ರೈಲ್ವೆ ಹಳಿ ದಾಟುವಾಗ ಬೈಕ್​ನಿಂದ ಬಿದ್ದ ಯುವಕ: ಮುಂದೆ ನಡೆದಿದ್ದು ಭೀಕರ, ಇಲ್ಲಿ ತಪ್ಪು ಯಾರದ್ದು?! Railway Tracks

Railway Tracks
Published on

ಲಖನೌ: ರೈಲು ಹಳಿಗಳನ್ನು ( Railway Tracks ) ದಾಟುವಾಗ ಮೈಯೆಲ್ಲ ಕಣ್ಣಾಗಿರಬೇಕು. ಒಂದು ಕ್ಷಣ ಮೈಮರೆತರೆ ರೈಲು ಮೈಮೇಲೆಯೇ ಹರಿದು ಹೋಗಿಬಿಡುತ್ತದೆ. ಇಂತಹ ಸಾಕಷ್ಟು ಘಟನೆಗಳು ನಮ್ಮ ದೇಶದಲ್ಲಿ ನಡೆದಿವೆ. ತಮ್ಮ ಬೇಜವಾಬ್ದಾರಿಯಿಂದಲೋ ಅಥವಾ ಆತುರದಿಂದಲೋ ಹಳಿಗಳನ್ನು ದಾಟುವಾಗ ರೈಲಿನ ಹೊಡೆತಕ್ಕೆ ಸಿಲುಕಿ ತಮ್ಮ ಅಮೂಲ್ಯ ಪ್ರಾಣವನ್ನು ಕಳೆದುಕೊಂಡವರಿದ್ದಾರೆ. ಇಂತಹ ಪ್ರಕರಣಗಳು ನಡೆದಾಗಲೂ ಎಚ್ಚೆತ್ತುಕೊಳ್ಳದಿದ್ದರೆ ಅದಕ್ಕಿಂತ ಮೂರ್ಖತನ ಇನ್ನೊಂದಿಲ್ಲ ಎಂದು ಹೇಳಬಹುದು.

ಹೌದು, ಅದೇ ರೀತಿಯ ಮತ್ತೊಂದು ಘಟನೆ ಇದೀಗ ಉತ್ತರ ಪ್ರದೇಶದ ಗ್ರೇಟರ್​ ನೋಯ್ಡಾದಲ್ಲಿ ನಡೆದಿದೆ. ಬೈಕ್​ ಸವಾರನೊಬ್ಬ ರೈಲು ಹಳಿ ದಾಟುವಾಗ ತನ್ನ ಬೇಜವಾಬ್ದಾರಿ ವರ್ತನೆಯಿಂದ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆ. ಇದಕ್ಕೆ ಸಂಬಂಧಿಸಿದ ಎದೆ ಝಲ್​ ಎನಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಆಘಾತ ವ್ಯಕ್ತಪಡಿಸಿದ್ದಾರೆ.

ಮೃತ ಯುವಕನನ್ನು ತುಷಾರ್​ ಎಂದು ಗುರುತಿಸಲಾಗಿದೆ. ಈತ ಗ್ರೇಟರ್​ ನೋಯ್ಡಾದ ದಾದ್ರಿ ಪ್ರದೇಶದ ನಿವಾಸಿ. ರೈಲ್ವೆ ಕ್ರಾಸಿಂಗ್​ ಮುಚ್ಚುವ ಸಂದರ್ಭದಲ್ಲಿ ಹೇಗಾದರೂ ಮಾಡಿ ರೈಲು ಹಳಿ ದಾಟಿಬಿಡಬೇಕೆಂದುಕೊಂಡು ವೇಗವಾಗಿ ಬರುತ್ತಾನೆ. ಈ ವೇಳೆ ರೈಲ್ವೆ ಗೇಟ್​ ಬಳಿ ಮರಳು ಇದ್ದ ಕಾರಣ ಬೈಕ್​ ಸ್ಕಿಡ್​ ಆಗಿ ಹಳಿಯ ಮೇಲೆಯೇ ಬೀಳುತ್ತಾನೆ. ತನ್ನ ಎದ್ದು, ತನ್ನ ಬೈಕ್​ ಅನ್ನು ಪಕ್ಕಕ್ಕೆ ಸರಿಸಲು ಯತ್ನಿಸುತ್ತಾನೆ. ಅಷ್ಟರಲ್ಲಿ ರೈಲು ವೇಗವಾಗಿ ಬಂದ ಹಿನ್ನಲೆಯಲ್ಲಿ ಏನು ಮಾಡಬೇಕೆಂದು ತೋಚದೆ ಬೈಕ್​ ಅನ್ನು ಅಲ್ಲಿಯೇ ಬಿಟ್ಟು ಮುಂದಕ್ಕೆ ಓಡುತ್ತಾನೆ. ಆದರೆ, ರೈಲು ಆತನನ್ನು ಡಿಕ್ಕಿ ಹೊಡೆದುಕೊಂಡು ಹೋಗುತ್ತದೆ.

