

ನಾಗ್ಪುರ: ಕೋವಿಡ್-19 ಸೋಂಕಿಗೆ ತುತ್ತಾಗಿರುವ ಆತಂಕದ ಹಿನ್ನೆಲೆಯಲ್ಲಿ ಕ್ವಾರಂಟೈನ್ಗೆ ಒಳಗಾಗಲು ಮಹಿಳಾ ಪೊಲೀಸ್ ಪೇದೆಯೊಬ್ಬರು ತಮ್ಮ ಪ್ರಿಯತಮನನ್ನೇ ಗಂಡನೆಂದು ಬಿಂಬಿಸಿ, ಸಿಕ್ಕಿಬಿದ್ದಿದ್ದಾರೆ.
ನಾಗ್ಪುರ ಪೊಲೀಸ್ ಠಾಣೆಯೊಂದರಲ್ಲಿ ಮಹಿಳಾ ಪೇದೆಯೊಬ್ಬರ ಸಹೋದ್ಯೋಗಿಯೊಬ್ಬರಲ್ಲಿ ಕರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಕ್ವಾರಂಟೈನ್ಗೆ ಒಳಗಾಗುವಂತೆ ಮಹಿಳಾ ಪೇದೆಗೂ ಸೂಚಿಸಲಾಗಿತ್ತು. ಆದರೆ ಅವಿವಾಹಿತಳಾಗಿದ್ದರೂ ತನ್ನ ವಿವಾಹಿತ ಪ್ರಿಯತಮನೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಕಾರಣ ಆತನನ್ನೂ ಕ್ವಾರಂಟೈನ್ಗೆ ಕರೆದೊಯ್ಯಬೇಕು ಎಂಬುದು ಮಹಿಳಾ ಪೇದೆಯ ಬಯಕೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಅವರು ತಮ್ಮ ಪ್ರಿಯತಮನನ್ನು ತಮ್ಮ ಪತಿಯೆಂದು ಹೇಳಿ ಪೊಲೀಸ್ ತರಬೇತಿ ಕೇಂದ್ರದಲ್ಲಿ ವ್ಯವಸ್ಥೆಗೊಳಿಸಲಾಗಿದ್ದ ಕೇಂದ್ರದಲ್ಲಿ ಇಬ್ಬರೂ ಒಟ್ಟಾಗಿ ಕ್ವಾರಂಟೈನ್ಗೆ ಒಳಗಾಗಿದ್ದರು.
ಇತ್ತ ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ಪತಿ ಮೂರು ದಿನಗಳಿಂದ ಮನೆಗೆ ಬಾರದ್ದರಿಂದ ಆತಂಕಗೊಂಡ ಮಹಿಳಾ ಪೇದೆಯ ಪ್ರಿಯತಮನ ಪತ್ನಿ ಆತನಿಗಾಗಿ ಹುಡುಕಾಡಲಾರಂಭಿಸಿದ್ದಳು. ಕೋವಿಡ್ ಕ್ವಾರಂಟೈನ್ಗೆ ಒಳಗಾಗಿರುವ ಶಂಕೆಯಲ್ಲಿ ಎಲ್ಲ ಆಸ್ಪತ್ರೆಗಳನ್ನೂ ತಡಕಾಡಿದ್ದಳು. ಕೊನೆಗೆ ಪೊಲೀಸ್ ತರಬೇತಿ ಕೇಂದ್ರದ ಕ್ವಾರಂಟೈನ್ ಕೇಂದ್ರಕ್ಕೆ ಬಂದಾಗ ಪತಿ ಹಾಗೂ ಆತನ ಪ್ರೇಯಸಿಯ ಆಟ ಬಯಲಾಗಿತ್ತು.
ಆದರೆ, ಆಕೆಗೆ ಪತಿಯನ್ನು ನೋಡಲು ಕೇಂದ್ರದೊಳಗೆ ಹೋಗಲು ಅವಕಾಶ ನಿರಾಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆಕೆ ತನ್ನ ಪತಿಯ ವಿರುದ್ಧ ಬಜಾಜ್ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಅಲ್ಲದೆ, ಪೊಲೀಸ್ ಆಯುಕ್ತ ಭೂಷಣ್ಕುಮಾರ್ ಉಪಾಧ್ಯಾಯ ಅವರನ್ನು ಭೇಟಿಯಾಗಿ ಸಹಾಯ ಯಾಚಿಸಿದ್ದಳು. ಈ ಹಿನ್ನೆಲೆಯಲ್ಲಿ ಘಟನೆಯ ಕುರಿತು ತನಿಖೆ ನಡೆಸುವಂತೆ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.
ಇದನ್ನೂ ಓದಿ: ಮೂವರು ಬೈಕ್ ಕಳ್ಳರ ಬಂಧನ
ಅದರಂತೆ ಜೋನ್ II ಡಿಸಿಪಿ ವಿವೇಕ್ ಮಸಾಲ್ ಅವರು ತನಿಖೆ ಆರಂಭಿಸಿದ್ದಾರೆ. ಜತೆಗೆ ಪೊಲೀಸ್ ಪೇದೆಯ ಪ್ರಿಯಕರನನ್ನು ಬೇರೊಂದು ಕ್ವಾರಂಟೈನ್ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ.
ಕಳೆದ ವರ್ಷದ ಅಕ್ಟೋಬರ್ನಲ್ಲಿ ಸರ್ಕಾರಿ ಯೋಜನೆಯೊಂದರಲ್ಲಿ ಮಹಿಳಾ ಪೇದೆ ಮತ್ತು ಅಂಚೆ ಇಲಾಖೆಯ ಅಧಿಕಾರಿ ಒಟ್ಟಾಗಿ ಕೆಲಸ ಮಾಡಬೇಕಾಗಿ ಬಂದಿತ್ತು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಅದು ದೈಹಿಕ ಸಂಪರ್ಕ ಬೆಳೆಸುವವರೆಗೂ ಮುಂದುವರಿದಿತ್ತು ಎನ್ನಲಾಗಿದೆ.