ನೋಡಿಗ ನಾಟಕ ಮಾಡ್ತಾನೆ... ಮೈಕ್​ ಆನ್​ನಲ್ಲಿರುವುದನ್ನು ಮರೆತು ಬಾಬರ್​ ಕಾಲೆಳೆದ ರಮೀಜ್​ ರಾಜಾ! Ramiz Raja

Ramiz Raja
Published on

Ramiz Raja : ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಅಜಮ್ ತಮ್ಮ ಕಳಪೆ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ಭಾನುವಾರ ಪ್ರಾರಂಭವಾದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 23 ರನ್​ಗೆ ಔಟಾದರು. ಉತ್ತಮ ಆರಂಭ ಪಡೆದರು ಕೂಡ ಅದನ್ನು ದೊಡ್ಡ ಸ್ಕೋರ್ ಆಗಿ ಪರಿವರ್ತಿಸುವಲ್ಲಿ ವಿಫಲರಾದರು. ಆದಾಗ್ಯೂ, ಬಾಬರ್​ ಅವರು ಒಂದು ವಿಶೇಷ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಅದೇನೆಂದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 3,000 ರನ್ ಗಳಿಸಿದ ಏಷ್ಯಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಅವರು ಇತಿಹಾಸ ಸೃಷ್ಟಿಸಿದರು.

ಈ ಪಂದ್ಯದಲ್ಲಿ ಬಾಬರ್ ಅವರು ಬ್ಯಾಟಿಂಗ್ ಮಾಡುತ್ತಿದ್ದಾಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ರಮೀಜ್ ರಾಜಾ ಮಾಡಿದ ಕಾಮೆಂಟ್‌ಗಳು ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಅಲ್ಲದೆ, ರಮೀಜ್ ಅವರ ಹೇಳಿಕೆಗೆ ಬಾಬರ್ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನಿಂಗ್ಸ್‌ನ 49ನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ಈ ಓವರ್ ಅನ್ನು ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಸೆನುರನ್ ಮುತ್ತುಸ್ವಾಮಿ ಮಾಡಿದರು. ಈ ವೇಳೆ ಬಾಬರ್ ಅವರು 1 ರನ್ ವೈಯಕ್ತಿಕ ಸ್ಕೋರ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಈ ಓವರ್‌ನ ಮೊದಲ ಚೆಂಡನ್ನು ಬಾಬರ್ ರಕ್ಷಣಾತ್ಮಕವಾಗಿ ಆಡಿದರು. ಆದರೆ, ಚೆಂಡು ಬ್ಯಾಟ್‌ಗೆ ತಗುಲಿದೆ ಎಂದು ಭಾವಿಸಿದ ಫೀಲ್ಡರ್‌ಗಳು ಔಟ್‌ಗೆ ಮನವಿ ಮಾಡಿದರು, ಆದರೆ ಅಂಪೈರ್ ಅದನ್ನು ಔಟ್ ಎಂದು ನೀಡಿದರು.

ಈ ವೇಳೆ ಬಾಬರ್ ಅವರು ತಕ್ಷಣ ರಿವ್ಯೂ ತೆಗೆದುಕೊಂಡರು. ಥರ್ಡ್​ ಅಂಪೈರ್​ ಪರಿಶೀಲನೆ ನಡೆಸಿದಾಗ ನಾಟೌಟ್​ ಎಂದು ತೀರ್ಪು ನೀಡಿದರು. ಆದಾಗ್ಯೂ, ಈ ಸಮಯದಲ್ಲಿ ರಮೀಜ್ ರಾಜಾ ಅವರು ಬಾಬರ್​ ಬಗ್ಗೆ ಅನುಚಿತ ಕಾಮೆಂಟ್‌ಗಳನ್ನು ಮಾಡಿದರು. ನೋಡಿಗ ಅಂಪೈರ್​ ಏನಾದರೂ ಔಟ್​ ಕೊಟ್ಟರೆ, ಬಾಬರ್ ಅಲ್ಲೇ ನಾಟಕ ಮಾಡ್ತಾನೆ. ಆತ ತೆಗೆದುಕೊಂಡಿರುವ ಡಿಆರ್‌ಎಸ್ ನಿಷ್ಪ್ರಯೋಜಕ ಎಂದು ಅವರು ರಮೀಜ್​ ರಾಜಾ ಹೇಳಿದರು.

ಪ್ರಸ್ತುತ, ರಮೀಜ್ ರಾಜಾ ಅವರು ಆಡಿರುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಬಾಬರ್ ಅವರ ಅಭಿಮಾನಿಗಳು ರಮೀಜ್ ಅವರನ್ನು ಟೀಕಿಸುತ್ತಿದ್ದಾರೆ. ಪಾಕಿಸ್ತಾನದ ಮಾಜಿ ಆಟಗಾರನಾಗಿ ನೀವು ತಮ್ಮದೇ ಆಟಗಾರನ ವಿರುದ್ಧ ಈ ರೀತಿ ಮಾತನಾಡಿದ್ದು ಸರಿಯಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಆದಾಗ್ಯೂ, ಕೆಲವರು ರಮೀಜ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಮೈಕ್ ಆಫ್ ಆಗಿದೆ ಎಂದು ಭಾವಿಸಿ ಅವರು ಮಾತನಾಡಿರಬಹುದು. ಅದೊಂದು ತಮಾಷೆ ಅಷ್ಟೇ ಎನ್ನುತ್ತಿದ್ದಾರೆ.

ಇನ್ನು ಮೊದಲ ದಿನದಾಟದ ಅಂತ್ಯಕ್ಕೆ ಪಾಕಿಸ್ತಾನ 5 ವಿಕೆಟ್ ನಷ್ಟಕ್ಕೆ 313 ರನ್ ಗಳಿಸಿದೆ. ಮೊಹಮ್ಮದ್ ರಿಜ್ವಾನ್ (62) ಮತ್ತು ಸಲ್ಮಾನ್ ಅಲಿ ಅಘಾ (52) ಕ್ರೀಸ್ ನಲ್ಲಿದ್ದರು. ಇಮಾಮ್-ಉಲ್-ಹಕ್ (93) ಮತ್ತು ನಾಯಕ ಶಾನ್ ಮಸೂದ್ (76) ಅರ್ಧಶತಕ ಗಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net