವನ್ನು ಕಣ್ತುಂಬಿಕೊಳ್ಳುತ್ತಿದ್ದು ಮದುವೆ ಮಂಟಪದಲ್ಲೇ. ಮದುವೆವರೆಗೂ ಹೊರಗಡೆ ಸುತ್ತಾಡುವುದಕ್ಕೂ ಬಿಡುತ್ತಿರಲಿಲ್ಲ. ಆದರೆ, ಈಗ ಆ ಟ್ರೆಂಡ್ ಸಂಪೂರ್ಣವಾಗಿ ಬದಲಾಗಿದೆ. ಮದುವೆಗೂ ಮುನ್ನ ವಧು-ವರರು ಫೋಟೋಶೂಟ್​ನಲ್ಲಿ ಮಿಂಚುವುದು, ಸುತ್ತಾಡುವುದು ರೂಢಿಯಾಗಿದೆ. ಆದರೆ, ಕೆಲವೊಮ್ಮೆ ಮದುವೆಗಳು ಅರ್ಧಕ್ಕೆ ನಿಂತು ಹೋಗುವುದನ್ನು ಕೇಳಿದ್ದೇವೆ. ಅದೇ ರೀತಿಯ ಪ್ರಕರಣ ಚೀನಾದಲ್ಲಿ ನಡೆದಿದೆ. ಆದರೆ, ಅಚ್ಚರಿ ಸಂಗತಿ ಏನೆಂದರೆ, ಪ್ರೀ ವೆಡ್ಡಿಂಗ್​ ಫೋಟೋಶೂಟ್​ ಸಮಯದಲ್ಲಿ ಹುಡುಗಿಯನ್ನು ತಬ್ಬಿಕೊಂಡಿದ್ದಕ್ಕಾಗಿ ಹುಡುಗನೊಬ್ಬ ಭಾರಿ ಬೆಲೆ ತೆತ್ತಿದ್ದಾನೆ.

ಹೌದು, ಮದುವೆ ರದ್ದಾಗಿದೆ. ಆದರೆ, ಫೋಟೋಶೂಟ್​ ವೇಳೆ ತಬ್ಬಿಕೊಂಡಿದ್ದಕ್ಕಾಗಿ ‘ ಮೂರು ಲಕ್ಷ ಎಪ್ಪತ್ತೈದು ಸಾವಿರ ರೂಪಾಯಿಗಳನ್ನು ನೀಡುವಂತೆ ವಧು ಆಗ್ರಹಿಸಿದ್ದಾಳೆ. ಈ ಘಟನೆ ಇದೀಗ ಚೀನಾದಲ್ಲಿ ಭಾರಿ ಚರ್ಚೆಯಾಗುತ್ತಿದೆ.

ಕಳೆದ ಜನವರಿ ತಿಂಗಳಲ್ಲಿ ಇಬ್ಬರ ನಿಶ್ಚಿತಾರ್ಥ ನಡೆದಿತ್ತು. ನವೆಂಬರ್‌ನಲ್ಲಿ ಪ್ರಿ-ವೆಡ್ಡಿಂಗ್ ಶೂಟ್ ಕೂಡ ಬಹುತೇಕ ಪೂರ್ಣಗೊಂಡಿತು. ಅಲ್ಲದೆ, ಮದುವೆಗಾಗಿ ಹೋಟೆಲ್​ ಕೂಡ ಬುಕ್ಕಿಂಗ್​ ಆಗಿತ್ತು. ಅಷ್ಟರಲ್ಲೇ ಯುವತಿ ಮದುವೆಯಿಂದ ಹಿಂದೆ ಸರಿದಿದ್ದಾಳೆ. ಇನ್ನು ಫೋಟೋಶೂಟ್ ವೇಳೆ ಫೋಟೋಗ್ರಾಫರ್​ ಸೂಚನೆ ಮೇರೆಗೆ ವರ, ವಧುವನ್ನು ತಬ್ಬಿಕೊಂಡಿದ್ದನು. ಆದರೆ, ಈಗ ಮದುವೆ ರದ್ದಾಗಿರುವುದರಿಂದ ತಬ್ಬಿಕೊಂಡಿದ್ದಾಗಿ 3.73 ಲಕ್ಷ ರೂ.ಗಳನ್ನು ಪಾವತಿಸುವಂತೆ ಬೇಡಿಕೆ ಇಟ್ಟಳು.

