ಮದ್ವೆ ಮನೆಯಲ್ಲಿ ಡಾನ್ಸ್​ ಮಾಡುತ್ತಲೇ ಕುಸಿದುಬಿದ್ದ ಮಹಿಳೆ: ಕುಟುಂಬವನ್ನು ಆಘಾತಕ್ಕೆ ದೂಡಿದ ವೈದ್ಯರ ಹೇಳಿಕೆ

Telangana Woman Rani
ಮೃತ ರಾಣಿ
Published on

ಹೈದರಾಬಾದ್​: ಮದುವೆ ಸಂಭ್ರಮದಲ್ಲಿ ಡಾನ್ಸ್​ ಮಾಡುವಾಗ ಕುಸಿದುಬಿದ್ದು ಮಹಿಳೆಯೊಬ್ಬಳು ಮೃತಪಟ್ಟಿರುವ ಆತಂಕಕಾರಿ ಘಟನೆ ತೆಲಂಗಾಣದ ಖಮ್ಮಮ್​ ಜಿಲ್ಲೆಯ ಅಲ್ಲಿಪುರಂನಲ್ಲಿ ನಡೆದಿದ್ದು, ಇತ್ತೀಚೆಗೆ ದೇಶದಲ್ಲಿ ಕುಸಿದುಬಿದ್ದು ಸಾಯುತ್ತಿರುವ ಪ್ರಕರಣಗಳ ಸಾಲಿಗೆ ಇದು ಸೇರಿಕೊಂಡಿದೆ.

ಮದುವೆ ಮನೆಯಲ್ಲಿ ಕುಸಿದುಬಿದ್ದ ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. ಮಹಿಳೆಯು ಬ್ರೈನ್​ ಸ್ಟ್ರೋಕ್​ನಿಂದ ಸಾವಿಗೀಡಾಗಿದ್ದಾಳೆ ಎಂದು ವೈದ್ಯರು ತಿಳಿಸುತ್ತಿದ್ದಂತೆ ಕುಟುಂಬಸ್ಥರು ಆಘಾತಕ್ಕೀಡಾದರು.

ಮೃತಳನ್ನು ರಾಣಿ ಎಂದು ಗುರುತಿಸಲಾಗಿದೆ. ಸಂಬಂಧಿಕರ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ ರಾಣಿ, ತುಂಬಾ ಉತ್ಸಾಹದಿಂದ ಸಂಬಂಧಿಕರೊಂದಿಗೆ ಡಾನ್ಸ್ ಮಾಡುತ್ತಿದ್ದಳು. ಆದರೆ, ಇದ್ದಕ್ಕಿದ್ದಂತೆ ರಾಣಿ ಕುಸಿದುಬಿದ್ದಳು. ಈ ವೇಳೆ ಸಂತೋಷ ತುಂಬಿದ್ದ ಮದುವೆ ಮನೆಯಲ್ಲಿ ಆತಂಕ ಆವರಿಸಿತು.

ರಾಣಿ ಮೃತಪಟ್ಟಿದ್ದಾಳೆ ಎಂದು ತಿಳಿಯುತ್ತಿದ್ದಂತೆ ಸಂಬಂಧಿಕರು ಹಾಗೂ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿತು. ಮಂಗಳವಾದ್ಯ ಮೊಳಗುತ್ತಿದ್ದ ಮದುವೆ ಮನೆಯಲ್ಲಿ ನೀರವ ಮೌನ ಆವರಿಸಿತು. ಮದುವೆ ಸಂಭ್ರಮವನ್ನು ನಿಲ್ಲಿಸಲಾಯಿತು. ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net