ತುಂಬಾ ಗಾಬರಿಯಲ್ಲಿದ್ದ ತುಷಾರ್​ಗೆ ಆ ಕ್ಷಣ ಏನು ಮಾಡಬೇಕೆಂದು ತೋಚಲಿಲ್ಲ. ಎಡಕ್ಕೆ ಅಥವಾ ಬಲಭಾಗಕ್ಕೆ ಓಡುವ ಬದಲು ಹಳಿ ಸಾಗುವ ದಿಕ್ಕಿಗೆ ಓಡುತ್ತಾನೆ. ಇದರ ಪರಿಣಾಮ ರೈಲು ಆತನನ್ನು ಗುದ್ದಿಕೊಂಡು ಹೋಗುತ್ತದೆ. ಇದರಿಂದಾಗಿ ತುಷಾರ್​ ಸ್ಥಳದಲ್ಲೇ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾನೆ.

ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್​ಗಳು ಮಾಡುತ್ತಿದ್ದಾರೆ. ಆತ ಏಕೆ ನೇರವಾಗಿ ಓಡಿದ ಎಂದು ಕೆಲವರು ಕಾಮೆಂಟ್​ ಮಾಡಿದ್ದರೆ, ಅಲ್ಲಿನ ಕೆಟ್ಟ ರಸ್ತೆಯಿಂದಾಗಿ ಆತ ಕೆಳಗೆ ಬೀಳಬೇಕಾಯಿತು ಎಂದು ಇನ್ನು ಕೆಲವರು ಕಾಮೆಂಟ್​ ಮಾಡಿದ್ದಾರೆ. ಅಷ್ಟೊಂದು ಆತರ ಪಡಬೇಕಿತ್ತಾ ಅಂತಾನೂ ಯುವಕ ನಡೆಯನ್ನು ಕೆಲವರು ಟೀಕಿಸಿದ್ದಾರೆ.

ಅಂದಹಾಗೆ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB)ದ ಇತ್ತೀಚಿನ ವರದಿಯ ಪ್ರಕಾರ, 2023 ರಲ್ಲಿ ಉತ್ತರ ಪ್ರದೇಶವು ಅತಿ ಹೆಚ್ಚು ರೈಲ್ವೆ ಕ್ರಾಸಿಂಗ್ ಅಪಘಾತಗಳಿಗೆ ಸಾಕ್ಷಿಯಾಗಿದೆ. ದೇಶದ ಒಟ್ಟು 2,483 ಪ್ರಕರಣಗಳಲ್ಲಿ 1,025 ಪ್ರಕರಣಗಳು ಉತ್ತರ ಪ್ರದೇಶಕ್ಕೆ ಸಂಬಂಧಿಸಿವೆ. ಇನ್ನು ಸಾವಿನ ವಿಚಾರಕ್ಕೆ ಬಂದರೆ, ದೇಶಾದ್ಯಂತ ಒಟ್ಟು 2,242 ಸಾವುಗಳಲ್ಲಿ ಉತ್ತರ ಪ್ರದೇಶಲ್ಲೇ 1,007 ಸಾವುಗಳು ಸಂಭವಿಸಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net