200 ಅಡಿ ಎತ್ತರದ ಟವರ್ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೊಲೀಸರಿಗೇ ಹೆದರಿಸಿದ ಮಹಿಳೆ!

ಚಚಚ
Published on

ಚೆನ್ನೈ: ಗಂಡನ ಬಗ್ಗೆ ಇದ್ದ ಸಿಟ್ಟಿನಿಂದಾಗಿ ಮಹಿಳೆಯೊಬ್ಬಳು ಮೊಬೈಲ್ ಟವರ್ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿರುವ ಘಟನೆ ತಮಿಳುನಾಡಿನ ಪೂನಮಲ್ಲಿಯಲ್ಲಿ ನಡೆದಿದೆ. ಆದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದ್ದು ಗಂಡನಿಗಲ್ಲ ಬದಲಾಗಿ ಪೊಲೀಸರಿಗೆ!

ರಾಜುಲಾ(40) ಹೆಸರಿನ ಮಹಿಳೆ ಮದುವೆಯಾಗಿ ವಯಸ್ಸಿಗೆ ಬಂದ ಮಕ್ಕಳಿದ್ದಾರೆ. ಆದರೆ ಗಂಡನೊಂದಿಗೆ ಜಗಳ ಆಡಿಕೊಂಡಿದ್ದ ಆಕೆ ಅವನಿಂದ ದೂರಾಗಿ ಕನ್ಯಾಕುಮಾರಿಗೆ ತೆರಳಿ ಅಲ್ಲಿ ಜೀವನ ನಡೆಸುತ್ತಿದ್ದಳಂತೆ. ಇತ್ತೀಚೆಗೆ ಮತ್ತೆ ಗಂಡ ರಾಜೇಶ ಇದ್ದ ತಿರುವೇಕಾಡಿಗೆ ಬಂದು ಅಲ್ಲಿ ಗಂಡನೊಂದಿಗೆ ಜಗಳ ಆರಂಭಿಸಿದ್ದಾಳೆ. ಅದಾದ ಮೇಲೆ ತಾನೇ ತಿರುವೇಕಾಡು ಪೊಲೀಸ್ ಠಾಣೆಗೆ ತೆರಳಿ ಗಂಡನ ವಿರುದ್ಧ ದೂರು ನೀಡಲು ಮುಂದಾಗಿದ್ದಾಳೆ.

ಆದರೆ ತಿರುವೇಕಾಡು ಪೊಲೀಸರು ದೂರು ಸ್ವೀಕರಿಸಿಲ್ಲ. ನೀವು ಪೂನಮಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಎಂದು ಕಳುಹಿಸಿಕೊಟ್ಟಿದ್ದಾರೆ. ಆದರೆ ಪೂನಮಲ್ಲಿಯಲ್ಲೂ ಆಕೆಯ ದೂರನ್ನು ಪೊಲೀಸರು ಸ್ವೀಕರಿಸಿಲ್ಲವಂತೆ. ಇದರಿಂದ ಸಿಟ್ಟಿಗೆದ್ದ ಆಕೆ ಹತ್ತಿರದ ಮೊಬೈಲ್ ಟವರ್​ ಅನ್ನು ಹತ್ತಿದ್ದಾಳೆ. 200 ಅಡಿ ಅತ್ತರ ಟವರ್​ನಲ್ಲಿ ಸುಮಾರು 80 ಅಡಿ ಎತ್ತರ ಹತ್ತಿ ಅಲ್ಲಿಂದ ಜಿಗಿಯುವುದಾಗಿ ಹೇಳಲಾರಂಭಿಸಿದ್ದಾಳೆ. ನನಗೆ ನನ್ನ ಗಂಡನಿಂದ ಅನ್ಯಾಯವಾಗಿದೆ. ಆದರೆ ಪೊಲೀಸರು ನ್ಯಾಯ ಕೊಡಿಸುತ್ತಿಲ್ಲ ಅದಕ್ಕಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎನ್ನಲಾರಂಭಿಸಿದ್ದಾಳೆ. ಪೊಲೀಸರು ಮನವೊಲಿಸಲು ಅದೆಷ್ಟೇ ಪ್ರಯತ್ನಿಸಿದರೂ ಆಕೆ ಕೆಳಗಿಳಿಲ್ಲ. ಆಕೆಯ ಮಕ್ಕಳನ್ನು ಕರೆಸಿ ಬುದ್ಧಿ ಹೇಳಿಸಿದರೂ ಆಕೆ ಇಳಿದಿಲ್ಲ.

ನಂತರ ಪೂನಮಲ್ಲಿ ಪಟ್ಟಣದ ಡಿಎಂಕೆ ಕಾರ್ಯದರ್ಶಿ ರವಿ ಕುಮಾರ್ ಅವರು ನಂತರ ಶಾಸಕ ಉದಯನಿಧಿ ಸ್ಟಾಲಿನ್ ಅವರಿಗೆ ಕರೆ ಮಾಡಿದ್ದಾರೆ. ಅದಾದ ನಂತರ ಸ್ಟಾಲಿನ್ ಅವರ ಆದೇಶದಂತೆ ತಕ್ಷಣ ಮಹಿಳೆಯ ಗಂಡನ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ ನಂತರ ಆಕೆ ಕೆಳಗಿಳಿದಿದ್ದಾಗಿ ಹೇಳಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net