ಮತ್ತೊಂದು ಟ್ವಿಸ್ಟ್​ ಏನೆಂದರೆ, ಹುಡುಗಿಯ ಕುಟುಂಬವು ನಿಶ್ಚಿತಾರ್ಥದ ಸಮಯದಲ್ಲಿ ವರನ ಕುಟುಂಬದಿಂದ 2,00,000 ಯುವಾನ್ (ರೂ. 25 ಲಕ್ಷ) ಉಡುಗೊರೆಯಾಗಿ ಪಡೆದುಕೊಂಡಿತ್ತು. ಇದೀಗ ಮದುವೆ ರದ್ದಾಗಿರುವುದರಿಂದ, 30,000 ಯುವಾನ್ (ರೂ. 3.73 ಲಕ್ಷ) ಕಡಿತಗೊಳಿಸಿ ಉಳಿದ ಮೊತ್ತವನ್ನು ವರನ ಕುಟುಂಬಕ್ಕೆ ಹಿಂದಿರುಗಿಸಿದ್ದಾರೆ.

30,000 ಯುವಾನ್​ ಕಡಿತಗೊಳಿಸಿದ್ದೇಕೆ ಎಂದು ಪ್ರಶ್ನೆ ಮಾಡಿದಾಗ, ಹುಡುಗ ಫೋಟೋಶೂಟ್​ ವೇಳೆ ತನ್ನನ್ನು ತಬ್ಬಿಕೊಂಡಿದ್ದರಿಂದ ಆ ಹಣ ಕಡಿತಗೊಳಿಸಿದ್ದೇವೆ ಎಂದಿದ್ದಾಳೆ. ಯುವತಿಯ ನಡೆಯನ್ನು ಸಂಬಂಧ ಏರ್ಪಡಿಸಿದ ಬ್ರೋಕರ್​ ಖಂಡಿಸಿದ್ದಾರೆ. ನಾನು ಸಾವಿರಕ್ಕೂ ಹೆಚ್ಚು ವಿವಾಹಗಳನ್ನು ಮಾಡಿಸಿದ್ದೇನೆ. ಆದರೆ ಈ ಹುಡುಗಿ ತುಂಬಾ ವಿಭಿನ್ನಳು. ಯಾವುದೇ ಕಾರಣವಿಲ್ಲದೆ ಮದುವೆ ರದ್ದಾದ ನಂತರ ಈ ಮೊತ್ತವನ್ನು ಕಡಿತಗೊಳಿಸಿ ಉಳಿದ 170,500 ಯುವಾನ್ (ಸುಮಾರು ರೂ. 21 ಲಕ್ಷ) ಮಾತ್ರ ಹಿಂದಿರುಗಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಇನ್ನು ಮದುವೆ ರದ್ದು ಮಾಡಲು ಕಾರಣ ಏನು ಎಂಬ ಪ್ರಶ್ನೆ ಕೂಡ ಮೂಡಿದೆ. ಈ ಸಂಬಂಧ ಚೀನಾದ ಕೆಲ ಮಾಧ್ಯಮಗಳು ವರದಿ ಮಾಡಿವೆ. ವರನು ತುಂಬಾ ಪ್ರಾಮಾಣಿಕನಾಗಿದ್ದು, ತುಂಬಾ ಕಡಿಮೆ ಆದಾಯ ಹೊಂದಿದ್ದಾನೆ ಎಂಬ ಕಾರಣ ನೀಡಿ ಆಕೆ ಮದುವೆ ರದ್ದು ಮಾಡಿದ್ದಾಳೆ ಎಂದು ವರದಿಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net